ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
‘ಎಲ್ಲಾದರೂ ಇರು ಎಂತಾದರು ನೀ ಕನ್ನಡವಾಗಿರು….‘ ಎಂಬ ಕವಿವಾಣಿಗೆ ಅನುಗುಣವಾಗಿ ಕರುನಾಡ ನೆಲದಿಂದ ಸಹಸ್ರಾರು ಕಿಲೋ ಮೀಟರ್ ದೂರದ ಜರ್ಮನಿಯಲ್ಲಿ ಬರ್ಲಿನ್ ಕನ್ನಡ ಬಳಗ-BKB ಕನ್ನಡ ಹಬ್ಬವನ್ನು ಯಶಸ್ವಿಯಾಗಿ ಆಚರಿಸಿರುವುದು ಕನ್ನಡಿಗರಾಗಿ ಎಲ್ಲರೂ ಹೆಮ್ಮೆ ಪಡುವಂತಹ ಕಾರ್ಯ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.
ಜರ್ಮನಿಯಲ್ಲಿ ಕನ್ನಡ ಭಾಷೆ ಮತ್ತು ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಕೆಬಿ ಬೆಳಗುತ್ತಿರುವುದು ಸ್ತುತ್ಯಾರ್ಹವಾಗಿದೆ. ಇತ್ತೀಚೆಗಷ್ಟೇ ಬರ್ಲಿನ್ನಲ್ಲಿ ನಡೆದ ‘Karneval der Kulturen 2025’ ಎಂಬ ಅತ್ಯಂತ ಹೆಸರಾಂತ ಬಹುಸಾಂಸ್ಕೃತಿಕ ಹಬ್ಬದಲ್ಲಿ,
ಬರ್ಲಿನ್ ಕನ್ನಡ ಬಳಗ (BKB) ತಂಡವು ಪ್ರಸಿದ್ಧ ಹಂಪಿಯ ರಥದ ಅಚ್ಚುಕಟ್ಟಾದ ಮಾದರಿ ನಿರ್ಮಿಸಿ, ಅತ್ಯುತ್ತಮ ಮಾದರಿ ವಿಭಾಗದಲ್ಲಿ (Best Wagen Construction) ಪ್ರಶಸ್ತಿ ಪಡೆದಿದ್ದಾರೆ. ಭಾಗವಹಿಸಿದ್ದ 69 ತಂಡಗಳಲ್ಲಿ ನಮ್ಮ ಐತಿಹಾಸಿಕ ಹಂಪಿ ರಥ ಎಲ್ಲರ ಮನ ಗೆದ್ದಿರುವುದು ನಿಜಕ್ಕೂ ಶ್ಲಾಘನೀಯ ಎಂದು ಸಚಿವರು ತಿಳಿಸಿದರು.
ಬಿಕೆಬಿಯ ಕಾರ್ಯಗಳು ಯಶಸ್ವಿಯಾಗಿ ಮುಂದುವರೆಯಲಿ, ಕನ್ನಡತನ, ನಮ್ಮ ಸಂಸ್ಕೃತಿ ಜರ್ಮನಿಯಾದ್ಯಂತ ಇನ್ನಷ್ಟು ವಿಜೃಂಭಿಸಲಿ. ವಿಶ್ವದೆಲ್ಲೆಡೆ ಇಂತಹ ಕಾರ್ಯಕ್ರಮಗಳು ನಡೆಯುವಂತಾಗಲಿ. ಕನ್ನಡದ ಕಂಪು ಎಲ್ಲೆಡೆ ಪಸರಿಸಲಿ ಎಂದು ಸಚಿವ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.