ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭ್ರಷ್ಟಾಚಾರದ ವಿಷಯವಾಗಿ ಕನ್ನಡಿಗರು ಉತ್ತರ ಭಾರತದ ರಾಜ್ಯಗಳತ್ತ ಬೆರಳು ತೋರುತ್ತಿದ್ದ (ಮೇವು ಹಗರಣ ಇತ್ಯಾದಿ) ಕಾಲವೊಂದಿತ್ತು. ಆಗಲೂ ನಮ್ಮಲ್ಲಿ ಭ್ರಷ್ಟಾಚಾರ ಇರಲಿಲ್ಲವೆಂದಲ್ಲ. ಅದು ಸಹ್ಯ ಎಂಬಂತೆ ಇತ್ತು.
ವಚನ ಪಾಲನೆ, ನುಡಿದಂತೆ ನಡೆದಿದ್ದೇವೆ, ಜನಪರ ಕಾಳಜಿ, ಕುಟುಂಬ ರಾಜಕಾರಣ, ಹೈಕಮಾಂಡ್ ಸಂಸ್ಕೃತಿ ಇತ್ಯಾದಿ ಹೆಸರಲ್ಲಿ ಅಧಿಕಾರ ನಡೆಸಿದ ನಮ್ಮ ರಾಜ್ಯದ ರಾಜಕಾರಣಿಗಳ ನಿಜವಾದ ಬಣ್ಣ ದಿನೇ ದಿನೇ ಬಯಲಾಗುತ್ತಿರುವುದು ನಿಜಕ್ಕೂ ಅಸಹ್ಯ ಹುಟ್ಟಿಸಿದೆ, ಹುಟ್ಟಿಸುತ್ತಲೇ ಇದೆ.
ಜನರಹಿತ ಗೌಣವಾಗಿ ಹೋಗಿ ಬಹಳ ದಿನಗಳೇ ಆಗಿದೆ. ಕುವೆಂಪು ಹೇಳಿದಂತೆ ರಾಜ್ಯದಲ್ಲಿ ಪ್ರತಿದಿನ ರಾಜಕೀಯ ಪ್ರಹಸ ನಡೆದಿವೆ. ತನ್ನ ಸಮಸ್ಯೆಗಳನ್ನೆ ಮರೆತು ಇವರ ದಗಲ್ಬಾಜಿ ರಾಜಕೀಯ ನಾಟಕವನ್ನು ಕನಿಕರದಿಂದ ನೋಡುವಂತಾಗಿರುವುದು ಕನ್ನಡಿಗರ ದುರ್ದೈವ.
ಪಂಪ ಹೇಳಿದಂತೆ ‘ಅರಸು ರಾಕ್ಷಸ, ಮಂತ್ರಿ ಎಂಬುವ ಮೊರೆವ ಹುಲಿ….‘ ಗಳಾಗಿ ಬಹಳ ದಿನಗಳೇ ಆಗಿದೆ. ‘ವಚನ ಭ್ರಷ್ಟತೆ‘ ಹೆಸರಲ್ಲಿ ರಾಜ್ಯದ ಜನರ ಮನವೊಲಿಸಿ ಮುಖ್ಯಮಂತ್ರಿ ಆದ ಯಡಿಯೂರಪ್ಪನವರು ಚನ್ನಪಟ್ಟಣದ ಬೀದಿಗಳಲ್ಲಿ ಕುಮಾರಸ್ವಾಮಿ ಹೆಗಲಿಗೆ ನಿಂತಿರುವುದು,
ಬಿಜೆಪಿ ಸೇರಿದಂತೆ ಈ ದೇಶದ ಎಲ್ಲ ರಾಜಕೀಯ ಪಕ್ಷಗಳ ಸದಸ್ಯರಾದ ಸೈನಿಕ ಈಗ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ರಾರಾಜಿಸುವ ದೃಶ್ಯವಂತೂ ಅಡಿಗರ “ಕುರುಕ್ಷೇತ್ರ ಚಾಚುತ್ತಲಿದೆ ದೇಶದುದ್ದಕ್ಕೂ; ಪಾತ್ರಗಳೇನೋ/ ಅವೇ; ಪಾತ್ರಧಾರಿಗಳು ಬೇರೆ, ಬೇರೆ;/ ದುರ್ಯೋಧನನಿಗೆ ಯುಧಿಷ್ಠಿರ ವೇಷ, ಶಕುನಿಯೇ/ ಶ್ರೀಕೃಷ್ಣ; ಪಾರ್ಥನ ವೇಷ ಉತ್ತರನಿಗೆ.”- ಎಂಬ ಸಾಲುಗಳು ಇಂದಿನ ನಮ್ಮ ರಾಜಕೀಯ ಚಿತ್ರಣಕ್ಕೆ ಹೇಳಿಬರೆಸಿದ ಸಾಲುಗಳಂತಿವೆ. ಅದಕ್ಕೆ ಕುವೆಂಪು ಹೇಳಿದ್ದು: ‘ಇದು ಮೂರು ದಿನದ ರಾಜಕೀಯ ನಾಟಕ‘- ಎಂದು.
ಈಗ ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿರುವುದರಿಂದ ಇದುವರೆಗೆ ಆಡಳಿತ ನಡೆಸಿದವರ ಭ್ರಷ್ಟಾಚಾರಗಳು ದಿನಕ್ಕೊಂದರಂತೆ ಬಯಲಾಗುತ್ತಿವೆ.
