ಕನ್ನಡ ಮತ್ತು ಹಿಂದಿ… ಕನ್ನಡ V/S ಹಿಂದಿ…

WhatsApp
Telegram
Facebook
Twitter
LinkedIn

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ಮತ್ತು ಹಿಂದಿ……ರಾಷ್ಟ್ರೀಯ ಹಿಂದಿ ದಿನ ಸೆಪ್ಟೆಂಬರ್ 14 ರಂದು ಕರ್ನಾಟಕದ ಅನೇಕ ಕನ್ನಡ ಪರ ಸಂಘಟನೆಗಳು ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನಾ ಅಭಿಯಾನ ನಡೆಸುತ್ತಿರುವ ಸಂದರ್ಭದಲ್ಲಿ…….ತಾಯಿ ಭಾಷೆ ಮತ್ತು ಹಿಂದಿ ಹೇರಿಕೆ ಹಾಗು  ಇತರ ಭಾಷೆಗಳು…..

ಕರ್ನಾಟಕದಲ್ಲಿ ಸದ್ಯಕ್ಕೆ ಅತಿ ಹೆಚ್ಚು ಬಳಕೆಯಲ್ಲಿರುವುದು ತಾಯಿ ಭಾಷೆ ಕನ್ನಡ. ಎರಡನೇ ಸ್ಥಾನ ಆಂಗ್ಲ ಭಾಷೆ, ಮೂರನೇ ಸ್ಥಾನ ಹಿಂದಿ, ನಾಲ್ಕನೇಯ ಸ್ಥಾನ ತೆಲುಗು, ಐದನೆಯ ಸ್ಥಾನ ತಮಿಳು, ಆರನೆಯ ಸ್ಥಾನ ಮಲಯಾಳಂ, ಉಳಿದಂತೆ ಮತ್ತೆ ಕೆಲವು ಭಾಷೆಗಳು ಹಾಗೂ ತುಳು, ಕೊಂಕಣಿ, ಕೊಡವ, ಅರೇಭಾಷೆ ಮುಂತಾದ ಕೆಲವು ಸ್ಥಳೀಯ ಭಾಷೆಗಳು…..

ಆದರೆ ನಿಜವಾಗಲೂ ಹೇರಿಕೆ ಆಗುತ್ತಿರುವುದು ಹಿಂದಿ ಭಾಷೆಯಿಂದ ಮಾತ್ರ. ಇತರ ಭಾಷೆಗಳು ತಮ್ಮ ಪಾಡಿಗೆ ತಾವಿವೆ. ಇಂಗ್ಲಿಷ್ ಒಂದು ಆಕರ್ಷಕ ಭಾಷೆಯಾಗಿ ಹೆಚ್ಚು ಜನ ಅದನ್ನು ಸ್ವ ಇಚ್ಛೆಯಿಂದ ಮತ್ತು ಮೋಹಕ್ಕೆ ಒಳಗಾಗಿ ಕಲಿಯುತ್ತಿರುವುದು ಸಹ ಅಷ್ಟೇ ವಾಸ್ತವ. ಆದರೆ  ಅಭಿಯಾನ ನಡೆಯುತ್ತಿರುವುದು ಹಿಂದಿ ಹೇರಿಕೆಯ ವಿರುದ್ಧ. ಕಾರಣ ಅದನ್ನು ಕೇಂದ್ರ ಸರ್ಕಾರಗಳು ಒತ್ತಾಯ ಪೂರ್ವಕವಾಗಿ ಹೇರಿಕೆ ಮಾಡುತ್ತಿರುವುದರಿಂದ……

