ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕ್ವಾಂಟಮ್ ಕ್ರಾಂತಿಗೆ ಕರ್ನಾಟಕ ಮಾದರಿಯಾಗಿದೆ. 10ವರ್ಷದಲ್ಲಿ 20 ಬಿಲಿಯನ್ ಡಾಲರ್ ಗುರಿ ಹೊಂದಲಾಗಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಕರ್ನಾಟಕ ರಾಜ್ಯವನ್ನು ಕ್ವಾಂಟಮ್ ಜಾಗತಿಕ ಶಕ್ತಿ ಕೇಂದ್ರವನ್ನಾಗಿಸುವ ಸಂಬಂಧ ‘ಕರ್ನಾಟಕ ಕ್ವಾಂಟಮ್ ಕ್ರಿಯಾಯೋಜನೆ’ ಬಗ್ಗೆ ಚರ್ಚಿಸಲು ಸಣ್ಣ ನೀರಾವರಿ ಹಾಗೂ ವಿಜ್ಞಾನ-ತಂತ್ರಜ್ಞಾನ ಸಚಿವರಾದ ಬೋಸೆರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೈಗಾರಿಕೆ ಸಚಿವರು ಪಾಲ್ಗೊಂಡು ಮಾತನಾಡಿದರು.
ಈ ಸಭೆಯು ದೇಶದ ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿಯಾಗಲಿದ್ದು, ಮುಂದಿನ 10 ವರ್ಷಗಳಲ್ಲಿ ಕ್ವಾಂಟಮ್ ಪ್ರೇರಿತ 20 ಬಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ನಮ್ಮಸರ್ಕಾರ ಹೊಂದಿದೆ.
ಇದಕ್ಕೆ ಅನುಗುಣವಾಗಿ ಹಾಗೂ ರಾಷ್ಟ್ರೀಯ ಕ್ವಾಂಟಮ್ ಮಿಷನ್ ಗೆ ಪೂರಕವಾಗಿ ಕರ್ನಾಟಕ ಕ್ವಾಂಟಮ್ ಕ್ರಿಯಾ ಯೋಜನೆಯನ್ನು ರೂಪಿಸುವುದಕ್ಕೆ ಸಂಬಂಧಿಸಿದಂತೆ ಟಾಸ್ಕ್ ಫೋರ್ಸ್ ರಚಿಸುವ ಬಗ್ಗೆ ತಜ್ಞರೊಂದಿಗೆ ಸುದೀರ್ಘವಾಗಿ ಚರ್ಚಿಸಲಾಯಿತು ಎಂದು ಪಾಟೀಲ್ ತಿಳಿಸಿದರು.
ಐಟಿಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ, ರಾಯಚೂರು ಸಂಸದ ಕುಮಾರ್ ನಾಯ್ಕ್, ಉದ್ಯಮಿ ಕ್ರಿಸ್ ಗೋಪಾಲಕೃಷ್ಣ,IBM, l&T, QpiAI; ಕಂಪನಿಯ ಪ್ರತಿನಿಧಿಗಳು, IISC IITಧಾರವಾಡ, IIT ರಾಯಚೂರು, NCBE ವಿಜ್ಞಾನಿಗಳು ಹಾಗೂ ತಜ್ಞರು, ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳು ಸೇರಿದಂತೆ ಕ್ವಾಂಟಮ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.