ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜನಾಕ್ರೋಶಕ್ಕೆ ಮಣಿದು ಮತ್ತೊಮ್ಮೆ ಉಲ್ಟಾ ಹೊಡೆದ ಯೂ-ಟರ್ನ್ ಸರ್ಕಾರ! ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ.
ಪ್ರತಿಪಕ್ಷಗಳ ಹೋರಾಟ ಮತ್ತು ಜನಾಕ್ರೋಶಕ್ಕೆ ಮಣಿದು ಬಿಪಿಎಲ್ ಕಾರ್ಡುಗಳನ್ನು ಏಕಾಏಕಿ ರದ್ದು ಮಾಡುವ ಪ್ರಕ್ರಿಯೆಗೆ ತಡೆ ನೀಡಿದೆ ಈ ಎಡಬಿಡಂಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಂದು ಅವರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಸಿಎಂ ಸಿದ್ದರಾಮಯ್ಯ ನವರೇ, ರದ್ದಾದ ಬಿಪಿಎಲ್ ಕಾರ್ಡುಗಳನ್ನು ವಾಪಸ್ಸು ಕೊಟ್ಟರೆ ಸಾಲದು. ಬಡವರಿಗೆ ವಂಚಿತವಾಗಿರುವ ರೇಷನ್ ಕೊಡಲೇ ವಿತರಣೆ ಮಾಡಬೇಕು. ಬಿಪಿಎಲ್ ಕಾರ್ಡುದಾರರಿಗೆ ಲಭ್ಯವಿರುವ ಆರೋಗ್ಯ ಸೇವೆ, ಗೃಹಲಕ್ಷ್ಮೀ ಹಣ ಸೇರಿದಂತೆ ಎಲ್ಲ ಸೌಲಭ್ಯಗಳನ್ನೂ ಮರುಸ್ಥಾಪನೆ ಮಾಡಿ ಹಿಂದಿನ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಅಶೋಕ್ ತಾಕೀತು ಮಾಡಿದ್ದಾರೆ.
ಈ ಕುರಿತಂತೆ ಸಂಬಂಧಪಟ್ಟ ಇಲಾಖೆಗಳಿಗೆ, ನ್ಯಾಯಬೆಲೆ ಅಂಗಡಿಗಳಿಗೆ ಯಾವುದೇ ಗೊಂದಲವಾಗದಂತೆ ಸ್ಪಷ್ಟವಾದ ಅಧಿಕೃತ ಸುತ್ತೋಲೆ ಹೊರಡಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಡಬೇಕು. ಯಾವುದೇ ಬಿಪಿಎಲ್ ಕಾರ್ಡುದರರು ಅವರ ಸೌಲಭ್ಯಗಳಿಂದ ವಂಚಿತರಾಗದಂತೆ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಆರ್.ಅಶೋಕ್ ಆಗ್ರಹ ಮಾಡಿದ್ದಾರೆ.