ಇಂದಿನಿಂದ ಮೂರು ದಿನಗಳ ಕಾಲ ಕರ್ನಾಟಕ ಇಂಟರ್ನ್ಯಾಷನಲ್ ಟ್ರಾವೆಲ್ ಎಕ್ಸ್‌ಪೋ

News Desk

ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಕರ್ನಾಟಕದ ಪ್ರವಾಸೋದ್ಯಮ ಮಾಹಿತಿಯನ್ನು ವಿಶ್ವ ಮಟ್ಟಕ್ಕೆ ಪರಿಚಯಿಸುವ ಉದ್ದೇಶದಿಂದ ಫೆಬ್ರವರಿ
26ರಿಂದ ಫೆಬ್ರವರಿ 28ರವರೆಗೆ ಮೂರು ದಿನಗಳ ಕಾಲ ಕರ್ನಾಟಕ ಇಂಟರ್ನ್ಯಾಷನಲ್ ಟ್ರಾವೆಲ್ ಎಕ್ಸ್‌ಪೋ– 2025 ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಅವರು ಹುಬ್ಬಳ್ಳಿ ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಂ ಸೊಸೈಟಿಯ ಸಹಯೋಗದಲ್ಲಿ ನಡೆಯಲಿರುವ ಈ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ಫೆ.26 ರಂದು ಉದ್ಘಾಟಿಸಲಿದ್ದಾರೆ. ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯವೂ ಪಾಲ್ಗೊಳ್ಳಲಿದೆ ಎಂದು ಅವರು ತಿಳಿಸಿದರು.

- Advertisement - 

ತುಮಕೂರು ರಸ್ತೆಯ ಮಾದಾವರದಲ್ಲಿನ ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್​ನಲ್ಲಿ ಫೆಬ್ರವರಿ 27 ಮತ್ತು 28ರಂದು ಸಮಾವೇಶ ನಡೆಯಲಿದ್ದು ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ರಾಜ್ಯಕ್ಕೆ ಪ್ರಸ್ತುತ ಒಂದು ವರ್ಷದಲ್ಲಿ 1 ಕೋಟಿ 25 ಲಕ್ಷಕ್ಕೂ ಅಧಿಕ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಕರ್ನಾಟಕದಾದ್ಯಂತ ಅಸಂಖ್ಯಾತ ಪ್ರವಾಸಿ ತಾಣಗಳು, 25 ಸಾವಿರಕ್ಕೂ ಹೆಚ್ಚು ಅರಕ್ಷಿತ ಸ್ಮಾರಕಗಳಿವೆ. ಇದರಲ್ಲಿ 800ಕ್ಕೂ ಹೆಚ್ಚು ಸ್ಮಾರಕಗಳ ರಕ್ಷಣೆ ಮಾಡಲಾಗಿದೆ. ಇವುಗಳನ್ನು ಬೆಳಕಿಗೆ ತರುವ ಕೆಲಸ ಮಾಡಲಾಗುವುದು ಎಂದು ಸಚಿವ ಪಾಟೀಲ್ ತಿಳಿಸಿದರು.

- Advertisement - 

ಪ್ರವಾಸೋದ್ಯಮದ ಸಮಗ್ರ ಬೆಳವಣಿಗೆಯ ಮುಖ್ಯ ಉದ್ದೇಶದಿಂದ ಕಲೆ, ಸಂಸ್ಕೃತಿ, ಪರಂಪರೆ, ಇತಿಹಾಸ, ಕರಕುಶಲ ಉತ್ಪನ್ನಗಳು, ಪಾಕ ಪದ್ದತಿ, ನೃತ್ಯ ಪ್ರಕಾರಗಳು, ಜೀವನ ಶೈಲಿ, ಅತಿಥಿ ಸತ್ಕಾರಗಳು ಸಮಾವೇಶದಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ಹೆಚ್.ಕೆ.ಪಾಟೀಲ್ ತಿಳಿಸಿದರು.

ಬೆಳಗಾವಿ ಘಟನೆ: ರಾಜ್ಯ ಸರ್ಕಾರ ಬೆಳಗಾವಿ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಮುಂದೆ ಈ ರೀತಿ ಆಗದಂತೆ ಜಾಗೃತಿ ವಹಿಸಲಾಗುವುದು. ಕೆಲವೊಂದು ವಿಕೃತ ಮನಸ್ಥಿತಿಯಿಂದ ನಿರ್ವಾಹಕನ ಮೇಲೆ ಪೋಕ್ಸೋ ಕೇಸ್ ಆಗಿದೆ. ಕಾನೂನಾತ್ಮಕವಾಗಿ ಸಮಸ್ಯೆ ಬಗೆಹರಿಸಲಾಗುವುದು. ಕನ್ನಡ-ಮರಾಠಿ ಸಾಮರಸ್ಯ ಕೆಡಿಸುವವರನ್ನು ಮಟ್ಟ ಹಾಕಲಾಗುವುದು. ಕಾನೂನು ಕೈಗೆತ್ತಿಕೊಳ್ಳುವವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಕಾನೂನು ಸಚಿವರು ಎಚ್ಚರಿಸಿದರು.

ಐಎಸಿಸಿ ಮುಖ್ಯಸ್ಥರಾದ ಮಲ್ಲಿಕಾರ್ಜುನ ‌ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ ಬದಲಾವಣೆ, ಮುಂದಿನ ಚುನಾವಣೆ ಯಾರ ನೇತೃತ್ವದಲ್ಲಿ ಎಂಬ ಬಗ್ಗೆ ಯಾರೂ ಏನೂ ಮಾತನಾಡಬಾರದು ಎಂದು ಸೂಚನೆ ನೀಡಿದ್ದಾರೆ. ನಾವು ಕಾಂಗ್ರೆಸ್​ನ ಶಿಸ್ತಿನ ಸಿಪಾಯಿಗಳು, ಹಾಗಾಗಿ ಆ ವಿಷಯಗಳ ಕುರಿತು ಮಾತನಾಡುವುದಿಲ್ಲ  ಎಂದು ತಿಳಿಸಿದರು.

 

Share This Article
error: Content is protected !!
";