ಕನ್ನಡಿಗರು ವಿಶಾಲ ಹೃದಯದವರು

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕನ್ನಡಿಗರು ವಿಶಾಲ ಹೃದಯದವರು…
ನಾವು ಕನ್ನಡಿಗರು ವಿಶಾಲ ಹೃದಯದವರು ಕನ್ನಡ ಚಿತ್ರಗಳಿಗಿಂತ ಬೇರೆ ಭಾಷೆಯ ಚಿತ್ರಗಳನ್ನು ಜಾಸ್ತಿ ನೋಡುತ್ತೇವೆ” ಎಂಬ ಈ ಸಾಲುಗಳು “ಬುದ್ಧಿವಂತ” ಸಿನಿಮಾದಲ್ಲಿ ಕನ್ನಡ ಚಿತ್ರರಂಗದಲ್ಲಿಯೇ ತುಂಬಾ ಬುದ್ಧಿವಂತ ಎನಿಸಿಕೊಂಡಿರುವ ರಿಯಲ್ ಸ್ಟಾರ್ ಉಪೇಂದ್ರ ಅವರ ಸಂಭಾಷಣೆಯಲ್ಲಿ ಅವರು ನಮಗೆ ಕಚಗುಳಿ ಇಟ್ಟು ಬರಿ ತಮಾಷೆಗಾಗಿ ಹೇಳಿದ್ದಲ್ಲ

ಬದಲಿಗೆ ನಮಗೆ ಅರಿವು ಮೂಡಿಸಲ ಬಡಿದೆಬ್ಬಿಸಲು ಮಾರ್ಮಿಕವಾಗಿ ಚಾಟಿ ಏಟಿನಿಂದ ಬಾರಿಸಿದಂತೆ ಕತ್ತಿಯ ಮೊನಚಿನಿಂದ ಚುಚ್ಚಿದಂತೆ ಕನ್ನಡ ಸಿನಿಮಾವನ್ನೇ ನೋಡಿ ಎಂದು ತೀಕ್ಷ್ಣವಾಗಿ ವಿರುದಾರ್ಥದಲ್ಲಿ ಹೇಳಿದಂತಿತ್ತು ಅವರ ಆ ಸಂದೇಶ. ಆದರೆ ಅದು ಕೆಲವರಿಗೆ ತಮಾಷೆಯ ವಿಷಯವೆಂಬoತ್ತೆ ಆ ಸಮಯಕ್ಕೆ ಮಾತ್ರ ಸೀಮಿತ ಎಂಬಂತೆ ಆ ಸಂಭಾಷಣೆಗೆ ನಕ್ಕು ಅದನ್ನು ಮರೆತು ಹೋಗಿದ್ದಾರೆ.

- Advertisement - 

ನಮ್ಮ ಕನ್ನಡಿಗರು ಆಗಿನ ಕಾಲದಿಂದಲೂ ಬರಿ ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳನ್ನು ನೋಡಿಕೊಂಡು ಬರುತ್ತಿದ್ದಾರೆ ಈಗಲೂ ಸಹ ಆ ಭಾಷೆಗಳ ಸಿನಿಮಾವನ್ನು ಚಾಚು ತಪ್ಪದೆ ನೋಡುವ ಒಂದು ದೊಡ್ಡ ಸಮೂಹವೇ ಇದೆ ಅಲ್ಲದೆ ಆ ಸಮೂಹ ಇತ್ತೀಚೆಗೆ ಮಲಯಾಳಂ ಸಿನಿಮಾವನ್ನು ಕೂಡ ನೋಡುವುದರತ್ತ ವಾಲುತ್ತಿದ್ದಾರೆ ಎಂಬ ಕಟುಸತ್ಯದ ವಿಷಯ ಕೇಳಿ ಈ ನಮ್ಮ ಕನ್ನಡಿಗರ ಭಾಷೆಯ ಮೇಲಿನ ಅಭಿಮಾನ ಎಲ್ಲ ಬೂಟಾಟಿಕೆಯೇ? ಎಂದೆನಿಸಿತು ನನಗೆ. ಏಕೆಂದರೆ ಫಿಲ್ಮಿ ಬೀಟ್ ವೆಬ್ ಸೈಟಿನ ಸಿನಿ ಸಮಚಾರದಲ್ಲಿ “ಕನ್ನಡ ಚಿತ್ರರಂಗದ ಕತ್ತು ಹಿಸುಕುತ್ತಿದೆ ಮಲಯಾಳಂ ಚಿತ್ರರಂಗಎನ್ನುವ ಲೇಖನವನ್ನು ಓದಿ ನನಗೆ ದಿಗ್ಭ್ರಮೆ ಆಯ್ತು. ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಮಲಯಾಳಂನ ಖ್ಯಾತ ನಟನೊಬ್ಬನ ಸಿನಿಮಾ ಒಂದು ಸುಮಾರು 100 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಸುದ್ದಿಯನ್ನು ಕೇಳಿ ದಿಗಿಲಾಯಿತು.

