ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತುಮಕೂರು–ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಪ್ರಗತಿ ಕುರಿತಂತೆ ಸಂಸತ್ತಿನಲ್ಲಿ ಸಂಸದ ಗೋವಿಂದ ಕಾರಜೋಳ ಅವರು ರೈಲ್ವೆ ಸಚಿವರಿಗೆ ಪ್ರಶ್ನೆ ಕೇಳಿದ್ದಾರೆ. ಈ ಮಾರ್ಗದ ಭೂ-ಸ್ವಾಧೀನ, ಅರಣ್ಯ ತೀರುವಳಿ ಹಾಗೂ ಬಾಕಿ ಇರುವ ವಿಷಯಗಳ ಕುರಿತು ರೈಲ್ವೆ ಇಲಾಖೆ ರಾಜ್ಯ ಸರ್ಕಾರದೊಂದಿಗೆ ಸಭೆಗಳನ್ನೇನ್ನಾದರೂ ಆಯೋಜಿಸುತ್ತಿದೆಯಾ ?
ಅದೇ ರೀತಿ ೨೦೨೪-೨೫ ನೇ ಸಾಲಿನ ರೈಲ್ವೆ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದಾದರೂ ಹೊಸ ಯೋಜನೆಗಳನ್ನೇನಾದರೂ ಘೋಷಣೆ ಮಾಡಲಾಗಿದೆಯಾ ?
ಈ ಬಗ್ಗೆ ಮಾಹಿತಿ ನೀಡಿ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ರವರು ಬಜೆಟ್‌ನಲ್ಲಿ ರಾಜ್ಯವಾರು ಬಜೆಟ್ ಹಂಚಿಕೆ ಮಾಡುವುದಿಲ್ಲ, ಬದಲಾಗಿ ರೈಲ್ವೆ ವಲಯವಾರು ಅನುದಾನ ಹಂಚಿಕೆ ಮಾಡಲಾಗುತ್ತದೆ. ಕರ್ನಾಟಕ ರಾಜ್ಯವು ನೈರುತ್ಯ ರೈಲ್ವೆ ವಲಯದಿಂದ ಆವರಿಸಿಕೊಂಡಿದ್ದು,
೨೦೨೪-೨೫ ನೇ ಸಾಲು ಸೇರಿದಂತೆ ಕಳೆದ ಮೂರು ವರ್ಷಗಳಲ್ಲಿ ನೈರುತ್ಯ ರೈಲ್ವೆ ವಲಯಕ್ಕೆ ೧೯ ಹೊಸ ಮಾರ್ಗ, ೩೭ ಡಬ್ಲಿಂಗ್ ಯೋಜನೆಗಳನ್ನು ಸೇರಿದಂತೆ ಒಟ್ಟು ೫೬ ಹೊಸ ಯೋಜನೆಗಳ ೬೧೫೯ ಕಿ.ಮೀ ಉದ್ದದ ಮಾರ್ಗಗಳನ್ನು ಮಂಜೂರು ಮಾಡಲಾಗಿದೆ.
೦೧.೦೪.೨೦೨೪ ರ ವರದಿಯಂತೆ ೨೧ ಹೊಸ ಮಾರ್ಗ ಹಾಗೂ ೧೦ ಡಬ್ಲಿಂಗ್ ಸೇರಿದಂತೆ ೩೮೪೦ ಕಿ.ಮೀ ಉದ್ದದ ರೂ.೪೭,೦೧೬ ಕೋಟಿ ಮೊತ್ತದ ವಿವಿಧ ಯೋಜನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ.
ಇದರಲ್ಲಿ ಈಗಾಗಲೇ ೧೩೦೨ ಕಿ.ಮೀ ಉದ್ದದ ಮಾರ್ಗವನ್ನು ಪೂರ್ಣಗೊಳಿಸಲು ರೂ.೧೭,೩೮೩ ಕೋಟಿ ಹಣ ಖರ್ಚು ಮಾಡಲಾಗಿದೆ ಎಂದಿದ್ದಾರೆ.
