ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಕಾಂತಾರ ಅಧ್ಯಾಯ-1 ಚಲನಚಿತ್ರದ ಹಾಸ್ಯ ಕಲಾವಿದ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಆಗುಂಬೆಯಲ್ಲಿ ಜರುಗಿದೆ.
ತೀರ್ಥಹಳ್ಳಿ ತಾಲೂಕಿನ ಸುತ್ತಮುತ್ತ ಕಳೆದ ಕಳೆದ 15 ದಿನಗಳಿಂದ ಕಾಂತಾರ ಅಧ್ಯಾಯ-1ರ ಸಿನೆಮಾದ ಚಿತ್ರೀಕರಣ ನಡೆಯುತ್ತಿತ್ತು.
ಕೇರಳದ ತ್ರಿಶೂರ್ ಮೂಲದ ಹಾಸ್ಯ ಕಲಾವಿದ ನಿಜು ಕಲಾಭವನ್(55) ಬುಧವಾರ ಶೂಟಿಂಗ್ಗೆಂದು ಆಗಮಿಸಿದ್ದರು. ಆಗುಂಬೆಯ ಮಿಥಿಲ ಹೋಂ ಸ್ಟೇನಲ್ಲಿ ನಿಜು ಸೇರಿದಂತೆ ಇತರರಿಗೆ ಉಳಿದುಕೊಳ್ಳಲು ಚಿತ್ರತಂಡ ವ್ಯವಸ್ಥೆ ಮಾಡಿಕೊಟ್ಟಿತ್ತು.
ಬುಧವಾರ ರಾತ್ರಿ ಹೋಂಸ್ಟೇನಲ್ಲಿ ನಿಜು ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆಗ ತಕ್ಷಣವೇ ಅವರನ್ನು ಆಂಬ್ಯುಲೆನ್ಸ್ನಲ್ಲಿ ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ನಿಜು ಕೊನೆಯುಸಿರೆಳೆದಿದ್ದಾರೆ. ಆಗುಂಬೆ ಪೊಲೀಸ್ ಠಾಣೆಯ ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಮೃತ ನಿಜು ಅವರ ಕುಟುಂಬಕ್ಕೆ ಮಾಹಿತಿ ನೀಡಿಲಾಗಿದೆ. ಅವರ ಕುಟುಂಬದವರು ತ್ರಿಶೂರ್ನಿಂದ ಹೊರಟಿದ್ದು, ತೀರ್ಥಹಳ್ಳಿಗೆ ಬಂದ ನಂತರ ದೂರು ಸ್ವೀಕರಿಸಿ ಆಗುಂಬೆ ಪೊಲೀಸರು ಮುಂದಿನ ಕ್ರಮ ಜರುಗಿಸಲಿದ್ದಾರೆ ಎಂದು ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ ಕಲಗುಜ್ಜಿ ತಿಳಿಸಿದ್ದಾರೆ.
ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಯ ಶವಗಾರದಲ್ಲಿ ನಿಜು ಶವವನ್ನು ಇಡಲಾಗಿದೆ. ಇದಕ್ಕೂ ಮೊದಲು ಕಾಂತಾರ-2 ಚಿತ್ರ ತಂಡದ ಇಬ್ಬರು ಕಲಾವಿದರು ಸಾವನ್ನಪ್ಪಿದ್ದನ್ನ ಸ್ಮರಿಸಬಹುದಾಗಿದೆ.