ಆದರೆ ಅದೇ ನಮ್ಮ ಕನ್ನಡ ಸಿನಿಮಾವು ಪಕ್ಕದ ರಾಜ್ಯಗಳ ರಾಜಧಾನಿಯಲ್ಲಿ ಒಂದೆರಡು ಸಿನಿಮಾ ಸಹ ಬಿಡುಗಡೆಯಾಗುವುದಿಲ್ಲ. ಅಷ್ಟೇ ಏಕೆ ದೇಶದ ರಾಜಧಾನಿಯಾದ ದೆಹಲಿಯಲ್ಲಿ ಎಲ್ಲಾ ಭಾಷೆಯ ಸಿನಿಮಾಗಳು ಬಿಡುಗಡೆಗೊಳ್ಳುತ್ತವೆ ಮತ್ತು ಪ್ರದರ್ಶನಗೊಳ್ಳುತ್ತಲೇ ಇರುತ್ತವೆ . ಆದರೆ ಅಲ್ಲಿಯೂ ನಮಗೆ ಮೋಸವೇ; ನಮ್ಮ ಕನ್ನಡ ಸಿನಿಮಾವು ಮಾತ್ರ ದೆಹಲಿಯಲ್ಲಿ ಯಾವಾಗಲೋ ಒಮ್ಮೆ ಅಬ್ಬಬ್ಬಾ ಅಂದ್ರೆ ವರ್ಷಕ್ಕೆ ಒಂದೆರಡು ಬಿಡುಗಡೆಯಾಗಿ ಪ್ರದರ್ಶನ ಕಂಡರೆ ಅದೇ ನಮ್ಮ ಅದೃಷ್ಟ ಎಂದೇ ಹೇಳಬೇಕು.

- Advertisement - 

ಎಂಥ ವಿಪರ್ಯಾಸ ಎಂತಹ ದುರ್ವಿಧಿ ಈ ನಮ್ಮ ಕನ್ನಡ ಚಿತ್ರರಂಗಕ್ಕೆ ಇಂತಹ ಪರಿಸ್ಥಿತಿ ಬರಬಾರದಿತ್ತು ಇದಕ್ಕೆ ಕಾರಣ ಕನ್ನಡಿಗರಾದ ನಾವೇ ಹೊರತು ಬೇರೆ ಭಾಷೆಯವರು ಕಾರಣವೇ ಅಲ್ಲ. ಏಕೆಂದರೆ ನಾವೇನಾದರೂ ಅನ್ಯ ಭಾಷೆಯ ಸಿನಿಮಾವನ್ನು ಚಿತ್ರಮಂದಿರದಲ್ಲಿ ಹಣಕೊಟ್ಟು ನೋಡದೆ ಹೋದರೆ ಅವರು ತಾನೇ ಈ ನಮ್ಮ ಕರುನಾಡಿನಲ್ಲಿ ಅವರ ಸಿನಿಮಾವನ್ನು ಇಷ್ಟೊಂದು ಚಿತ್ರಮಂದಿರಗಳಲ್ಲಿ ಹೇಗೆ ಬಿಡುಗಡೆ ಮಾಡಿಯಾರು?