ಆದ್ದರಿಂದ ಆ ವಿಷಯದ ವಿವಿಧ ಮುಖಗಳು…..ಹಿಂದಿ ಭಾಷೆಯ ಹೇರಿಕೆ ನಿಜವೇ ?  ನಿಜವೇ ಆಗಿದ್ದರೆ ಅದು ಸರಿಯೇ ? ಅದು ಅಪಾಯಕಾರಿಯೇ ? ಅದು ಕೇವಲ ಭ್ರಮೆಯೇ ? ಹಿಂದಿ ಭಾಷೆ ಅಷ್ಟೊಂದು ಪ್ರಬಲವೇ ? ಆಕರ್ಷಕವೇ ?..ದ್ರಾವಿಡ ಭಾಷೆಗಳು ಹಿಂದಿ ಭಾಷೆಗೆ ಭಯಪಡಲು ಇವು ದುರ್ಬಲವೇ ? ಸ್ಪರ್ಧಾತ್ಮಕ ಜಗತ್ತಿನಲ್ಲಿ  ಬಲವೇ ನ್ಯಾಯ ಎಂಬುದನ್ನು ಒಪ್ಪಿಕೊಳ್ಳಬೇಕೆ ? ಹಿಂದಿ ಹೇರಿಕೆ ಪ್ರತಿಭಟಿಸಬೇಕೆ ? ಒಂದೇ ಭಾರತ ಶ್ರೇಷ್ಠ ಭಾರತ ಎಂಬ ಅಭಿಯಾನದ ಅಡಿಯಲ್ಲಿ ಇದನ್ನು ಸ್ವೀಕರಿಸಿಬೇಕೆ ? ಬಹುತ್ವ ಭಾರತ ಬಲಿಷ್ಠ ಭಾರತ ಎಂಬುದನ್ನು ಪ್ರತಿಪಾದಿಸಬೇಕೆ ?
ಅಥವಾ ಇದನ್ನು ದಿಕ್ಕರಿಸಬೇಕಾದರೆ ಯಾವ ಹಂತದಲ್ಲಿ
, ಯಾವ ಮಾರ್ಗದಲ್ಲಿ, ಎಷ್ಟು ಆಳವಾಗಿ ಇದನ್ನು ವಿರೋಧಿಸಬೇಕು ? ಇತ್ಯಾದಿ ಪ್ರಶ್ನೆಗಳಿಗೆ ಕೂಲಂಕಶವಾಗಿ ಅಧ್ಯಯನ ಮಾಡಿ ಪರಿಶೀಲಿಸಿದರೆ ಒಂದು ಸಮಾಧಾನಕರ ಉತ್ತರ ದೊರೆಯಬಹುದು….

ನೀವು ಎಡ ಬಲ ಪಂಥಗಳ ಕಟ್ಟಾ ಅನುಯಾಯಿಗಳಾಗಿದ್ದರೆ, ಯಾವುದೋ ಪಕ್ಷದ ಕಾರ್ಯಕರ್ತರಾಗಿದ್ದರೆ, ರಾಷ್ಟ್ರೀಯವಾದಿಗಳಾಗಿ ಪ್ರಾದೇಶಿಕತೆಯನ್ನು ಬಲವಾಗಿ ವಿರೋಧಿಸುವವರಾಗಿದ್ದರೆ ಸತ್ಯದ ಹುಡುಕಾಟ ಸಾಧ್ಯವಿಲ್ಲ. ಮುಕ್ತ ಚಿಂತನೆಗೆ ನಿಮ್ಮನ್ನು ಒಗ್ಗಿಸಿಕೊಂಡರೆ ಮಾತ್ರ ಒಂದಷ್ಟು ವಾಸ್ತವ ಅರಿವಾಗಬಹುದು……

ಭಾಷೆ ಒಂದು ಸಂವಹನ ಮಾಧ್ಯಮ ಎಂಬುದು ಎಷ್ಟು ನಿಜವೋ ಹಾಗೆಯೇ ತಾಯಿ ಭಾಷೆ ನಮ್ಮ ಚಿಂತನೆಯನ್ನೇ ನಿಯಂತ್ರಿಸಿ ಆ ಮುಖಾಂತರ ಇಡೀ ಬದುಕನ್ನು ಮುನ್ನಡೆಸುತ್ತದೆ ಎಂಬುದು ಅಷ್ಟೇ ನಿಜ. ಅಂದರೆ ತಾಯಿ ಭಾಷೆ ಎಂಬುದು ನಮ್ಮ ಸಂಸ್ಕೃತಿ……

ತಾಯಿ ಭಾಷೆಯನ್ನು ಹೊರತುಪಡಿಸಿದ ಇನ್ಯಾವುದೇ ಭಾಷೆಯ ಒತ್ತಾಯಪೂರ್ವಕ ಹೇರಿಕೆ ನಮ್ಮ ಜೀವನ ವಿಧಾನದ ಜೊತೆಗೆ ಒಟ್ಟು ಸಂಸ್ಕೃತಿಯನ್ನೇ ಬದಲಾಯಿಸುತ್ತದೆ, ನಾಶಪಡಿಸುತ್ತದೆ ಮತ್ತು ದುರ್ಬಲ ಮನಸ್ಥಿತಿಯ ಜನರ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡುತ್ತದೆ…..

