ಕಾಯಕ ಶ್ರೇಷ್ಠ ಮರುಳ ಶಂಕರದೇವರು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಚನ ಕ್ರಾಂತಿಯ ಹರಿಕಾರ ಬಸವಣ್ಣನವರ ಸಮಾಜೋಧಾರ್ಮಿಕ ಕೀರ್ತಿ ವಾರ್ತೆ ಕೇಳಿ 12ನೇ ಶತಮಾನದಲ್ಲಿ ಅಪಘಾನಿಸ್ತಾನದಿಂದ ಬಂದು ಗುಪ್ತಭಕ್ತಿಯಲ್ಲಿ ತೊಡಗಿದ್ದ …

ಕಾಯಕ ಶ್ರೇಷ್ಠ ಮರುಳ ಶಂಕರದೇವರು-
“12ನೇ ಶತಮಾನದ ಕಲ್ಯಾಣ ನಾಡಿನ ಏಳು ನೂರು ಎಪ್ಪತ್ತು ಅಮರ ಗಣಂಗಳಲ್ಲಿ ಅಪಘಾನಿಸ್ತಾನದಿಂದ ಬಂದಿದ್ದ ಮರುಳ ಶಂಕರ ದೇವರ ಸಂಕ್ಷಿಪ್ತ ಜೀವನ ದರ್ಶನವನ್ನು” ಶರಣ ದರ್ಶನ” ಕೃತಿಯಲ್ಲಿನ ಲೇಖನವನ್ನು ಸಂಪಾದಿಸಿ ಕೊಟ್ಟಿದ್ದಾರೆ ಹವ್ಯಾಸಿ ಬರಹಗಾರರುದ್ರಮೂರ್ತಿ ಎಂ .ಜೆ”.

- Advertisement - 

12ನೇ ಶತಮಾನದಲ್ಲಿದ್ದ ಶರಣ ಮರುಳ ಶಂಕರ ದೇವರನ್ನು ಪರಿಚಯ ಮಾಡಿಕೊಳ್ಳುವುದಕ್ಕೂ ಮೊದಲು ಈ ಶತಮಾನದ ಒಟ್ಟಾರೆ ಆಗು ಹೋಗುಗಳನ್ನು ಅಂದರೆ ಅದರ ಮಹತ್ವವನ್ನು ಅವಲೋಕನ ಮಾಡಬಹುದು. ಬಸವಣ್ಣನವರ ಅನುಭವ ಮಂಟಪದಲ್ಲಿ ನೂರಾರು ಶರಣರು ಸಾಮಾಜಿಕ ಧಾರ್ಮಿಕ ಚರ್ಚೆಗಳಲ್ಲಿ ಭಾಗವಹಿಸಿದ್ದನ್ನು ನಾವು ಕಾಣುತ್ತೇವೆ. ಕಲ್ಯಾಣ ನಾಡಿನ ಸಮಾಜೋಧಾರ್ಮಿಕ ಕ್ರಾಂತಿಯಿಂದ ಆಕರ್ಷಿತರಾಗಿ ದೇಶ -ವಿದೇಶಗಳಿಂದಲೂ ಬಂದು ಇಲ್ಲಿನ  ಕಾಯಕ ಸಂಗಮವೇ ಕಲ್ಯಾಣದಲ್ಲಿ ಸೇರಿತ್ತು. ಲಕ್ಷದ ಮೇಲೆ ತೊಂಬತ್ತಾರು ಸಾವಿರ, ಪ್ರಪಂಚವೇ ನಿಬ್ಬರೆಗಾಗಿದೆ. ಮನುಕುಲಕ್ಕೆ ಒಳಿತಾಗುವಂತೆ ಅನೇಕ ಕಾರ್ಯಗಳನ್ನು ಮಾಡಿದವರು. ಇಂಥವರ ಸಾಲಿನಲ್ಲಿ ಶರಣ ಮರುಳ ಶಂಕರ ದೇವರು ಅನುಭವ ಮಂಟಪದ 770 ಅಮರ ಗಣಂಗಳ ಪೈಕಿ ಒಬ್ಬ ಶರಣರಾಗಿದ್ದರು.  ಷಟಸ್ಥಲ ತತ್ವದಲಿನ ಒಂದು ಸ್ಥೂಲವಾದ “ಪ್ರಸಾದಿ” ಸ್ಥಲದಲ್ಲಿದ್ದವರು.ಇಂಥವರನ್ನು ಕುರಿತಾಗಿ ನಾವು ಅಧ್ಯಯನ ಮಾಡುತ್ತಿದ್ದೇವಲ್ಲಾ ಇದು ನಿಜಕ್ಕೂ ನಮ್ಮೆಲ್ಲರ ಪುಣ್ಯ. ಇವರ 35 ವಚನಗಳು ಲಭ್ಯವಾಗಿದ್ದು. ಅವುಗಳಲ್ಲಿ ಪ್ರಸಾದ ತತ್ವದ ಪ್ರತಿಪಾದನೆಗೆ ಹೆಚ್ಚು ಆದ್ಯತೆ ಕಂಡುಬರುತ್ತದೆ.