ಅದು ಈ ಪರಿಸ್ಥಿತಿ ನಮ್ಮ ಕನ್ನಡದ ಹೆಮ್ಮೆಯ ಕೆ ಜಿ ಎಫ್ ಕಾಂತಾರ ಮತ್ತು ಕಾಟೇರದಂತಹ ಇನ್ನೂ ಹಲವು ಅತ್ಯುನ್ನತ ಸಿನಿಮಾಗಳು ಕನ್ನಡದಲ್ಲಿ ಸೃಷ್ಟಿಯಾದ ಮೇಲು ನಮ್ಮ ಕನ್ನಡದ ಚಿತ್ರರಂಗದ ಸ್ಥಿತಿ ಈ ರೀತಿ ಸಂಕಷ್ಟಕ್ಕೆ ಸಿಕ್ಕಿ ಹಾಕಿಕೊಂಡಿದೆ ಎಂದರೆ ಇದಕ್ಕೆ ಕಾರಣ ಪರೋಕ್ಷವಾಗಿ ಕನ್ನಡ ಚಿತ್ರರಂಗದ ಆಡಳಿತ ಮಂಡಳಿ ಎಂದಾದರೆ ನೇರವಾಗಿ ಹೇಳಬೇಕೆಂದರೆ ನಮ್ಮ ಕನ್ನಡ ನಾಡಿನ ಪ್ರೇಕ್ಷಕರ ಚಂಚಲತೆ ಮತ್ತು ಕನ್ನಡದ ಬಗೆಗಿನ ಅವರ ದುರಾಭಿಮಾನವೇ ಹೊರತು ಇನ್ನೇನು? ನಮ್ಮ ಕನ್ನಡಿಗರು ಅದೇನು ಅನ್ಯ ಭಾಷೆಯ ಸಿನಿಮಾವನ್ನು ನೋಡಿ ಮಚ್ಚಾ, ಅದು ಬಂದು (ವಂದು) ಎಂಬ ಈ ರೀತಿಯ ಹಲವು ಅಸಂಬದ್ಧ ಪದಗಳನ್ನು ಬಳಸುತ್ತಾರೋ ಕಾಣೆ ಇದು ಅವರ ಕನ್ನಡದ ಬಗೆಗಿನ ತಿರಸ್ಕಾರವಲ್ಲದೆ ಮತ್ತೇನು?

ನೀವೇನೋ ಅನ್ಯ ಭಾಷೆಯ ಸಿನಿಮಾವನ್ನು ನೋಡುತ್ತೀರಾ ಸರಿ; ಅದೇ ನಮ್ಮ ಕನ್ನಡ ಸಿನಿಮಾವನ್ನು ಬೇರೆ ಭಾಷೆಯ ಪ್ರೇಕ್ಷಕರಿಗೆ ಮತ್ತು ಅನ್ಯ ಭಾಷೆಯ ನಿಮ್ಮ ಗೆಳೆಯರಿಗೆ ನೋಡಲು ಹೇಳಿ ನೋಡೋಣ; ಇಲ್ಲ ಇಲ್ಲ ಅದು ಸಾಧ್ಯನೇ ಇಲ್ಲ ಸುತಾರಾಂ ಅವರು ನಮ್ಮ ಕನ್ನಡ ಸಿನಿಮಾವನ್ನು ನೋಡುವುದಿಲ್ಲ ಏಕೆಂದರೆ ಅವರಿಗೆ ಅವರ ಭಾಷೆಯ ಮೇಲಿನ ಗೌರವ, ಪ್ರೀತಿ, ಕಾಳಜಿ ಮತ್ತು ವ್ಯಾಮೋಹ ಅವರನ್ನು ಹಾಗೆ ಸೆಳೆದಿಟ್ಟುಕೊಂಡಿದೆ ಅಲ್ಲದೆ ಅವರು ಬೇರೆ ಭಾಷೆಯ ಸಿನಿಮಾವನ್ನು ನೋಡಬೇಕಾದಂತ ಸಮಯದಲ್ಲಿ ಅದು ಒಳ್ಳೆಯ ಸಿನಿಮಾವೇ ಆಗಿದ್ದರೆ ಅಂತಹ ಸಿನಿಮಾವನ್ನು ಅವರು ಅವರ ಭಾಷೆಗೆ ಡಬ್ ಮಾಡಿಕೊಂಡು ಅವರದೇ ಭಾಷೆಯಲ್ಲಿ ನೋಡಿ ಆನಂದಿಸುತ್ತಾರೆ. ಆದರೆ ನಮ್ಮ ಕನ್ನಡಿಗರು ಎಲ್ಲಾ ಭಾಷೆಯ ಸಿನಿಮಾವನ್ನು ಅದರ ಮೂಲ ಭಾಷೆಯಲ್ಲಿಯೇ ನೋಡುವುದರಿಂದಲೇ ಅನ್ಯ ಭಾಷಿಕರು ಅವರ ಭಾಷೆಯ ಸಿನಿಮಾವನ್ನು ನಮ್ಮ ಕನ್ನಡ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡುವುದು ತೀರಾ ವಿರಳ ಅಕಸ್ಮಾತ್, ಡಬ್ ಮಾಡಿದರೂ ಬೇಕಾಬಿಟ್ಟಿಯಾಗಿ ಮಾಡುತ್ತಾರೆ.