 ಇದು ಕೇವಲ ಕನ್ನಡ ಹಿಂದಿ ಇಂಗ್ಲೀಷ್ ಭಾಷೆಯ ವಿಷಯವಲ್ಲ. ವಿಶ್ವದಲ್ಲಿ ಜೀವಂತವಿರುವ ಎಲ್ಲಾ ಭಾಷೆಗಳಿಗೂ ಏಕ ಪ್ರಕಾರವಾಗಿ – ಸಮನಾಗಿ ಅನ್ವಯಿಸುತ್ತದೆ. ಇತರೆ ಯಾವುದೇ ಭಾಷೆಗಳು ಮಾಹಿತಿ ಮತ್ತು ಜ್ಞಾನಾರ್ಜನೆಗಾಗಿ ಅನುಕೂಲಕರವಾಗಿರಬಹುದು. ಆದರೆ  ಮನುಷ್ಯನ ಸ್ವಾಭಾವಿಕ ಬದುಕಿಗೆ ತಾಯಿ ಭಾಷೆಯೇ ಜೀವ ಶಕ್ತಿ….

ಈ ದೃಷ್ಟಿಯಿಂದ ತಾಯಿ ಭಾಷೆಯ ಮೇಲೆ ಯಾವುದೇ ಆಧಾರದಲ್ಲಿ, ಯಾವುದೇ ಕಾರಣಕ್ಕಾಗಿ ಇತರೆ ಭಾಷೆಯ ಒತ್ತಾಯಪೂರ್ವಕ ಹೇರಿಕೆಯನ್ನು ಶತಾಯಗತಾಯ ವಿರೋಧಿಸುವುದು ಮಾತ್ರವಲ್ಲದೆ ಅದನ್ನು ತಡೆಗಟ್ಟಲೇ ಬೇಕು. ಅದು ನಮ್ಮ ಅಸ್ತಿತ್ವದ ಪ್ರಶ್ನೆ. ಅಸ್ಮಿತೆಯ ಪ್ರಶ್ನೆ. ಸ್ವ ಇಚ್ಛೆಯಿಂದ ಯಾರು ಯಾವ ಭಾಷೆಯನ್ನು ಬೇಕಾದರೂ ಕಲಿಯಬಹುದು ಅಥವಾ ಉಪಯೋಗಿಸಬಹುದು. ಅದು ಅವರ ಸ್ವಾತಂತ್ರ್ಯ. ಒತ್ತಾಯಪೂರ್ವಕ ಹೇರಿಕೆಗೆ ಮಾತ್ರ ಪ್ರತಿರೋಧ….

ದಕ್ಷಿಣದ ದ್ರಾವಿಡ ಭಾಷೆಗಳ ಮೇಲೆ ಉತ್ತರದ ಹಿಂದಿ ಹೇರಿಕೆಯ ವಿವಾದದ ಬಗ್ಗೆ ಮಾತನಾಡುವ ಮೊದಲು ದ್ರಾವಿಡ ಭಾಷೆಗಳ ಭಾಷಾಭಿಮಾನದ ಬಗ್ಗೆ ಒಮ್ಮೆ ಕಣ್ಣಾಡಿಸೋಣ….

ದಕ್ಷಿಣದ ಮುಖ್ಯ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಜೊತೆಗೆ ಕೊಂಕಣಿ, ತುಳುಕೊಡವ ಸೇರಿ ನೂರಾರು ಭಾಷೆಗಳು ಅಸ್ತಿತ್ವದಲ್ಲಿವೆ….

