ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಂತಶ್ರೇಷ್ಟ ಭಕ್ತ ಕನಕದಾಸರ ಚಿಂತನೆಗಳು ಇಂದಿಗೂ ಪ್ರಸ್ತುತ. ಸಾಮಾಜಿಕ ಸಮಾನತೆ, ಮಾನವ ಧರ್ಮನಿಷ್ಠೆ, ಬಹುತ್ವದ ದೈವೋಪಾಸನೆ ಮತ್ತು ನೈತಿಕ ಬದುಕಿನ ಕುರಿತು ಅವರ ಸಂದೇಶವು ಇಂದಿನ ಸಮಾಜಕ್ಕೆ ದಾರೀದೀಪ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ಹೊಳಲ್ಕೆರೆ ರಸ್ತೆಯ ಕನಕವೃತ್ತದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂತಶ್ರೇಷ್ಟ ಭಕ್ತ ಕನಕದಾಸರ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಭಕ್ತಿ ಸಾಹಿತ್ಯ ಪರಂಪರೆಯಲ್ಲಿ ಕನಕದಾಸರದು ಪ್ರಮುಖ ಸ್ಥಾನ. ಪುರಂದರದಾಸರಂತೆ ಕನಕದಾಸರೂ ಮಹಾಜ್ಞಾನಿಗಳು. ಅವರು ಬರೀ ಕವಿಯಷ್ಟೆ ಆಗಿರಲಿಲ್ಲ. ಸಮಾಜ ಸುಧಾರಕ. ಪ್ರಸಿದ್ದ ಕೀರ್ತನಕಾರರು, ಜೊತೆಗೆ ಕರ್ನಾಟಕದ ಪ್ರಮುಖ ಹರಿದಾಸರು, ದಾರ್ಶನಿಕ ಹಾಗೂ ಮಾನವೀಯತೆಯ ಸಾಕಾರವಾಗಿದ್ದರು.
ಅವರ ಕೃತಿಗಳು ಭಕ್ತಿಯ ಪರಮೋನ್ನತ ಸ್ಥಿತಿ ತೋರಿಸುವುದರ ಜೊತೆಗೆ ಅದರ ಸಾಮಾಜಿಕ ಸಮಾನತೆ, ಮಾನವೀಯ ಮೌಲ್ಯಗಳು ಮತ್ತು ದೈವಭಕ್ತಿಯ ಸಾರ್ಥಕತೆಯ ಸಂದೇಶ ಸಾರಿ ನಿಂತಿವೆ. ಇವರು ಪುನರಂದರ ದಾಸರೊಡಗೂಡಿ ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದದ್ದು, ಈ ಹಿನ್ನೆಲೆಯಲ್ಲಿ ಕನಕದಾಸರು ಮತ್ತು ಪುರಂದರದಾಸರು ಕರ್ನಾಟಕ ಕೀರ್ತನಾ ಲೋಕದ ಅಶ್ವಿನಿ ದೇವತೆಗಳೆಂದು ಹೆಸರಾಗಿದ್ದಾರೆ ಎಂದರು.
