ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂತಕವಿ ಕನಕದಾಸ ಮತ್ತು ತತ್ವಪದ ಅಧ್ಯಯನ ಕೇಂದ್ರದಿಂದ ವಾರ್ಷಿಕವಾಗಿ ಕೊಡಮಾಡುವ ಕನಕ ಗೌರವ ಮತ್ತು ಕನಕ ಯುವ ಪುರಸ್ಕಾರಕ್ಕೆ ನಾಲ್ಕು ವರ್ಷಗಳ ಅವಧಿಗೆ ಪರಿಣಿತರ ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ.
ಕನಕ ಗೌರವ ಪುರಸ್ಕಾರವನ್ನು 50 ವರ್ಷಕ್ಕೂ ಮೇಲ್ಪಟ್ಟ ಹಿರಿಯ ವಿದ್ವಾಂಸರಿಗೆ ಕನಕ ಗೌರವ ಪುರಸ್ಕಾರವನ್ನು ನೀಡಲಾಗುತ್ತದೆ. ಈ ಪುರಸ್ಕಾರದ ಮೊತ್ತ ರೂ.75,000/-ಗಳು. ಇದರೊಂದಿಗೆ ಪ್ರಶಸ್ತಿ ಪುತ್ಥಳಿ, ಪ್ರಶಸ್ತಿ ಫಲಕ, ಶಾಲು, ಫಲತಾಂಬೂಲವನ್ನು ನೀಡಲಾಗುತ್ತದೆ. ಈಗಾಗಲೇ ಕನಕದಾಸರ ಬಗ್ಗೆ ಆಳವಾದ ಅಧ್ಯಯನ ಮಾಡಿ ಪ್ರಕಟಣೆಗಳನ್ನು ಹೊರತಂದಿರುವ ಹಿರಿಯ ವಿದ್ವಾಂಸರನ್ನು ಪುರಸ್ಕಾರಕ್ಕೆ ಪರಿಗಣಿಸಲಾಗುತ್ತದೆ.
ಕನಕ ಯುವ ಪುರಸ್ಕಾರವನ್ನು 40 ವರ್ಷದೊಳಗಿನ ಕಿರಿಯ ವಿದ್ವಾಂಸರಿಗೆ ಕನಕ ಯುವ ಪುರಸ್ಕಾರವನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯ ಮೊತ್ತ ರೂ.50,000/-ಗಳು. ಇದರೊಂದಿಗೆ ಪ್ರಶಸ್ತಿ ಪುತ್ಥಳಿ, ಪ್ರಶಸ್ತಿ ಫಲಕ, ಶಾಲು, ಫಲತಾಂಬೂಲವನ್ನು ನೀಡಲಾಗುತ್ತದೆ. ಕನಕದಾಸರ ಬಗ್ಗೆ ಅಧ್ಯಯನ ಪೂರ್ಣ ಅಭ್ಯಾಸ ಮಾಡುತ್ತಿರುವ ಪ್ರಕಟಣೆಗಳನ್ನು ಹೊರತರುತ್ತಿರುವ, ಕನಕದಾಸರ ಸಾಹಿತ್ಯ – ಸಂದೇಶಗಳನ್ನು ಪ್ರಚಾರ ಮಾಡುತ್ತಿರುವ ಯುವ ವಿದ್ವಾಂಸರನ್ನು ‘ಕನಕ ಯುವ ಪುರಸ್ಕಾರ‘ಕ್ಕೆ ಪರಿಗಣಿಸಲಾಗುತ್ತದೆ.