ದ್ರಾವಿಡ ಭಾಷೆಗಳ ಭಾಷಾಭಿಮಾನ ಮತ್ತು ಅಲ್ಲಿನ ಸಂಸ್ಕೃತಿಗಳ ಮೇಲೆ ಭಾಷೆಯ ಪ್ರಭಾವ ಗಮನಿಸಿದಾಗ ಸ್ಥಳೀಯ ಆಡಳಿತದಲ್ಲಿ ಅತ್ಯಂತ ಹೆಚ್ಚು ಪ್ರಭಾವ ಹೊಂದಿರುವುದು ಕ್ರಮವಾಗಿ ಮಲೆಯಾಳಂ, ತಮಿಳು, ತೆಲುಗು ನಂತರ ಕನ್ನಡ ಸ್ಥಾನ ಪಡೆಯುತ್ತದೆ. ಇದನ್ನು ಅಳೆಯಲು ಯಾವುದೇ ವೈಜ್ಞಾನಿಕ ಮಾಪನ ಇಲ್ಲ. ಕೇವಲ ಅನುಭವದ ಆಧಾರ ಮಾತ್ರ ಹೇಳುತ್ತಿದ್ದೇನೆ. ಈ ಎಲ್ಲಾ ರಾಜ್ಯಗಳಿಗೂ ಭೇಟಿ ನೀಡಿದ ನಂತರ ಮೇಲ್ನೋಟಕ್ಕೆ ತಮಿಳು ಹೆಚ್ಚು ಭಾಷಾಭಿಮಾನ ಹೊಂದಿರುವ ರಾಜ್ಯ ಎನಿಸಿದರೂ ವಾಸ್ತವದಲ್ಲಿ ಮಲೆಯಾಳಂ ಎಲ್ಲಾ ಹಂತದಲ್ಲಿಯೂ ಮೊದಲ ಸ್ಥಾನದಲ್ಲಿ ಇದೆ ಎಂದೆನಿಸುತ್ತದೆ…..

ಸ್ವಾತಂತ್ರ್ಯ ನಂತರ ನಡೆದ ಕೆಲವು ಪ್ರಮುಖ ಚಳವಳಿಗಳಲ್ಲಿ ಭಾಷಾ ಚಳವಳಿ ಅದರಲ್ಲೂ ದ್ರಾವಿಡ ಚಳವಳಿ ಸಹ ಬಹುಮುಖ್ಯವಾದುದು. ಇದು ಹಿಂದಿ ಹೇರಿಕೆಯ ವಿರುದ್ಧದ ಚಳವಳಿ. ನೆಹರು ಕಾಲದಿಂದ ಮೋದಿಯವರಗೆ ಬಹುತೇಕ ಎಲ್ಲಾ ಸರ್ಕಾರಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಇದನ್ನು ಮಾಡುತ್ತಲೇ ಬರುತ್ತಿವೆ….

ಆದರೆ ಈಗಿನ ಏಕ್ ಭಾರತ್ ಶ್ರೇಷ್ಠ್ ಭಾರತ್ ಕಲ್ಪನೆಯ ಬಲಿಷ್ಠ ಕೇಂದ್ರ ಸರ್ಕಾರ ಒಳಗೊಳಗೆ ಅತ್ಯಂತ ಚಾಣಾಕ್ಷವಾಗಿ ಹಿಂದಿ ಭಾಷೆಯ ಹೇರಿಕೆ ಮಾಡುತ್ತಿರುವುದನ್ನು ಪಕ್ಷಾತೀತವಾಗಿ ಒಪ್ಪಿಕೊಳ್ಳಬೇಕಿದೆ.

ಅದೇರೀತಿ, ಒಂದು ದೇಶ ಒಂದು ರೇಷನ್ ಕಾರ್ಡ್ ಯೋಜನೆಯ ಮೂಲಕ ಪರೋಕ್ಷವಾಗಿ ಉತ್ತರ ಭಾರತದ ಜನರನ್ನು ದಕ್ಷಿಣಕ್ಕೆ ರಪ್ತು ಮಾಡಿ ಅಥವಾ ನುಗ್ಗುಸಿ ಇಲ್ಲಿನ ಮೂಲ ಸಂಸ್ಕೃತಿಯನ್ನು ಬೆರಕೆ ಸಂಸ್ಕೃತಿ ಮಾಡುವ ಹುನ್ನಾರವೂ ಇದೆ. ದೇಶದ ಅಭಿವೃದ್ಧಿಯ ನೆಪದಲ್ಲಿ ನಡೆಯುತ್ತಿರುವ ಈ ಕುತಂತ್ರ ಸಾಮಾನ್ಯ ಜನರಿಗೆ ಅರಿವಾಗದಿರುವುದು ದುರಂತ. ಇದರ ಬಗ್ಗೆ ಮತ್ತೊಮ್ಮೆ ವಿಸೃತವಾಗಿ ಅಭಿಪ್ರಾಯ  ಹಂಚಿಕೊಳ್ಳುತ್ತೇನೆ. ಇದು ರಾಜಕೀಯ ನಡೆ…..