ಕನಕದಾಸರು ಕೀರ್ತನಾಕಾರರೂ ಹೌದು, ಕವಿಯೂ ಹೌದು, ಕಾರಣ ಇವರ ರಚನೆಯ ಪ್ರಮುಖ ಕೃತಿಗಳಾದ ಹರಿಭಕ್ರಸಾರ, ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯಚರಿತ್ರೆ, ಮೊದಲಾದವುಗಳು ಇವರ ಕಾವ್ಯ ಶಕ್ತಿಯ ಕಾಣಿಕೆಗಳು. ಪ್ರಮುಖವಾಗಿ ಕನಕದಾಸರು ತನ್ನ ಹರಿಭಕ್ತರ ಸಾರದ ಮೂಲಕ ನೀತಿ, ನೇಮ, ಭಕ್ತಿ, ವೈರಾಗ್ಯಳನ್ನು ಕುರಿತು ಚಿಂತಿಸಿದರೆ, ಮೋಹನ ತರಂಗಿಣಿಯಲ್ಲಿ ಕೃಷ್ಣ ಚರಿತೆಯನ್ನು ನಿರೂಪಿಸುತ್ತಲ್ಲೇ ಶೃಂಗಾರ ರಸವನ್ನು ಅಲ್ಲಿ ಅಭಿವ್ಯಕ್ತಗೊಳಿಸುತ್ತಾರೆ. ಅವರ ಕೀರ್ತನೆಗಳಲ್ಲಿ ಸಾಮಾಜಿಕ ಮೇಲು-ಕೀಲು ಎಂಬ ತಾರತಮ್ಯ ಭಾವನೆಗೆ ಸ್ಪಷ್ಟ ಉತ್ತರವಿದೆ. ಭಕ್ತಿಯ ಮೂಲಕವೇ ಸಮಾನತೆ, ಸಹೋದರತ್ವ, ದೈವಾನ್ವೇಶಣೆ ಮತ್ತು ದೈವದ ಜೊತೆ ಸಂವಾದದ ಮಾರ್ಗವನ್ನೂ ಅವರು ಭೋದಿಸಿದರು ಎಂದರು.
ಕನಕದಾಸರ ಕಾವ್ಯಭಾಷೆ ಸರಳವಾಗಿದ್ದು, ಜಾನಪದೀಯವಾಗಿದೆ. ಅದು ನೇರವಾಗಿ ಜನಮನವನ್ನು ತಲುಪುತ್ತದೆ. ಅವರ ಪದ್ಯಗಳಲ್ಲಿರುವ ಸಂಗೀತಮಯತೆ, ನಾದಮಾಧುರ್ಯ ಮತ್ತು ದಾರ್ಶನಿಕ ಸಮನ್ವಯತೆಯ ಗುಣ ಈ ಲೋಕವೇ ಮೆಚ್ಚುವಂತಹದ್ದು, ಈ ಶೈಲಿಯು ಅವರನ್ನು ನಿತ್ಯಕಾಲೀನ ಸಂತ ಕವಿಯಾಗಿ ಮನುಕುಲಕ್ಕೆ ಕಾಣಿಸಿದೆ ಎಂದು ತಿಳಿಸಿದರು.
ಕನಕದಾಸರ ದಾರ್ಶನಿಕ ಕವಿತ್ವದ ಮಾರ್ಗದರ್ಶನ ಸಮ ಸಮಾಜದ ಜನಪದ ಕಟ್ಟಡಕ್ಕೆ ಭದ್ರ ಬುನಾದಿ ಒದಗಿಸುತ್ತಿರಲಿ. ನಾಳಿನ ಯುವಪೀಳಿಗೆ ಹಿಂದಣ ಹೆಜ್ಜೆಯನರಿತು ಮುನ್ನಡೆಯಲಿ. ಹಾಗೇ ಮಾನವನ ಉದ್ಧರಿಸುವ ಶಕ್ತಿಯಾಗಿ ಲೋಕದ ಎಲ್ಲ ದರ್ಶನಗಳ ವಿವೇಕವು ಸಮರಸವಾಗಿ ಒಗ್ಗೂಡಬೇಕು ಇದೇ ಬಾಳಿನ ತತ್ವವೂ ಆಗಬೇಕು ಇದಾದರೇ ಕನಕದಾಸರ ಜಯಂತಿ ಆಚರಣೆ ಸಾರ್ಧಕ ಎಂದರು.