2021-22 ನೇ ಸಾಲಿನಲ್ಲಿ ಡಾ.ಅನಿಲ್‍ಕುಮಾರ್, 2022-23 ನೇ ಸಾಲಿನಲ್ಲಿ ಡಾ. ಚಿಕ್ಕಮಗಳೂರು ಗಣೇಶ 2023-24 ನೇ ಸಾಲಿನಲ್ಲಿ ಡಾ.ಉಮೇಶ ಎಂ. (ಉಬಾಮ) ಇವರು ಕನಕ ಯವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ತತ್ವಪದಕಾರರ 18 ಸಂಪುಟಗಳ ಬಿಡುಗಡೆ:ಕರ್ನಾಟಕ ತತ್ವಪದಕಾರರ ಸಮಗ್ರ ಸಾಹಿತ್ಯ ಪ್ರಕಟಣೆ ಯೋಜನೆಯ 50 ತತ್ವಪದ ಸಂಪುಟಗಳ ಪ್ರಕಟಣಾ ಮಾಲೆಯಡಿ 32 ಸಂಪುಟಗಳು 2019ರಲ್ಲಿ ಹೊರಬಂದಿದ್ದವು. ಈಗಾಗಲೇ 32 ಸಂಪುಟಗಳು ಕರ್ನಾಟಕದ ಜನ ಸಮುದಾಯದ ಮೆಚ್ಚುಗೆಗೆ ಪಾತ್ರವಾಗಿದೆ. ಉಳಿದ 18 ಸಂಪುಟಗಳು ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದ್ದ ಬಾಕಿ 18 ಸಂಪುಟಗಳು ಈಗ ಸಿದ್ಧವಾಗಿವೆ.
ಡಾ. ನಟರಾಜ ಬೂದಾಳ್ ಅವರ ಯೋಜನಾ ಸಂಪಾದಕತ್ವದಲ್ಲಿ ಡಾ.ಕೆ.ನೀಲಾ ಅವರು ಸಂಪಾದಿಸಿರುವ ಕರಿಬಸವೇಶ್ವರ ಮತ್ತು ನೀಲಗ್ರೀವರ ತತ್ವಪದಗಳು, ಡಾ.ಪ್ರಭು ಖಾನಾಪುರ ಅವರು ಸಂಪಾದಿಸಿರುವ ಗುರುಬಸವಾರ್ಯ, ಚನ್ನಪ್ಪಕವಿ ಮತ್ತು ಇತರರ ತತ್ವಪದಗಳು, ಡಾ. ಪ್ರಭು ಖಾನಾಪುರ ಹಾಗೂ ಡಾ. ಜಗನ್ನಾಥ ಹೆಬ್ಬಾಳೆ ಅವರು ಸಂಪಾದಿಸಿರುವ ಕ್ವಾನಳ್ಳಿ ಹೊನ್ನಪ್ಪ ಮಹಾರಾಜರು ಮತ್ತು ಇತರರ ತತ್ವಪದಗಳು, ಡಾ. ಮೀನಾಕ್ಷಿ ಬಾಳಿ ಅವರು ಸಂಪಾದಿಸಿರುವ ಬಸವಣ್ಣ, ಅಲ್ಲಮ ಮತ್ತು ಇತರರ ತತ್ವಪದಗಳು, ಡಾ. ಬಿ. ನಂಜುಂಡಸ್ವಾಮಿ ಅವರು ಸಂಪಾದಿಸಿರುವ ಬಂಡೆಗುರು, ಸೋದೆ ಸದಾಶಿವರಾಯ ಮತ್ತು ಇತರರ ತತ್ವಪದಗಳು.
ಡಾ. ಎಸ್. ನಟರಾಜ ಬೂದಾಳ್ ಅವರು ಸಂಪಾದಿಸಿರುವ ಮೈಲಾರ ಬಸವಲಿಂಗ ಶರಣರು ಮತ್ತು ಇತರರ ತತ್ವಪದಗಳು, ಡಾ. ಬಸರವಾಜ ಸಬರದ ಅವರು ಸಂಪಾದಿಸಿರುವ ಹೇರೂರ ವಿರುಪಣ್ಣ ಮತ್ತು ಇತರರ ತತ್ವಪದಗಳು, ಡಾ. ಜೆ. ಕರಿಯಪ್ಪ ಮಾಳಗೆ ಅವರು ಸಂಪಾದಿಸಿರುವ ಕರೀಂಪೀರ್ ಮತ್ತು ಇತರರ ತತ್ವಪದಗಳು, ಡಾ. ವೈ.ಬಿ. ಹಿಮ್ಮಡಿ ಅವರು ಸಂಪಾದಿಸಿರುವ ಅಲಭೈರಿ ಮತ್ತು ಇತರರ ತತ್ವಪದಗಳು, ಡಾ. ಕೆ. ನೀಲಾ ಅವರು ಸಂಪಾದಿಸಿರುವ ಸಾಲೋಟಗಿ ಶಿವಲಿಂಗೇಶ್ವರ ಮತ್ತು ಇತರರ ತತ್ವಪದಗಳು,
