ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಲ್ಯಾಣ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಿ ಆ ಭಾಗದ ಜನರಿಗೆ ಮಣ್ಣೆರಚಿದ್ದೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಾಧನೆ. ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿ ಕಲ್ಯಾಣ ಕರ್ನಾಟಕದ ಜನರ ಆರೋಗ್ಯ, ಶಿಕ್ಷಣ, ಸಾಕ್ಷರತೆ, ಆರ್ಥಿಕತೆ ಸುಧಾರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಿಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 2024-25 ನೇ ಸಾಲಿನ ಬಜೆಟ್ ನಲ್ಲಿ 5 ಸಾವಿರ ಕೋಟಿ ಮೊತ್ತದ ಕ್ರಿಯಾ ಯೋಜನೆ ರೂಪಿಸಲು ಅನುಮೋದನೆ ನೀಡಿದ್ದ ಕಾಂಗ್ರೆಸ್ ಸರ್ಕಾರ ಆರ್ಥಿಕ ವರ್ಷದ ಅಂತ್ಯ ತಲುಪಿದರೂ ಈ ಸಾಲಿನ ಅನುದಾನದಲ್ಲಿ ನಯಾ ಪೈಸೆ ಬಿಡುಗಡೆ ಮಾಡದೇ ತನ್ನ ಬೊಕ್ಕಸ ಬರಿದಾಗಿಸಿಕೊಂಡು ಆರ್ಥಿಕವಾಗಿ ದಿವಾಳಿ ಅಂಚಿನತ್ತ ತಲುಪಿರುವುದಕ್ಕೆ ನಿದರ್ಶನ. ಜೊತೆಗೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಈ ಸರ್ಕಾರಕ್ಕೆ ಎಳ್ಳಷ್ಟೂ ಕಾಳಜಿಯಿಲ್ಲ ಎನ್ನುವುದನ್ನು ಸಾಕ್ಷೀಕರಿಸುತ್ತಿದೆ ಎಂದು ಅವರು ದೂರಿದ್ದಾರೆ.
ಹಿಂದುಳಿದ ಪ್ರದೇಶಗಳೆನಿಸಿಕೊಂಡಿರುವ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಈ ಸರ್ಕಾರದ ಕೊಡುಗೆಗಳು ಏನೇನೂ ಇಲ್ಲ, ಅಭಿವೃದ್ಧಿಯ ಹಾದಿಯಲ್ಲಿ ಬರೀ ಶೂನ್ಯ, ಭ್ರಷ್ಟತೆಯ ಸಾಲು, ಸಾಲು ಹಗರಣಗಳು, ಸಾಮಾಜಿಕ ಶೋಷಣೆಗಳು, ಸ್ತ್ರೀ ಕುಲದ ಮೇಲಿನ ದೌರ್ಜನ್ಯಗಳು ಹತ್ತು ಹಲವು. ಇಂದಿಗೂ ಲಕ್ಷಾಂತರ ಜನ ಗುಡಿಸಲು ವಾಸಿಗಳಾಗಿದ್ದಾರೆ, ಸ್ವಂತ ಸೂರಿಲ್ಲದೇ ವಸತಿ ಹೀನರಾಗಿದ್ದಾರೆ. ಇವರಿಗಾಗಿ ಒಂದೇ ಒಂದು ನಿವೇಶವನ್ನು ವಿತರಿಸಲಾಗಿಲ್ಲ. ಕಾಂಗ್ರೆಸ್ ಸರ್ಕಾರ ಎಂದಿನಂತೆ ತನ್ನ ಅಭಿವೃದ್ಧಿ ವಿರೋಧಿ ನಿಲುವು ಅನುಸರಿಸಿ ಸಾಗಿದಲ್ಲಿ ಕಲ್ಯಾಣ ಕರ್ನಾಟಕದ ಜನ ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ಕಾಲ ದೂರವಿಲ್ಲ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.