ಲಿಂಗಪತಿ- ಶರಣಸತಿ : 12ನೇ ಶತಮಾನದ ಶರಣಗುಚ್ಚದ ಎಲೆ ಮರೆಯಲ್ಲಿ ಹುದುಗಿ, ನರುಗುಂಪಿನ ಸುವಾಸನೆ ಬೀರುವ ಕುಸುಮೋಪಾದಿಯಲ್ಲಿ ಕಂಡುಬರುವ ಶರಣ ಮರುಳ ಶಂಕರದೇವ .ಇವರದು ಅತ್ಯಂತ ವಿಶಿಷ್ಟವಾದ ವ್ಯಕ್ತಿತ್ವ. ಬಸವಣ್ಣನವರ ಸಮಕಾಲಿನರಾಗಿದ್ದರೂ ಯಾರಿಗೂ ಕಂಡೂ ಕಾಣದಂತೆ ತೊಳಗಿ ಬೆಳಗಿದ ಅನುಪಮ ಶರಣನೆಂದೆನಿಸಿಕೊಂಡವರು. ಇವರ ಕಾಲ ಕ್ರಿ.ಶ .1160 ಎಂಬುದಾಗಿ ವಿದ್ವಾಂಸರು ಗುರುತಿಸಿದ್ದಾರೆ. ಇವರ ತಂದೆ ತಾಯಿ ಯಾರು? ಇವರ ಸಾಂಸಾರಿಕ ಜೀವನ ಏನಾಗಿತ್ತು?, ಜೀವಿತದ ಕಾಲ ಯಾವುದು? ಇವರ ಸಂಪೂರ್ಣ ವ್ಯಕ್ತಿತ್ವಕ್ಕೆ ಪೂರಕವಾದ ವಿವರಗಳು ಆಗಲೇ ಹೇಳಿದಂತೆ ಶಂಕರ ದೇವರು ತಮ್ಮ ತಂದೆ ತಾಯಿ ಬಗೆಗೆ ಅವರ ಒಂದು ವಚನದಲ್ಲಿ  ಈ ಕೆಳಗಿನಂತೆ ನಿರೂಪಿಸಿದ್ದಾರೆ.

- Advertisement - 

ಮಹಾ ಶ್ರೀ ಗುರುವೇ ತಂದೆ ,ಮಹಾ ಜಂಗಮವೇ ತಾಯಿ .ಇವರಿಬ್ಬರ ಸಂಘ ಸಂಯೋಗದಿಂದ ನಾನು ಹುಟ್ಟಿದೆ ನೋಡಿರಯ್ಯಾ, ಸರ್ವಾಂಗ ಸಾಹಿತ್ಯ ಆನು ಹುಟ್ಟಿದ ಬಳಿಕ , ಆ ತಂದೆ ತಾಯಿಗಳಿಬ್ಬರು ಲಿಂಗವೆಂಬ ಹೆಣ್ಣು ತಂದು ,ಎನ್ನ ಕೊರಳಲ್ಲಿ ಕಟ್ಟಿ ಮದುವೆ ಮಾಡಿದರಯ್ಯಾ,  ಆ ಹೆಣ್ಣಿನ ಕೈ ಹಿಡಿದು ಆನು ಬದುಕಿದನು ಆ ಹೆಣ್ಣಿನ ಸಂಗ ಸಂಯೋಗದಿಂದ ಮಗನೆಂಬ ಮಹಾಲಿಂಗ ಹುಟ್ಟಿದನಯ್ಯಾ, ಆ ಮಗ ಹುಟ್ಟಿದ ಮುನ್ನವೇ ನಿನಗೆ ಮರಣವಾಯಿತ್ತು.

ಲಿಂಗವೆಂಬ ಹೆಂಡತಿ ಮುಂಡೆಯಾದಳು , ತಂದೆ ತಾಯಿಗಳಿಬ್ಬರು ಎನ್ನವರಾಗಿ ಅಡಗಿ ಹೋದರು. ಇನ್ನು ಮುನ್ನಿನ ಪರಿಯಂತುಂಟಲ್ಲವಾಗಿ ಆನು ಕಾಣಾ! ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೇ ಶಾಂತ ಚನ್ನಮಲ್ಲಿಕಾರ್ಜುನಯ್ಯಾ! ನಿಮ್ಮ ಶರಣರ ಕರುಣದಿಂದ ಎನ್ನ ಕರ್ಮ ನಿರ್ಮಳವಾಯಿತಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ”…!

