ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತದ ಸೆಮಿಕಂಡಕ್ಟರ್ ಕನಸಿಗೆ ಕರ್ನಾಟಕದ ಶಕ್ತಿ ಆಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ರಾಜ್ಯದ ಸೆಮಿಕಂಡಕ್ಟರ್ ವಲಯದ ಬೆಳವಣಿಗೆಗೆ ಹೊಸ ವೇಗ ದೊರೆತಿದ್ದು, ಚಿಪ್ ಕ್ರಾಂತಿಗಾಗಿ ಕರ್ನಾಟಕ ಸಜ್ಜಾಗಿದೆ. ಇಂಗ್ಲೆಂಡ್ ಹೂಡಿಕೆ ಪ್ರವಾಸದಲ್ಲಿಯೂ ಜಾಗತಿಕ ಕಂಪನಿಗಳು ಕರ್ನಾಟಕದ ಉದ್ಯಮ ಸ್ನೇಹಿ ಪರಿಸರಕ್ಕೆ ಮನಸೋತು ತಮ್ಮ ಬಂಡವಾಳವನ್ನು ಹೂಡಲು ಮುಂದಾಗಿವೆ.
ಸೆಮಿಕಂಡಕ್ಟರ್ ವಲಯದಲ್ಲಿ ರಾಜ್ಯವು ದಾಪುಗಾಲು ಇಡುತ್ತಿದೆ. ಈಗಾಗಲೇ ಅಪ್ಲೈಡ್ ಮೆಟೀರಿಯಲ್ಸ್, ಲ್ಯಾಮ್ ರಿಸರ್ಚ್ ಮತ್ತು ಭಾರತ್ ಸೆಮಿ ಸಿಸ್ಟಮ್ಸ್ ಸಂಸ್ಥೆಗಳಿಂದ ಒಟ್ಟು ₹23,000 ಕೋಟಿ ಹೂಡಿಕೆ ಖಾತ್ರಿಯಾಗಿದೆ. ಕ್ವಿನ್ ಸಿಟಿಯ 200 ಎಕರೆ ಪ್ರದೇಶದಲ್ಲಿ ಸೆಮಿಕಂಡಕ್ಟರ್ ಪಾರ್ಕ್ ನಿರ್ಮಾಣವಾಗುತ್ತಿದೆ, ಇದು ರಾಜ್ಯದ ತಂತ್ರಜ್ಞಾನ ಮತ್ತು ಉದ್ಯಮ ಹಬ್ ಆಗಿ ಕೆಲಸ ಮಾಡಲಿದೆ.
ಕರ್ನಾಟಕವು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ನೀಡುತ್ತಿದ್ದು ಈಗಾಗಲೇ ಏರೋಸ್ಪೇಸ್ & ಡಿಫೆನ್ಸ್, ಐಟಿ, ಮಶಿನ್ ಟೂಲ್ಸ್ ಮತ್ತು ಏರೋಸ್ಪೇಸ್ & ಡಿಸೈನ್ ಕ್ಷೇತ್ರಗಳಲ್ಲಿ ಅಗ್ರ ಸ್ಥಾನದಲ್ಲಿದೆ. ನಮ್ಮ ಸರ್ಕಾರದ ವಿನೂತನ ನೀತಿಗಳು ಮತ್ತು ಕರ್ನಾಟಕದ ಉದ್ಯಮ ಸ್ನೇಹಿ ಪರಿಸರದ ಪರಿಣಾಮ ಭಾರತದ ಸೆಮಿಕಂಡಕ್ಟರ್ ರಾಜಧಾನಿಯಾಗಿ ಕರ್ನಾಟಕ ಕಂಗೊಳಿಸಲಿದೆ ಎಂದು ಸಚಿವ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

