ಚಂದ್ರವಳ್ಳಿ ನ್ಯೂಸ್, ಸಿರಿಗೆರೆ:
ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಕಡ್ಲೆಗುದ್ದು ಇಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ 10ನೇ ತರಗತಿಯಲ್ಲಿ ಉತ್ತೀರ್ಣರಾದ 46 ವಿದ್ಯಾರ್ಥಿಗಳಿಗೆ ಟಿಸಿ, ಅಂಕಪಟ್ಟಿ, ನಡೆತ ಪ್ರಮಾಣ ಪತ್ರ, ವ್ಯಾಸಂಗ ಪ್ರಮಾಣ ಪತ್ರ ಮುಂತಾದ ಮುಂದಿನ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಎಲ್ಲ ದಾಖಲೆಗಳನ್ನು ವಿತರಿಸಿ ಅವರ ಭವಿಷ್ಯಕ್ಕೆ ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೋಷಕರಾದ ದೇವರಾಜು, ಕುಮಾರಸ್ವಾಮಿ, ಕರಿಬಸಪ್ಪ, ರಾಮಚಂದ್ರಪ್ಪ ಮುಂತಾದವರು ಮಾತನಾಡಿ ವಸತಿ ಶಾಲೆಯ ಮೂಲಭೂತ ಸೌಕರ್ಯಗಳು, ಮಕ್ಕಳ ಸುರಕ್ಷತೆಗೆ ತೆಗೆದುಕೊಂಡಿರುವ ಕ್ರಮಗಳು, ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಲಕ್ಷಾಂತರ ರೂಪಾಯಿ ಡೊನೇಷನ್ ಪಡೆಯುವ ಯಾವುದೇ ಖಾಸಗಿ ಆಂಗ್ಲ ಮಾಧ್ಯಮದ ಶಾಲೆಗಳಿಗಿಂತ ಅತ್ಯುತ್ತಮವಾದ ವಿದ್ಯಾಭ್ಯಾಸವನ್ನು ಉಚಿತವಾಗಿ ಸರ್ಕಾರದ ವಸತಿ ಶಾಲೆಯಲ್ಲಿ ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಮ್ಮ ಮಕ್ಕಳ ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಿದ ಎಲ್ಲಾ ಬೋಧಕ ಬೋಧಕರ ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಪ್ರಾಂಶುಪಾಲ ರಮೇಶ್ ಆರ್ ಮಾತನಾಡಿ ವಸತಿ ಶಾಲೆ ಆರಂಭವಾದ ನಂತರ 10ನೇ ತರಗತಿಗಳ 4 ಬ್ಯಾಚುಗಳು ಹೊರ ಹೋಗಿದ್ದು ಎಲ್ಲಾ ಸಾಲಿನಲ್ಲೂ ಶೇಕಡ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯಲಾಗಿದೆ.
ಇಲ್ಲಿಯವರೆಗೆ 10ನೇ ತರಗತಿ ಪರೀಕ್ಷೆ ಬರೆದ 180 ವಿದ್ಯಾರ್ಥಿಗಳಲ್ಲಿ 171 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ ಪ್ರಥಮ ದರ್ಜೆಯಲ್ಲಿ ಹಾಗೂ 9 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇಂತಹ ಫಲಿತಾಂಶ ಪಡೆಯಲು ಶಾಲೆಯ ವಸತಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ನುರಿತ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರ ಸೇವೆಯನ್ನು ಶ್ಲಾಘಿಸಿದರು.
ಮಕ್ಕಳಿಗೆ 10ನೇ ತರಗತಿ ನಂತರ ಕನಿಷ್ಠ ಐದು ವರ್ಷ ವಿದ್ಯಾಭ್ಯಾಸ ಮಾಡಿಸುವಂತೆ ಪೋಷಕರಲ್ಲಿ ಕೋರಿದರು. ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಒಳ್ಳೆಯ ಪ್ರಜೆಗಳಾಗಲು ಕರೆ ನೀಡಲಾಯಿತು.
ಟಾಪ್ 05 ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನ ಪುಸ್ತಕವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರಗಳಾದ ಸಿದ್ದಪ್ಪ ಟಿ, ಜಯಪ್ಪ ಎಂ ಬಿ, ರಮೇಶ್, ಪ್ರಕಾಶ್, ರಮೇಶ ನಾಯ್ಕ್, ಸಂಗಮೇಶ್, ಮಂಜುಳಾ, ರಾಜೇಶ್ವರಿ ರವರು ಹಾಜರಿದ್ದರು.
ಕಾರ್ಯಕ್ರಮ ನಿರೂಪಿಸಿದ ಇಂಗ್ಲಿಷ್ ಶಿಕ್ಷಕ ಪ್ರಕಾಶ್ ಚಿತ್ರದುರ್ಗ ತಾಲೂಕಿನಲ್ಲಿ ನಮ್ಮ ಶಾಲೆಯು ಶೇಕಡ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದ ಏಕೈಕ ಶಾಲೆಯಾಗಿದೆ. ಹೆಣ್ಣು ಮಕ್ಕಳನ್ನು ಸೇರಿ ಎಲ್ಲ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವಂತೆ ಪೋಷಕರಲ್ಲಿ ಕೋರಿದರು.
ಉತ್ತಮ ಫಲಿತಾಂಶ ಪಡೆಯಲು ಶೈಕ್ಷಣಿಕ ವರ್ಷದ ಉದ್ದಕ್ಕೂ ಅನುಸರಿಸಿದ ಕ್ರಮಗಳನ್ನು ಜಯಪ್ಪ ಎಂ ಬಿ ಗಣಿತ ಶಿಕ್ಷಕರು ಸಭೆಯಲ್ಲಿ ವಿವರಿಸಿದರು ಮತ್ತು ಮಕ್ಕಳ ಭವಿಷ್ಯಕ್ಕೆ ಶುಭಾಶಯ ಕೋರಿದರು. ಪೋಷಕರು ಸೇರಿ ವಸತಿ ಶಾಲೆಯ ಪ್ರಾಂಶುಪಾಲರು ಮತ್ತು ಬೋಧಕ ಬೋದಕೇತರ ಸಿಬ್ಬಂದಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.