ಕೆನಡಾ ದೇಶದ ಪ್ರಧಾನಿ ಹುದ್ದೆಗೆ ಕನ್ನಡಿಗ ನಾಮಪತ್ರ ಸಲ್ಲಿಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆನಡಾ ದೇಶದ ಪ್ರಧಾನಿ ಜಸ್ಟಿನ್‌ಟ್ರುಡೊ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಮುಂದುವರೆದಿದೆ.

ಭಾರತ ದೇಶದ ಕರ್ನಾಟಕದವರಾದ ಚಂದ್ರ ಆರ್ಯ ಅವರು ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದು ಒಂದೆಡೆಯಾದರೆ, ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರು ಕನ್ನಡದಲ್ಲಿಯೇ ಮಾತನಾಡಿದ್ದು ವೈರಲ್ ಆಗಿದೆ. ಅವರ ಕನ್ನಡಾಭಿಮಾನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿರುವುದು ಹೆಮ್ಮೆಯ ವಿಚಾರ. ಚಂದ್ರ ಆರ್ಯ ಯಾರು?
ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮದ ರೈತಾಪಿ ಕುಟುಂಬದವರಾಗಿರುವ ಚಂದ್ರ ಆರ್ಯ ಅವರು ಇತ್ತೀಚೆಗೆ ಪ್ರಧಾನಿ ಹುದ್ದೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದರು.

- Advertisement - 

ಅದರಂತೆ ಚಂದ್ರ ಆರ್ಯ ಅವರು ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಚಂದ್ರ ಆರ್ಯ ಕನ್ನಡದಲ್ಲಿ ಮಾತನಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಚಂದ್ರ ಆರ್ಯ ಏನು ಹೇಳಿದರು?
ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಾಗುತ್ತಿದೆ. ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ, ಶಿರಾ ತಾಲೂಕಿನ ವ್ಯಕ್ತಿಯೊಬ್ಬ ಕೆನಡಾದಲ್ಲಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಮತ್ತು ಕನ್ನಡದಲ್ಲಿ ಮಾತನಾಡುವುದು,

- Advertisement - 

ಸುಮಾರು ಐದು ಕೋಟಿ ಕನ್ನಡಿಗರಿಗೆ ಹಮ್ಮೆಯ ವಿಚಾರ. ಕೆನಡಾ ದೇಶದ ಕನ್ನಡಿಗರು 2018ನೇ ಇಸವಿಯಲ್ಲಿ ಕೆನಡಾದ ಈ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದರು. ರಾಷ್ಟ್ರಕವಿ ಕುವೆಂಪು ಬರೆದಿರುವ ಹಾಗೂ ನಟಸಾರ್ವಭೌಮ ಡಾ. ರಾಜ್​ಕುಮಾರ್ ಹಾಡಿರುವ ಭಾವಗೀತೆ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ಹೇಳುವ ಮೂಲಕ ಮಾತು ಮುಗಿಸಿದರು.

ಕೆನಡಾ ದೇಶವನ್ನು ಸಾರ್ವಭೌಮ ಗಣರಾಜ್ಯವನ್ನಾಗಿ ಮಾಡುವ, ನಿವೃತ್ತಿ ವಯಸ್ಸನ್ನು ಹೆಚ್ಚಿಸುವ, ಪೌರತ್ವ ಆಧಾರಿತ ತೆರಿಗೆ ವ್ಯವಸ್ಥೆ ಪರಿಚಯಿಸುವ ಮತ್ತು ಪ್ಯಾಲೆಸ್ಟೈನ್ ರಾಜ್ಯವನ್ನು ಗುರುತಿಸುವ ಭರವಸೆ ನೀಡುವ ಅಭಿಯಾನದೊಂದಿಗೆ ಲಿಬರಲ್ ನಾಯಕತ್ವಕ್ಕಾಗಿ ಸ್ಪರ್ಧಿಸುವುದಾಗಿ ಈ ಮೊದಲೇ ಚಂದ್ರ ಆರ್ಯ ಹೇಳಿದ್ದರು.

ನಮ್ಮ ರಾಷ್ಟ್ರವನ್ನು ಪುನರ್ ನಿರ್ಮಿಸಲು ಮತ್ತು ಭವಿಷ್ಯದ ಪೀಳಿಗೆಗೆ ಸಮೃದ್ಧಿ ಖಚಿತಪಡಿಸಿಕೊಳ್ಳಲು ಸಣ್ಣ, ಹೆಚ್ಚು ಪರಿಣಾಮಕಾರಿ ಸರ್ಕಾರವನ್ನು ಮುನ್ನಡೆಸಲು ಕೆನಡಾದ ಮುಂದಿನ ಪ್ರಧಾನಿಯಾಗಲು ನಾನು ಸ್ಪರ್ಧಿಸುತ್ತಿದ್ದೇನೆ ಎಂದು 2015ರಲ್ಲಿ ನೇಪಿಯನ್‌ನ ಉಪನಗರ ರೈಡಿಂಗ್‌ನಲ್ಲಿ ಮೊದಲ ಬಾರಿಗೆ ಆಯ್ಕೆಯಾದ ಆರ್ಯ ಹೇಳಿದ್ದರು.

 

Share This Article
error: Content is protected !!
";