ಸಂಸದ ಗೋವಿಂದ ಎಂ ಕಾರಜೋಳ ಮಾತನಾಡಿ, ಮಹನೀಯರ ಜಯಂತಿ ಆಚರಣೆಗಳು ಆಯಾ ಸಮುದಾಯಗಳಿಗೆ ಮಾತ್ರ ಸೀಮಿತವಾಗಬಾರದು. ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಜಯಂತಿ ಆಚರಿಸುವಂತಾಗಬೇಕು. ಹಿಂದುಳಿದ ಸಮುದಾಯಗಳನ್ನು ಮೇಲೆತ್ತಲು ಶಿಕ್ಷಣದಿಂದ ಮಾತ್ರ ಸಾಧ್ಯ. ಹಾಗಾಗಿ ಎಲ್ಲ ಪೋಷಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಕುವೆಂಪು ವಿಶ್ವವಿದ್ಯಾಲಯ ಕನ್ನಡ ಭಾರತಿ ಹಿರಿಯ ಪ್ರಾಧ್ಯಾಪಕ ಡಾ.ಜಿ.ಪ್ರಶಾಂತ ನಾಯಕ ಉಪನ್ಯಾಸ ನೀಡಿ, ಮಹನೀಯರ ಜಯಂತಿ ಆಚರಣೆಗಳು ನಮ್ಮ ಆತ್ಮಾವಲೋಕನದ ಜಯಂತಿಗಳು ಆಗಬೇಕು. ಸಮುದಾಯದ ಮಹನೀಯರು ಕೊಟ್ಟಂತಹ ಕೊಡುಗೆ ಹಾಗೂ ಅಂತಹ ಮಹನೀಯರ ದಾರಿಯಲ್ಲಿ ಹೇಗೆ ನಡೆಯಲು ಸಾಧ್ಯವಾಗಲಿದೆ ಎಂಬುದನ್ನೂ ಸಹ ಯೋಚನೆ ಮಾಡಬೇಕು. ಮಹನೀಯರನ್ನು ಜಯಂತಿಗಳಾಗಿ ನೆನಪು ಮಾಡಿಕೊಳ್ಳುವುದು ಮಾತ್ರವಲ್ಲ. ನಮ್ಮ ಆತ್ಮಶಕ್ತಿ, ವ್ಯಕ್ತಿತ್ವ, ಘನತೆ, ಸ್ವಾಭಿಮಾನ ಹಾಗೂ ಅವರ ಹಾದಿಗಳಲ್ಲಿ ನಡೆಯಬಹುದಾದ ರೀತಿಗಳನ್ನು ರೂಪಿಸಿಕೊಳ್ಳುವ ಕ್ರಮಗಳು ಆಗಬೇಕು ಎಂದು ಅಭಿಪ್ರಾಯಪಟ್ಟರು.
ಕನಕದಾಸರನ್ನು ಕವಿಯಾಗಿ, ಭಕ್ತನಾಗಿ, ದಾರ್ಶನಿಕವಾಗಿ, ವಿಮರ್ಶಕನಾಗಿ, ಮಾಕ್ರ್ಸ್‍ವಾದಿ ಚಿಂತಕನಾಗಿ ಹಾಗೂ ಸಮಾಜವಾದಿ ಚಿಂತಕನಾಗಿ ನೋಡಲಿಕ್ಕೆ ಸಾಧ್ಯವಿದೆ. ಆ ಸಂದರ್ಭದಲ್ಲಿಯೇ ಕನಕದಾಸರಲ್ಲಿ ವೈಚಾರಿಕಾ ಚಿಂತನೆಯನ್ನೂ ಕಾಣಬಹುದಾಗಿದೆ ಎಂದರು.