ಬಹಳಷ್ಟು ಪಕ್ಕದ ರಾಜ್ಯದ ಚಿತ್ರರಂಗದವರು ನಮ್ಮ ಕನ್ನಡದ ಪ್ರೇಕ್ಷಕರನ್ನು ಅವರು ಬಿಡು ಯಾವ ಭಾಷೆಯಲ್ಲಿ ಬೇಕಾದರೂ ನೋಡುತ್ತಾರೆ ಎಂಬ ತಾತ್ಸಾರ ಮನೋಭಾವದಿಂದ ನೋಡುತ್ತಾರೆ ಅದು ಒಂತರ ಹೇಗಿರುತ್ತೆ ಎಂದರೆ ಕೆಲವರು ಭಿಕ್ಷುಕರಿಗೆ ಹಸೀದು ಹಾಕಿದರೇನು ಬಿಸೀದು ಹಾಕಿದರೇನು ಎಂಬ ಅಸಡ್ಡೆ ಮನೋಭಾವ ಬೆಳೆಸಿಕೊಂಡಿರುತ್ತಾರಲ್ಲ ಅಂತಹ ರೀತಿಯಲ್ಲಿ ನಮ್ಮ ಕನ್ನಡಪ್ರೇಕ್ಷಕರನ್ನು ತಾತ್ಸಾರದಿಂದ ಕಾಣುತ್ತಾರೆ. ಇದಕ್ಕೆ ಒಂದು ಸರಳ ಉದಾಹರಣೆ ಎಂದರೆ ತೆಲುಗು ನಟ ನಾನಿ ಅವರು ಅವರ ಚಿತ್ರವನ್ನು ಡಬ್ ಮಾಡುವಂತಹ ಸಂದರ್ಭದಲ್ಲಿ ಈ ಸಿನಿಮಾವನ್ನು ಕನ್ನಡದಲ್ಲಿ ಡಬ್ ಮಾಡುವ ಅಗತ್ಯವಿಲ್ಲ ಕನ್ನಡದವರು ತೆಲುಗಿನಲ್ಲಿಯೇ ನೋಡಿ ಬಿಡುತ್ತಾರೆ ಎಂದು ಹೇಳಿದ್ದ ಮಾತು ದೊಡ್ಡ ಸುದ್ದಿಯಾಗಿತ್ತು.

ಅವರ ಆ ಮಾತು ನಿಜವಾದರೂ ಅದು ನಮ್ಮ ಕನ್ನಡಿಗರಿಗೆ ಆಗುತ್ತಿರುವ ದ್ರೋಹ ಎಂದು ಇನ್ನು ಏಕೆ ನಮ್ಮ ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ? ಇಂತಹ ಅನ್ಯ ಭಾಷಿಕರ ದ್ರೋಹ ಅಸಡ್ಡೆಯನ್ನು ಇನ್ನು ಎಲ್ಲಿಯವರೆಗೆ ಸಹಿಸಿಕೊಂಡಿರುತ್ತೀರಿ? ಇಂತಹ ಪರಿಸ್ಥಿತಿಯಿಂದ ಇನ್ನು ಯಾವಾಗ ನಾವು ಎಚ್ಚೆತ್ತುಕೊಳ್ಳುವುದು?

 ನೋಡಿ, ನಾವು ಉಂಡು ಸಂತುಷ್ಟವಾಗಿದ್ದರೆ  ತಾನೇ ನಾವು ಇನ್ನೊಬ್ಬರಿಗೆ ದಾನ ಮಾಡುತ್ತೇವೆ ಅಂತೆಯೇ ನಮ್ಮದೇ ಕನ್ನಡ ಸಿನಿಮಾ ಇರುವ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿವೆ ಎಂದಿರುವಾಗ ಮತ್ತು ನಮ್ಮ ಕನ್ನಡ ಸಿನಿಮಾಗಳನ್ನು ಬಿಡುಗಡೆ ಮಾಡಲು ಚಿತ್ರಮಂದಿರಗಳೇ ಸಿಗುತ್ತಿಲ್ಲ ಎನ್ನುವ ಪರಿಸ್ಥಿತಿ ಇರುವಾಗ ನಾವೇಕೆ ಅನ್ಯ ಭಾಷೆಯ ಸಿನಿಮ ನೋಡಿ ಅವರ ಭಾಷೆಯ ಸಿನಿಮಾವನ್ನು ಗೆಲ್ಲಿಸಿ ನಮ್ಮ ಭಾಷೆಯ ಚಿತ್ರರಂಗಕ್ಕೆ ದುಸ್ಥಿತಿ ತರುವುದು ಯಾವ ಪುರುಷಾರ್ಥ ಹೇಳಿ? ನೀವು ಬೇರೆ ಭಾಷೆಯ ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ಏಕೆ ನೋಡಬೇಕು ಆ ಸಿನಿಮಾವನ್ನು ನೋಡಲೇಬೇಕೆಂದರೆ ಅವು ಬೇಗನೆ ಒಟಿಟಿ ಯಲ್ಲಿ ಬಂದೇ ಬಿಡುತ್ತವೆ ಮತ್ತು ಅವನ್ನು ಒಟಿಟಿ ಯಲ್ಲಿ ಸುಲಭವಾಗಿ ನೋಡಬಹುದು.