ತನಿಖೆ ಹಂತದ ವರದಿಗಳು (ಬೇಕೆಂದೇ) ಸೋರಿಕೆ ಆಗುತ್ತಿವೆ. ಮೂಡಾ ಹಗರಣಕ್ಕೆ ಪ್ರತ್ಯಾಸ್ತ್ರವಾಗಿ ಈಗ ಕೋವಿಡ್ ಹಗರಣದ ತನಿಖೆಯ ವರದಿಯ ಕೆಲವು ಪುಟಗಳಷ್ಟೇ, ಸಿನಿಮಾ ಟೀಸರ್ ರೀತಿ, ಉಪಚುನಾವಣೆ ಹಿನ್ನಲೆಯಲ್ಲಿ ಅಚಾನಕ್ ಎಂಬ ರೀತಿ ಮಾಧ್ಯಮಗಳಿಗೆ ಲಭಿಸಿವೆ.
ಅಂತಿಮ ವರದಿ ಬರಬಹುದು, ಬರದೇ ಇರಲೂಬಹುದು!!! ಹಿಂದಿನ ಎಷ್ಟೋ ವರದಿಗಳ ಪಾಡು ಏನಾಗಿದೆ ಎಂಬುದು ಎಲ್ಲರೂ ಬಲ್ಲರು. 2021ರಲ್ಲಿ ಆರೋಗ್ಯ ಸಚಿವರಾಗಿದ್ದ ಬಿ.ಶ್ರೀರಾಮುಲು ರವರು ಹೇಳಿಕೆಯಲ್ಲಿ ‘ ಒಂದೂವರೆ ವರ್ಷ ಸುಮ್ಮನಿದ್ದ ಸರ್ಕಾರ ಈಗ ತನ್ನ ಹಗರಣ ಮುಚ್ಚಿಕೊಳ್ಳಲು ಯಡಿಯೂರಪ್ಪ ಹಾಗೂ ನನ್ನ ವಿರುದ್ಧ ತನಿಖೆಗೆ ಯತ್ನಿಸುತ್ತಿದೆ. ಗೊಡ್ಡು ಬೆದರಿಕೆಗೆ ಜಗ್ಗುವುದಿಲ್ಲ‘, ಎಂದಿದ್ದಾರೆ.
ಭಾರತಮಾತೆ, ಸ್ವದೇಶ ಎಂಬೆಲ್ಲ ಮಾತನಾಡುವ ಬಿಜೆಪಿಯವರು ಸ್ಥಳೀಯ ಕಂಪನಿಗಳನ್ನು ಕಡೆಗಣಿಸಿ ಚೀನಾ ಕಂಪನಿಗೆ ಮಣೆ ಹಾಕಿರುವುದರ ಹಿಂದಿನ ಮರ್ಮ ಅರಿಯಲು ಕನ್ನಡಿಗರಿಗೆ ಕಷ್ಟವಾಗದು ಎಂದು ಭಾವಿಸಿದ್ದೇನೆ. ಸಕಾಲದಲ್ಲಿ ಕೋವಿಡ್ ಸೋಂಕಿತರಿಗೆ ಔಷಧಿ , ಆಸ್ಪತ್ರೆಗಳಲ್ಲಿ ಹಾಸಿಗೆ ದೊರೆಯದೆ ಜೀವ ಕಳೆದುಕೊಳ್ಳುವಂತಾದುದ್ದಕ್ಕೆ ಸರ್ಕಾರವನ್ನಲ್ಲದೆ ಮತ್ಯಾರು ಹೊಣೆಗಾರರಾಗಬೇಕು.
ಖಾಸಗಿ ಆಸ್ಪತ್ರೆಗಳಲ್ಲಿ ಸುಲಿಗೆ ನಿಯಂತ್ರಣ ಮಾಡುವಲ್ಲೂ ಅಂದಿನ ಸರ್ಕಾರದ ಮಂತ್ರಿಗಳು ಕಾರಣರು. ಈಗ ಕಾಲ ಉರುಳಿದೆ. ಆ ತೀವ್ರತೆ ಕಡಿಮೆ ಆಗಿದೆ. ಜನರು ನೋವು ಮರೆತಿದ್ದಾರೆ. ಹಾಗಾಗಿ ಅಂದಿನ ನಿಜವಾದ ತಪ್ಪಿತಸ್ಥರು ಸತ್ಯಹರಿಶ್ಚಂದ್ರರರಂತೆ ಮಾತನಾಡುತ್ತಿದ್ದಾರೆ.
ಉಪಚುನಾವಣೆಯ ಮತದಾನಕ್ಕೆ ಮೊದಲು ಇಂಥ ನೂರಾರು ಹಗರಣಗಳು ಬಯಲಾದರೂ ಆಶ್ಚರ್ಯಪಡಬೇಕಿಲ್ಲ. ಅಂತೂ ಕನ್ನಡಿಗರಿಗೆ, ಕನ್ನಡ ನಾಡಿಗೆ ಸದ್ಯದ ಮಟ್ಟಿಗೆ ಖಂಡಿತ ಉತ್ತಮ ದಿನಗಳಂತೂ ಗೋಚರಿಸುವ ಲಕ್ಷಣಗಳು ಕಾಣುತ್ತಿಲ್ಲ.
ಸಾರ್ವಜನಿಕ ಪತ್ರ-ಎಂ.ಜಿ. ರಂಗಸ್ವಾಮಿ, ಹಿರಿಯೂರು.