ದರೋಡೆಕೋರರು ಹಾಗೂ ಅತ್ಯಾಚಾರಿಗಳ ತಾಣವಾದ ಕರ್ನಾಟಕ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂಸ್ಕೃತಿ, ಸಂಸ್ಕಾರ, ಸುರಕ್ಷತೆ ಎಂದರೆ ಕರ್ನಾಟಕ ಎಂಬ ಖ್ಯಾತಿ ಪಡೆದಿದ್ದ ನಮ್ಮ ರಾಜ್ಯ ದರೋಡೆಕೋರರು ಹಾಗೂ ಅತ್ಯಾಚಾರಿಗಳ ತಾಣ ಎಂಬ ಕುಖ್ಯಾತಿಗೆ ಒಳಗಾಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ರಾಜಧಾನಿ ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಒಬ್ಬಂಟಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ದರೋಡೆ ನಡೆದಿರುವ ವರದಿ ಅತ್ಯಂತ ಹೇಯ ಹಾಗೂ ಅಮಾನವೀಯ ಘಟನೆಯಾಗಿದ್ದು ಸ್ತ್ರೀ ಕುಲಕ್ಕೆ ರಕ್ಷಣೆ ನೀಡಲು ಸಾಧ್ಯವಾಗದ ಪರಿಸ್ಥಿತಿಗೆ ರಾಜ್ಯದ ಕಾನೂನು ಸುವ್ಯವಸ್ಥೆ ಬಂದು ತಲುಪಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಾಪ್ರಹಾರ ಮಾಡಿದ್ದಾರೆ.

 ಕೇವಲ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲೀಗ ನಡೆಯುತ್ತಿರುವುದು ಗುಂಪುಗಾರಿಕೆಯ ರಾಜಕಾರಣ ಹಾಗೂ ಕಾಂಗ್ರೆಸ್ ಉತ್ಸವಗಳು ಮಾತ್ರ, ಜನಹಿತ ಹಾಗೂ ಸಮಾಜ ಸುರಕ್ಷತೆಯನ್ನು ಮರೆತಿರುವ ಈ ಸರ್ಕಾರದ ವ್ಯವಸ್ಥೆಯಲ್ಲಿ ನಾಗರೀಕರು ಅಸುರಕ್ಷತೆಯ ವಾತಾವರಣ ಎದುರಿಸುತ್ತಿದ್ದಾರೆ. ಈ ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಇದೆಯೇ? ಗೃಹ ಇಲಾಖೆ ಇದೆಯೇ? ಒಂದು ಸರ್ಕಾರ ಈ ರಾಜ್ಯವನ್ನು ಆಳುತ್ತಿದೆಯೇ? ಎಂಬ ಪ್ರಶ್ನೆ ಜನಸಾಮಾನ್ಯರಿಂದ ಕೇಳಿ ಬರುತ್ತಿದೆ ಎಂದು ತಿಳಿಸಿದ್ದಾರೆ.

ಒಂದು ಕಡೆ ಅಭಿವೃದ್ಧಿಯೂ ಇಲ್ಲ, ಮತ್ತೊಂದು ಕಡೆ ಆಡಳಿತ ನಿರ್ವಹಣೆಯಲ್ಲಿಯೂ ಸಂಪೂರ್ಣ ವಿಫಲ, ಕನಿಷ್ಠ ಕಾನೂನು ಸುರಕ್ಷಣೆಯನ್ನಾದರೂ ಒದಗಿಸಲಾಗದ ಈ ಸರ್ಕಾರ ಯಾವ ಮುಖ ಹೊತ್ತುಕೊಂಡು ಅಧಿಕಾರದಲ್ಲಿದೆ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅತ್ಯಾಚಾರಿ ದುರುಳರನ್ನು ಪತ್ತೆ ಹಚ್ಚಿ ಕಠಿಣ ಕ್ರಮಕ್ಕೆ ಒಳಪಡಿಸಲಿ ಎಂದು ವಿಜಯೇಂದ್ರ ಆಗ್ರಹ ಮಾಡಿದ್ದಾರೆ.

ಸರಣಿ ರೂಪದಲ್ಲಿ ನಡೆಯುತ್ತಿರುವ ಕೊಲೆ, ದರೋಡೆ ಪ್ರಕರಣಗಳು, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದ್ದು, ರಾಜ್ಯದಲ್ಲಿ ಅರಾಜಕತೆ ಪರಿಸ್ಥಿತಿ ಉಂಟಾಗಿರುವುದನ್ನು ಸಾಕ್ಷೀಕರಿಸುತ್ತಿದೆ.

ಇಂತಹ ಘಟನೆಗಳು ಮರುಕಳಿಸುತ್ತಿದ್ದರೆ ಈ ಸರ್ಕಾರಕ್ಕೆ ಜನರೇ ತಕ್ಕಪಾಠ ಕಲಿಸುವ ಪರಿಸ್ಥಿತಿ ಉದ್ಭವಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಕರ್ನಾಟಕ ಬಿಜೆಪಿ ಈ ನಿಟ್ಟಿನಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆಯ ಭದ್ರತೆಗಾಗಿ ಹೋರಾಡಲಿದೆ ಎಂದು ಅವರು ಎಚ್ಚರಿಸಿದ್ದಾರೆ.

 

 

- Advertisement -  - Advertisement -  - Advertisement - 
Share This Article
error: Content is protected !!
";