ಈ ವಚನವು ಶಿವಭಕ್ತಿಯ ನೆಲೆಯಿಂದ ಪ್ರಾರಂಭವಾದ ಅವರ ಜೀವನ ಸಮರಸಗೊಂಡು ನಿರ್ಭಯಲಾದ ಪರಿಯನ್ನು ತಿಳಿಯಪಡಿಸುತ್ತದೆ.ಅಲ್ಲದೆ ಇಲ್ಲಿ ಶರಣಸತಿ- ಲಿಂಗಪತಿ ಎಂಬ ಭಾವವೂ ಗಮನಾರ್ಹವಾಗಿದೆ. ಸಾಮಾನ್ಯವಾಗಿ ಶರಣರು “ಲಿಂಗಪತಿ ಶರಣಸತಿ” ಎಂಬ ಭಾವಕ್ಕೆ ಒಲಿದರೆ ಮರುಳಶಂಕರ ದೇವರ ನಿಲುವು ಸೂಫಿ ಸಂಪ್ರದಾಯಕ್ಕೆ ಹತ್ತಿರವಾಗಿರುವುದನ್ನು ಸೂಚಿಸುತ್ತದೆ. ಇಲ್ಲಿ ಸ್ವತಃ ಶರಣ ಸತಿಯಾಗಿ ತನ್ನಂಗದೊಳಗಿರುವ ದೈವ ಸ್ವರೂಪದ ಲಿಂಗವನ್ನು ತನ್ನ ಪತಿಯನ್ನಾಗಿ ಒಪ್ಪಿಕೊಂಡಿರುವುದು ಕಂಡುಬರುತ್ತದೆ.

* ಹಿನ್ನೆಲೆ :- ಅವರ ನಿಲುವನ್ನು ನೋಡಿದರೆ ಅಪಘಾನಿಸ್ತಾನದಿಂದ ಬಂದಿರಬಹುದು ಎಂದು ಬೌದ್ಧ ಧರ್ಮದ ಅಹಿಂಸಾ ನಿಷ್ಠೆಯ ಕಾರಣದಿಂದ ಯಾವ ವೃತ್ತಿಯನ್ನು ಕೈಗೊಂಡರೂ, ಜೀವ ಹಿಂಸೆ ಇರುವುದನ್ನು ಮನಗಂಡು, ಶಿವಭಕ್ತರು ಸೇವಿಸಿ ಬಿಟ್ಟ ಪ್ರಸಾದವನ್ನು ಮಾತ್ರ ಸೇವಿಸಿ ಜೀವಿಸಿದ್ದ ಕಾರಣದಿಂದ, ಹೆಸರಿನಿಂದ” ಮರುಳ “ಎಂಬ ಹೆಸರು ಸೇರಿರುವುದೂ ಕಾರಣವಾಗಿರಬಹುದು. ಅವರು ಯಾವ ಕೆಲಸ ಮಾಡುತ್ತಿರಲಿಲ್ಲ, ಎಂದು ಲೆಕ್ಕ ಹಾಕುವುದಾದರೆ ಅಥವಾ ಯಾರಾದರೂ ವಿಚಾರಿಸುವುದಾದರೆ ಅದೇ “ಶರಣರು ಸ್ವೀಕರಿಸಿ ಬಿಟ್ಟ ಪ್ರಸಾದವನ್ನು ಒಟ್ಟುಗೂಡಿಸಿ ಪಶು ಪಕ್ಷಿಗಳಿಗೆ ಹಾಕುವುದನ್ನು ಮಾಡಿರುವ “ಸಾಧ್ಯತೆಗಳಿವೆ.