ಸುಮಾರು ವರ್ಷಗಳಿಂದ ನಾನು ನನ್ನಲ್ಲಿ ಒಂದು ಸಂಕಲ್ಪ ಮಾಡಿಕೊಂಡಿದ್ದೇನೆ ಅದೇನೆಂದರೆ ನಾನು ಕನ್ನಡ ಸಿನಿಮಾವನ್ನು ಮಾತ್ರ ಹಣ ಕೊಟ್ಟು ಚಿತ್ರಮಂದಿರದಲ್ಲಿ ನೋಡುತ್ತೇನೆ ಅನ್ಯ ಭಾಷೆಯ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಲೇಬಾರದು ಎಂಬ ಸಂಕಲ್ಪವನ್ನು ಮಾಡಿಕೊಂಡಿದ್ದೇನೆ ಮತ್ತು ಇದನ್ನು ನಾನು ನೂರಕ್ಕೆ 99.9 ಪ್ರತಿಶತ ಪಾಲಿಸುತ್ತಿದ್ದೇನೆ ನಿಮಗೂ ಕನ್ನಡದ ಬಗ್ಗೆ ಅಭಿಮಾನ, ಪ್ರೀತಿ, ಭಕ್ತಿ ಇದ್ದುದ್ದೇ ಆದರೆ ಇಂತಹ ಸಂಕಲ್ಪವನ್ನು ನೀವು ಕೂಡ ಪಾಲಿಸಿ ನಮ್ಮ ಕನ್ನಡ ಚಿತ್ರರಂಗದ ಯಶಸ್ಸಿಗೆ ನಾವೇ ಕಾರಣಿ ಭೂತರಾಗೋಣ.

ಏಕೆಂದರೆ, ನಮ್ಮ ಭಾಷೆಯನ್ನು ಬೆಳೆಸಲು-ಬಳಸಲು ನಮ್ಮ ಹೊರತು ಬೇರೆ ಯಾರು ಬರುವುದಿಲ್ಲ ನಾವೇ ನಮ್ಮ ಭಾಷೆಯನ್ನು ಬಳಸಬೇಕು ನಾವೇ ಬೆಳೆಸಬೇಕು. ಅದಕ್ಕಾಗಿ ನಾವು ಕನ್ನಡಿಗರೆಲ್ಲಾ ಕನ್ನಡ ಚಿತ್ರವನ್ನು ಬಿಟ್ಟು ಬೇರೆ ಭಾಷೆಯ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡುವುದಿಲ್ಲ ಎಂಬ ಸಂಕಲ್ಪ ಮಾಡಬೇಕಾಗಿದೆ.

ನನ್ನದು ಎಲ್ಲರಲ್ಲಿ ಒಂದು ಭಿನ್ನಃ ಏನೆಂದರೆ; ಎಲ್ಲಾ ತಂದೆ ತಾಯಿಯವರು ತಮ್ಮ ಮಕ್ಕಳಿಗೆ ಏನು ಕಲಿಸುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಅವರು ತಮ್ಮ ಮಕ್ಕಳಿಗೆ ಕನ್ನಡದ ಬಗ್ಗೆ ಅಭಿಮಾನ ಗೌರವ ಕೊಡುವಂತೆ ಮತ್ತು ಎಲ್ಲ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ನಮ್ಮ ಭಾಷೆ ಕನ್ನಡದ ಬಗ್ಗೆ ಹೆಮ್ಮೆ ಪಡುವಂತೆ ಕನ್ನಡದ ಬಗ್ಗೆ ವ್ಯಾಮೋಹ ಹೆಚ್ಚಿಸುವಂತಹ ಕೆಲಸ ಮಾಡಬೇಕಿದೆ ಏಕೆಂದರೆ ಕನ್ನಡದ ಅಭಿಮಾನ ಬೆಳೆಯಲು ಗಿಡದಿಂದಲೇ ದೃಢವಾಗಬೇಕಿದೆ.
ಲೇಖನ
:ವೆಂಕಟೇಶ್ ಹೆಚ್ ಚಿತ್ರದುರ್ಗ,ನವ ದೆಹಲಿ. 7760023887

Share This Article
error: Content is protected !!
";