೨೦೦೯ ರಿಂದ ೨೦೧೪ ರವರೆಗಿನ ಯು.ಪಿ.ಎ. ಆಡಳಿತಾವಧಿಯಲ್ಲಿ ೮೩೫ ಕೋಟಿ ಅನುದಾನ ನೈರುತ್ಯ ರೈಲ್ವೆ ವಲಯಕ್ಕೆ ಹಂಚಿಕೆಯಾಗಿದ್ದರೆ, ೨೦೨೪-೨೫ ಒಂದೇ ವರ್ಷದಲ್ಲಿ ಮೋದಿಜಿ ನೇತೃತ್ವದ ಸರ್ಕಾರ ರೂ,೭,೫೫೯ ಕೋಟಿ ಅನುದಾನ ಹಂಚಿಕೆ ಮಾಡುವ ಮೂಲಕ ಹತ್ತು ಪಟ್ಟು ಅನುದಾನವನ್ನು ಹೆಚ್ಚು ಹಂಚಿಕೆ ಮಾಡಿದೆ ಎಂದಿದ್ದಾರೆ.
೨೦೦೯ ರಿಂದ ೨೦೧೪ ರವರೆಗೆ ೫೬೫ ರೈಲ್ವೆ ಮಾರ್ಗ ನಿರ್ಮಾಣಗೊಂಡಿದ್ದರೆ, ೨೦೧೪ ರಿಂದ ೨೦೨೪ ರವರೆಗೆ ೧,೬೩೩ ಕಿ.ಮೀ ನೂತನ ಮಾರ್ಗ ನಿರ್ಮಾಣವಾಗಿದೆ.
ತುಮಕೂರು-ದಾವಣಗೆರೆ ೧೯೧ ಕಿ.ಮೀ ಉದ್ದದ ನೇರ ರೈಲು ಮಾರ್ಗಕ್ಕೆ ಈಗಾಗಲೇ ಮಾರ್ಚ್ ೨೦೨೪ ರವರೆಗೆ ರೂ.೩೫೯.೩೨ ಕೋಟಿ ಅನುದಾನ ಖುರ್ಚು ಮಾಡಲಾಗಿದ್ದು, ೨೦೨೪-೨೫ ನೇ ಸಾಲಿಗೆ ೧೫೦ ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆ. ಸುಮಾರು ೮೭೫ ಹೆಕ್ಟೇರ್ ಭೂ-ಸ್ವಾಧೀನವಾಗಿದ್ದು, ಭೂ-ಸ್ವಾದೀನವಾಗಿರುವ ಕಡೆ ಈಗಾಗಲೇ ಟೆಂಡೆರ್ ಕರೆದು ಕಾಮಗಾರಿ ಪ್ರಾರಂಭಿಸಲಾಗಿದೆ ಎಂದಿದ್ದಾರೆ.
ಯಾವುದೇ ರೈಲ್ವೆ ಯೋಜನೆಗಳು ತ್ವರಿತ ಗತಿಯಲ್ಲಿ ಪೂರ್ಣಗೊಳ್ಳಲು ಶೀಘ್ರವಾಗಿ ಭೂ-ಸ್ವಾಧೀನ ಮಾಡುವುದು, ಶೀಘ್ರವಾಗಿ ಅರಣ್ಯ ತೀರುವಳಿ ಮಾಡಿಕೊಡುವದು, ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಹಂಚಿಕೆಯನ್ನು ತ್ವರಿತವಾಗಿ ಜಮ ಮಾಡುವುದು, ಭೂ-ಸ್ವಾಧೀನಗೊಂಡ ಸ್ಥಳದಲ್ಲಿನ ಯುಟಿಲಿಟೀಸ್‌ಗಳ ಸ್ಥಳಾಂತರ ಮಾಡುವುದು, ಯೋಜನೆ ಅನುಷ್ಟಾನದ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಈ ಎಲ್ಲಾ ಅಂಶಗಳು ಯೋಜನೆಗಳು ಪೂರ್ಣಗೊಳ್ಳುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದಿದ್ದಾರೆ, ಇದಕ್ಕೆ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗವೂ ಕೂಡ ಹೊರತಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ.