ಚಂದ್ರವಳ್ಳಿ ನ್ಯೂಸ್, ವಿಜಯನಗರ:
ವಿಜಯನಗರ ಜಿಲ್ಲೆಯ ಐತಿಹಾಸಿಕ ಹಂಪಿ ಉತ್ಸವದ ಪ್ರಯುಕ್ತ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸುಮಾರು 150ಕ್ಕೂ ಹೆಚ್ಚು ಬೈಕ್‌ಗಳೊಂದಿಗೆ ಭರ್ಜರಿ ಬೈಕ್ ರ್ಯಾಲಿ ಆಯೋಜಿಸಲಾಯಿತು.
ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾದ ಈ ಬೈಕ್ ರ್ಯಾಲಿಗೆ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಚಾಲನೆ ನೀಡಿದರು. ರ್ಯಾಲಿಯು ಹೊಸಪೇಟೆ ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ, ಅನಂತಶಯನಗುಡಿ, ಕೊಂಡನಾಯಕನಹಳ್ಳಿ, ಮಲಪನಗುಡಿ, ಗಾಳೆಮ್ಮನಗುಡಿ, ಕಡ್ಡಿರಾಂಪುರ ಮಾರ್ಗವಾಗಿ ಹಂಪಿಯ ಶ್ರೀ ವಿರೂಪಾಕ್ಷ ದೇಗುಲದವರೆಗೆ ಯಶಸ್ವಿಯಾಗಿ ತಲುಪಿತು.
ರ್ಯಾಲಿಯಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಹಂಪಿ ಉತ್ಸವದ ಮಹತ್ವವನ್ನು ಜನತೆಗೆ ತಲುಪಿಸುವುದು ಹಾಗೂ ಪ್ರವಾಸೋದ್ಯಮ ಉತ್ತೇಜನವೇ ಈ ರ್ಯಾಲಿಯ ಪ್ರಮುಖ ಉದ್ದೇಶವಾಗಿತ್ತು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ಜಿಲ್ಲಾ ಪಂಚಾಯತ್ ಸಿಇಒ ಅಕ್ರಮ್ ಷಾ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಭಾಗವಹಿಸಿ ರ್ಯಾಲಿಗೆ ಬೆಂಬಲ ನೀಡಿದರು.

ಹೊಸಪೇಟೆ ನಗರದ ನಾನಾ ವೃತ್ತಗಳಲ್ಲಿ ನಡೆದ ಬೈಕ್ ಸಂಚಾರ ಸಾರ್ವಜನಿಕರ ಗಮನ ಸೆಳೆಯಿತು. ಐತಿಹಾಸಿಕ ಹಂಪಿಯ ವೈಭವವನ್ನು ಮತ್ತಷ್ಟು ಪ್ರಚಾರಗೊಳಿಸುವ ನಿಟ್ಟಿನಲ್ಲಿ ಹಂಪಿ ಉತ್ಸವಕ್ಕೆ ಈ ಬೈಕ್ ರ್ಯಾಲಿ ಹೊಸ ಉತ್ಸಾಹ ತುಂಬಿತು.