ಡಾ. ಎಂ.ಡಿ. ಒಕ್ಕುಂದ ಹಾಗೂ ಡಾ. ಚಂದ್ರನ್ನ ಸೊಬಟಿ ಅವರು ಸಂಪಾದಿಸಿರುವ ಅಮ್ಮಿಣಭಾವಿ ಅಯ್ಯಣ್ಯಜ್ಜ ಚಲವಾದಿ ಚಂದಪ್ಪ ಮತ್ತು ಇತರರ ತತ್ವಪದಗಳು, ಡಾ.ಪದ್ಮಾಲಯ ನಾಗರಾಜ ಅವರು ಸಂಪಾದಿಸಿರುವ ಅಚಲ ತತ್ವಪದಗಳು, ಡಾ. ನ. ಗುರುಮೂರ್ತಿ ಅವರು ಸಂವಾದಿಸಿರುವ ತಾವರೆಕೆರೆ ರಾಮನ ಧೂತರು ಮತ್ತು ಇತರರ ತತ್ವಪದಗಳು, ಡಾ. ಗಂಗಪ್ಪ ತಳವಾರ್ ಅವರು ಸಂಪಾದಿಸಿರುವ ಗಟ್ಟಿಹಳ್ಳಿ ಆಂಜನಪ್ಪನವರ ಸುಜ್ಞಾನಬೋಧ ತತ್ವಪದಗಳು, ಡಾ. ಪರಮಶಿವಯ್ಯ ಹೆಚ್ ಅವರು ಸಂವಾದಿಸಿರುವ ಗಟ್ಟಿಹಳ್ಳಿ ಆಂಜನಪ್ಪನವರ ಅಚಲಬೋಧ ತತ್ವಪದಗಳು,
ಡಾ. ಜಯಮಂಗಲ ಚಂದ್ರಶೇಖರ್ ಅವರು ಸಂಪಾದಿಸಿರುವ ಕೈವಾರ ನಾರೇಯಣಪ್ಪ ಮತ್ತು ಇತರರ ತತ್ವಪದಗಳು, ಡಾ. ಕೆ.ವಿ. ನಾಯಕ ಅವರು ಸಂಪಾದಿಸಿರುವ ಕೊಂಡಾರ್ಯ ನಾಗಾರ್ಯ ಮತ್ತು ಇತರರ ತತ್ವಪದಗಳು, ಡಾ. ಪದ್ಮಾಲಯ ನಾಗರಾಜ ಅವರು ಸಂಪಾದಿಸಿರುವ ಶ್ರೀಗುರು ಅಲ್ಲೀ ಸಾಹೇಬು ಮತ್ತು ಶಿಲವೇರಿ ಶಿವಪ್ಪನವರ ತತ್ವಪದಗಳ ಸಂಪುಟಗಳು ಬಿಡುಗಡೆಗೊಳ್ಳಲಿವೆ.
ನವೆಂಬರ್ 18 ರಂದು ಸಂಜೆ 5.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಸಂಸ್ಕøತಿ ಇಲಾಖೆಯು ಆಯೋಜಿಸುವ ಕನಕ ಜಯಂತಿ ಸಮಾರಂಭದಲ್ಲಿ ಕನಕ ಗೌರವ ಮತ್ತು ಕನಕ ಯುವಪುರಸ್ಕಾರವನ್ನು ಪ್ರದಾನ ಮಾಡಲಾಗುವುದು.
ಕನಕ ಪುರಸ್ಕಾರದ ಜೊತೆಗೆ ಸಮಗ್ರ ತತ್ವಪದ ಸಂಪುಟಗಳ 18 ಸಂಪುಟಗಳು ಸಹ ಇದೇ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳಲಿವೆ. ಪ್ರಶಸ್ತಿ ಪ್ರದಾನ ಮತ್ತು ಸಂಪುಟಗಳ ಬಿಡುಗಡೆಯನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ಅವರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉದಯ ಬಿ ಗರುಡಾಚಾರ್ ಅವರು ವಹಿಸಲಿದ್ದಾರೆ. ಈ ಸಮಾರಂಭದಲ್ಲಿ ಇತರೆ ಗಣ್ಯರೂ ಭಾಗವಹಿಸಲಿದ್ದಾರೆ ಎಂದು ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಕಾ.ತ. ಚಿಕ್ಕಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.