ಕುರುಬ ಸಮಾಜವನ್ನು ಎಸ್.ಟಿ. ಸೇರ್ಪಡೆ, ಕುರುಬ ಸಮುದಾಯವರಿಗೆ ಶವ ಸಂಸ್ಕಾರಕ್ಕಾಗಿ ಪ್ರತ್ಯೇಕವಾಗಿ ಜಿಲ್ಲಾ ಕೇಂದ್ರದಲ್ಲಿ 5 ಎಕರೆ ಹಾಗೂ ತಾಲ್ಲೂಕು ಕೇಂದ್ರ 2 ಎಕರೆ ಜಮೀನು ಮಂಜೂರು, ಸಮಾಜದ ಶೈಕ್ಷಣಿಕ ಚಟುವಟಿಕೆ ಉದ್ದೇಶಕ್ಕೆ ಜಿಲ್ಲೆಯ ಆರು ತಾಲ್ಲೂಕುಗಳ ಕೇಂದ್ರಸ್ಥಾನದಲ್ಲಿ ತಲಾ 5 ಎಕರೆ ಭೂಮಿಯನ್ನು ಬಡ ವಿದ್ಯಾರ್ಥಿಗಳ ಸೌಲಭ್ಯಕ್ಕಾಗಿ ಭೂಮಿಯನ್ನು ಮಂಜೂರು ಮಾಡಿ, ಈ ಭೂಮಿಯಲ್ಲಿ ಶಾಲೆ, ಕಾಲೇಜು, ವಿದ್ಯಾರ್ಥಿ ನಿಲಯ ನಿರ್ಮಿಸಿಕೊಳ್ಳಲು ಅನುವು ಮಾಡಿಕೊಡವುದು ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯ ಮನವಿಯನ್ನು ಜಿಲ್ಲಾ ಕುರುಬರ ಸಂಘದ ಕಾರ್ಯದರ್ಶಿ ಬಿ.ಟಿ.ಜಗದೀಶ್ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.
ಅದ್ದೂರಿ ಮೆರವಣಿಗೆ: ಸಂತಶ್ರೇಷ್ಟ ಕನಕದಾಸರ ಜಯಂತಿ ಅಂಗವಾಗಿ ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಜಿಲ್ಲಾ ಕುರುಬರ ಸಂಘದ ಕಚೇರಿವರೆಗೆ ವಿವಿಧ ಜಾನಪದ ಕಲಾ ತಂಡಗೊಂದಿಗೆ ಕನಕದಾಸರ ಭಾವಚಿತ್ರದ ಅದ್ಧೂರಿಯಾಗಿ ಮೆರವಣಿಗೆ ನಡೆಯಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ಕನಕಶ್ರೀ ಸೇವಾರತ್ನ ಪ್ರಶಸ್ತಿ ಪ್ರಧಾನ: ಜಿಲ್ಲಾ ಕುರುಬರ ಸಂಘದ ವತಿಯಿಂದ ಕಾಶಿವಿಶ್ವನಾಥ ಶೆಟ್ಟಿ, ಬಿ.ಎಸ್.ಸುರೇಶ್ ಬಾಬು, ಕೆ.ಟಿ.ಶಿವಕುಮಾರ್, ಈ.ಅಶೋಕ್, ಎನ್.ಅಶೋಕ್ ಅವರಿಗೆ ಕನಕಶ್ರೀ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು ಹಾಗೂ ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ 10 ಜನ ಸಮಾಜದ ಸಾಧಕರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ತುರುವನೂರಿನ ಕೆ.ಲಿಂಗಯ್ಯ ವಿರಚಿತ ಕನಕದಾಸರ ಚರಿತ್ರೆ ಮತ್ತು ಜ್ಞಾನಾಂಮೃತಸಾರ ಕೃತಿಗಳ ಲೋಕಾರ್ಪಣೆ ನಡೆಯಿತು. ಆಯಿತೋಳು ವಿರೂಪಾಕ್ಷಪ್ಪ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ಕಂಠೀರವ ಸ್ಟುಡಿಯೋ ಅಧ್ಯಕ್ಷ ಮಹೆಬೂಬ್ ಪಾಷಾ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಸ್.ಶ್ರೀರಾಮ್, ಕಾರ್ಯದರ್ಶಿ ಬಿ.ಟಿ.ಜಗದೀಶ್, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಓಂಕಾರಪ್ಪ,
ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಸ್.ಆಕಾಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಡಿವೈಎಸ್‍ಪಿ ಪಿ.ಕೆ.ದಿನಕರ್, ಮುಖಂಡರಾದ ಸೋಮಶೇಖರ್, ಜಿ.ಬಿ.ವಿನಯ್ ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