ಈಗ ನಮ್ಮ ಮುಂದೆ ಎರಡು ಆಯ್ಕೆಗಳಿವೆ…..ಜಾಗತೀಕರಣವನ್ನೇ ಒಪ್ಪಿಕೊಂಡು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಬಲವೇ ನ್ಯಾಯ, ಬಲಿಷ್ಠರಿಗೆ ಮಾತ್ರ ಇಲ್ಲಿ ಉಳಿಗಾಲ, ದುರ್ಬಲರು ಅಳಿಯಲಿ ಎಂಬ ಆಧುನಿಕ ಸಿದ್ದಾಂತದಂತೆ ಯಾವುದೇ ಭಾಷೆ ನಮ್ಮ ಮೇಲೆ ದಾಳಿ ಮಾಡಲಿ, ನಮ್ಮಲ್ಲಿ ತಾಖತ್ತು ಇದ್ದರೆ ಉಳಿಯುತ್ತೇವೆ ಇಲ್ಲದಿದ್ದರೆ ಅಳಿಯುತ್ತೇವೆ. ಇದೇ ಸ್ವಾಭಾವಿಕ ನ್ಯಾಯ ಎಂದು ನೋಡುತ್ತಾ ಸುಮ್ಮನಿರುವುದು,

ಅಥವಾ ನಮ್ಮ ಭಾಷೆ, ನಮ್ಮ ಸಂಸ್ಕೃತಿ, ನಮ್ಮ ಅಸ್ಮಿತೆ ಎಂದು ಭಾವಿಸಿ ಈ ರೀತಿಯ ಒತ್ತಾಯಪೂರ್ವಕ ಹೇರಿಕೆಯನ್ನು ನಮ್ಮ ಜೀವ ಇರುವವರೆಗೂ ಬಲವಾಗಿ ವಿರೋಧಿಸುವುದು ಮತ್ತು ನಮ್ಮ ಮುಂದಿನ ಜನಾಂಗಕ್ಕೂ ಈ ಪ್ರತಿಭಟನೆ ತಲುಪಿಸುವುದು ಹಾಗು ನಮ್ಮ ನಮ್ಮ ತಾಯಿ ಭಾಷೆಯನ್ನು ಜೀವನದ ಅವಿಭಾಜ್ಯ ಅಂಗವಾಗಿ ಪ್ರತಿ ಹಂತದಲ್ಲಿಯೂ ಉಪಯೋಗಿಸಿ ಅದನ್ನು ಸರ್ವವ್ಯಾಪಿ ಮಾಡುವುದು….ಈ ಎರಡರಲ್ಲಿ ಯಾವುದು ಹೆಚ್ಚು ಬಲಿಷ್ಠವಾಗಿ ಜನಾಭಿಪ್ರಾಯ ಮೂಡುವುದೋ ಅದು ಯಶಸ್ವಿಯಾಗುತ್ತದೆ….

ವಿಶ್ವಮಾನವತೆ ಒಪ್ಪೋಣ. ಆದರೆ ದುರುದ್ದೇಶ ಪೂರಿತ ಒತ್ತಾಯ ವಿರೋಧಿಸೋಣ‌ ಧರ್ಮ, ಪಕ್ಷ, ಜಾತಿ, ಪ್ರದೇಶದ ಆಧಾರದಲ್ಲಿ ತಾಯಿ ಭಾಷೆ ನಲುಗಿದರೆ ಅದರ ಅವಸಾನ ಖಚಿತ….

ದಯವಿಟ್ಟು ಈ ವಿಷಯದಲ್ಲಿ ಅತ್ಯಂತ ಎಚ್ಚರಿಕೆಯ, ದೂರದೃಷ್ಟಿಯ ವಿವೇಚನಾಯುಕ್ತ ಅಭಿಪ್ರಾಯ ನಮ್ಮದಾಗಲಿ. ರಾಜಕಾರಣಿಗಳ ಗೋಮುಖ ವ್ಯಾಘ್ರತನವನ್ನು ಸೂಕ್ಷ್ಮ ದೃಷ್ಟಿಯಿಂದ ಗಮನಿಸಿ. ಇದು ಒಂದು ಕಳಕಳಿಯ ಮನವಿ….
ಲೇಖನ:ವಿವೇಕಾನಂದ. ಎಚ್. ಕೆ. 9844013068……..

News Desk   About Us
For Feedback - [email protected]

LATEST Post

error: Content is protected !!
WhatsApp Icon Telegram Icon