ಶಿವಭಕ್ತನೆಂಬ ನೈಸರನು ಶಂಕರದೇವರ ಗುರು. ಇವರು ಬದುಕಿನಲ್ಲಿ ಭಿಕ್ಷಾನ್ನವೇ ಪ್ರಸಾದವೆಂದು ತಿಳಿದು ಅದರಂತೆ ಬದುಕಿದ್ದರಂತೆ, ಅದೇ ರೀತಿ ಶಂಕರ ದೇವರು ಪ್ರಸಾದಿಸ್ಥಲವನ್ನು ತಿಳಿದುಕೊಳ್ಳಲು ಕಲ್ಯಾಣ ನಾಡಿಗೆ ಗುಪ್ತ ಭಕ್ತರಾಗಿ ಬಂದವರು.ಕೊನೆಯವರೆಗೂ ಗುರುವಿನಂತೆ ಪ್ರಸಾದಿಸ್ಥಲವನ್ನು ಸಂಪಾದಿಸಿದವರು. ಈ ಅಪಘಾನಿಸ್ತಾನವು ಪ್ರಾಚೀನ ಗಾಂಧಾರ ದೇಶವೆಂತಲೂ ಅಥವಾ ಮಹಾಭಾರತದ ಕುಂತಿಯ ದೇಶವೆಂತಲೂ ತಿಳಿಯಲಾಗಿದೆ. ಮರುಳ ಶಂಕರ ದೇವರ ಕುರಿತಾಗಿ

ಚಾಮರಸನ ಪ್ರಭುಲಿಂಗಲೀಲೆ , ಶೂನ್ಯ ಸಂಪಾದನೆ ಮತ್ತು ಭೈರವೇಶ್ವರ ಕಾವ್ಯದ  ಕಥಾಮಣಿ ಸೂತ್ರದ ಸೂತ್ರ ರತ್ನಾಕರ ಮುಂತಾದ ಗ್ರಂಥಗಳಲ್ಲಿ ಕಂಡು ಬರುತ್ತದೆ. ಈವರೆಗೆ ಮರುಳ ಶಂಕರ ದೇವರ 35 ವಚನಗಳು ದೊರೆತಿವೆ. ಅವುಗಳನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರು 1993ರಲ್ಲಿ ಪ್ರಕಟಿಸಿರುವ ಸಂಕೀರ್ಣ ವಚನ ಸಂಪುಟ ಮೂರು ಮತ್ತು ಸಮಗ್ರ ವಚನ ಸಂಪುಟ ಎಂಟರ ಜನಪ್ರಿಯ ಆವೃತ್ತಿಯಲ್ಲಿ ನೋಡಬಹುದು.

* ಉಲ್ಲೇಖ- ಅಂಕಿತ :- ಜಗಜ್ಯೋತಿ ಬಸವಣ್ಣನವರ ಸಮಕಾಲೀನರಾಗಿದ್ದ ಮರುಳ ಶಂಕರ ದೇವರು ಷಟಸ್ಥಲಗಳ ಅಂತರಂಗ ಬಹಿರಂಗ ಸಾಧನೆ ಮಾಡುತ್ತ ಪ್ರಸಾದಿ ಸ್ಥಲವನ್ನು ಸಂಪಾದಿಸಿದ ಶ್ರೇಷ್ಠ ಅನುಭವಿ ಶರಣ. ಪ್ರಭುಲಿಂಗಲೀಲೆಯಲ್ಲಿ ಮರುಳು ಶಂಕರ ದೇವರ ನಿರಾಬಾರಿ ನಿಲುವನ್ನು ಹಾಗೂ ಗುಪ್ತ ಭಕ್ತಿಯ ಮಹಿಮೆಯನ್ನು ತಿಳಿಸುವ ಪ್ರಸಂಗಗಳಿವೆ. ಇವರನ್ನು ಕುರಿತಾಗಿ ಎಳಂದೂರು ಹರಿಹರೇಶ್ವರ, ಶಾಂತಲಿಂಗದೇಶಿಕ, ವಿರುಪಾಕ್ಷ ಪಂಡಿತ ಮುಂತಾದ ಕವಿಗಳು ಪ್ರಸಾದಿಸ್ಥಲ ಸಂಪಾದಿಸಿದ ಹಿನ್ನೆಲೆಯಲ್ಲಿ ಇವರ ಹಲವಾರು ವೃತ್ತಾಂತಗಳನ್ನು ಉಲ್ಲೇಖಿಸಿದ್ದಾರೆ.

ಇವರ ವಚನಾಂಕಿತ ಇತರೆ ವಚನಕಾರರಕ್ಕಿಂತ ತೀರ ಭಿನ್ನವಾಗಿದ್ದು ಮತ್ತು ಬಹಳ ದೊಡ್ಡದಾಗಿದೆ. “ಶುದ್ಧ ಸಿದ್ದ ಪ್ರಸಿದ್ಧ ಪ್ರಭುವೇ  ಶಾಂತ ಚೆನ್ನಮಲ್ಲಿಕಾರ್ಜುನಯ್ಯ” ನಿಮ್ಮ ಸದ್ಭಕ್ತನ ನಿಲವಿನ ಪರಿಯ ನೀವೇ ