ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ಸಾಹಿತ್ಯ ಪರಿಷತ್ ಮತ್ತು ಪತ್ರಕರ್ತರ ಸಂಘಕ್ಕೆ ಪ್ರಾರಂಭಿಕವಾಗಿ ದೇಣಿಗೆ ನೀಡಿ, ಈ ಸಂಸ್ಥೆಗಳು ಎತ್ತರಕ್ಕೆ ಬೆಳೆಯಲು ಕಾರಣರಾದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಎನ್ನುವುದನ್ನುಕನ್ನಡನಾಡು ಎಂದೂ ಮರೆಯಲಾಗದ ಸಂಗತಿ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ಅಭಿಪ್ರಾಯಪಟ್ಟರು.
ಬೆಂಗಳೂರು ಕಂದಾಯ ಭವನದಲ್ಲಿರುವ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ)ಕಚೇರಿಗೆ ಸೌಹಾರ್ಧಯುತ ಭೇಟಿ ನೀಡಿದ್ದ ಅವರು, 1932ರಲ್ಲಿ ಡಿವಿಜಿ ಅವರಿಂದ ಸ್ಥಾಪಿತವಾದ ಸಂಘ 93 ವಸಂತಗಳನ್ನು ಕಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಮೇರು ಸಾಹಿತಿಯಾದ ಡಿವಿಜಿ ಪತ್ರಕರ್ತರೂ ಆಗಿದ್ದರು. ಇಲ್ಲಿ ಪತ್ರಕರ್ತರ ಸಂಘ ಸ್ಥಾಪನೆ ಮಾಡಿದ ಡಿವಿಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ, ಕನ್ನಡ ಸಾರಸ್ವತ ಲೋಕಕ್ಕೆ ಅನುಪಮ ಕೊಡುಗೆ ನೀಡಿದವರು ಎಂದು ಸ್ಮರಿಸಿಕೊಂಡರು.
ಇದೇ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರನ್ನು ಕಸಾಪ ಅಧ್ಯಕ್ಷರಾದ ನಾಡೋಜ ಮಹೇಶ್ ಜೋಶಿ ಅವರು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಅವರಿಗೆ ಸಂಘದ ಪತ್ರಕರ್ತ ನೆನಪಿನ ಸಂಚಿಕೆ ಮತ್ತು ಕೆಯುಡಬ್ಲೂಜೆ ಕ್ಯಾಲೆಂಡರ್ ನೀಡಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಇದ್ದರು.