ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಕಾವೇರಿ ಆರತಿ ಕಾರ್ಯಕ್ರಮಕ್ಕೆ ಏಕೆ 100 ಕೋಟಿ ವೆಚ್ಚ ಮಾಡಬೇಕು, ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಪ್ರಶ್ನಿಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಕಾವೇರಿ ಆರತಿಗೆ 100 ಕೋಟಿ ಏಕೆ ಬೇಕು? ಜೆಡಿಎಸ್ ನಾಯಕ ಪುಟ್ಟರಾಜು ಕೆರೆತೊಣ್ಣೂರಿನಲ್ಲಿ ಇಂತಹ ಕಾರ್ಯಕ್ರಮ ಮಾಡಿದಾಗ ಎಷ್ಟು ಖರ್ಚಾಗಿತ್ತು? ಇಷ್ಟೊಂದು ಬೃಹತ್ ಮೊತ್ತ ವೆಚ್ಚ ಮಾಡುವುದು ಏತಕ್ಕೆ? ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಆರ್ ಸಿಬಿ ಸಂಭ್ರಮಾಚರಣೆಯ ಕಾಲ್ತುಳಿತದ ವಿಚಾರದಲ್ಲಿ ರಾಜ್ಯ ಸರ್ಕಾರ ಗಂಟೆಗೊಂದು ನಿರ್ಧಾರ ಮಾಡುತ್ತಿದೆ. ಅಂತಿಮವಾಗಿ ಏನು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು. ಮೊದಲು ಮ್ಯಾಜಿಸ್ಟ್ರಿಯಲ್ ತನಿಖೆ ಎಂದರು. ಆಮೇಲೆ ನ್ಯಾಯಾಂಗ ತನಿಖೆ ಎಂದು ಹೇಳಿದರು. ಈಗ ಸಿಐಡಿಗೆ ಕೊಡುತ್ತೇವೆ ಎನ್ನುತ್ತಿದ್ದಾರೆ. ಅಂತಿಮವಾಗಿ ಯಾವ ತನಿಖೆ ವರದಿ ಪಡೆದುಕೊಳ್ಳುತ್ತಾರೆ ನೋಡೋಣ ಎಂದು ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದರು.
ಯಾವುದೇ ತೀರ್ಮಾನ ಮಾಡಿದರೆ ಅದರಲ್ಲಿ ಸ್ಪಷ್ಟತೆ ಇರಬೇಕು. ಇದನ್ನು ಸರಕಾರ ಎನ್ನಲು ಆಗುತ್ತದೆಯೇ? ಅಧಿಕಾರಿಗಳ ತಪ್ಪು ಏನಿತ್ತು? ಎಫ್‌ಐಆರ್‌ನಲ್ಲಿ ಅಧಿಕಾರಿಗಳು ಕರ್ತವ್ಯ ಲೋಪವಾಗಿಲ್ಲ ಎಂದು ಉಲ್ಲೇಖ ಮಾಡಿದ್ದಾರೆ. ಆದರೆ, ಈ ವಿಚಾರದಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಿಡಿಕಾರಿದರು.
ಪಹಲ್ಗಾಮ್, ಪ್ರಯಾಗ್‌ರಾಜ್‌ನಲ್ಲಿ ನಡೆದ ಘಟನೆಗಳನ್ನು ಹೇಳುತ್ತಿದ್ದಾರೆ. ಆ ಘಟನೆಗಳಿಗೂ ಇದಕ್ಕೂ ಏನು ಸಂಬಂಧ? ಇಲ್ಲಿ ಇವರು ಮಾಡಿರುವ ತಪ್ಪಿಗೆ ಪಹಲ್ಗಾಮ್, ಪ್ರಯಾಗ್‌ರಾಜ್ ವಿಚಾರ ತರುತ್ತಿದ್ದಾರೆ. ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದಾಗ ಮುಂಬೈ ಮೇಲೆ ಉಗ್ರರ ದಾಳಿ ಆಗಿತ್ತಲ್ಲವೇ? ಆಗ ಮನಮೋಹನ್‌ಸಿಂಗ್ ಅವರು ರಾಜೀನಾಮೆ ಕೊಟ್ಟಿದ್ದರಾ? ಕೇವಲ ಸಿಎಂ, ಡಿಸಿಎಂ ವರ್ಚಸ್ಸು ಹೆಚ್ಚಿಸಿಕೊಳ್ಳಲಿಕ್ಕೆ ಮಾಡಿದ ಶೋ ಇದು ಎಂದು ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.
ಕುಮಾರಸ್ವಾಮಿ ತಮ್ಮ ಆರೋಗ್ಯ ನೋಡಿಕೊಳ್ಳಲಿ ಎಂದು ಹೇಳಿರುವ ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿಕೆಗೆ ತಿರುಗೇಟು ಕೊಟ್ಟ ಕುಮಾರಸ್ವಾಮಿ ಅವರು, ನನ್ನ ಆರೋಗ್ಯವನ್ನು ದೇವರು ನೋಡಿಕೊಳ್ಳುತ್ತಾನೆ. ಮಂಡ್ಯ ಜನರ ಹಾರೈಕೆಯಿಂದ ನನಗೆ ಏನೂ ಆಗೋದಿಲ್ಲ. ನಾನು ಯಾವುದೇ ಒತ್ತಡದಲ್ಲಿ ಇಲ್ಲ. ಅವರೇ ಒತ್ತಡದಲ್ಲಿ ಇದ್ದಾರೆ ಎಂದು ಕುಮಾರಸ್ವಾಮಿ ಅವರು ಟಾಂಗ್ ನೀಡಿದರು.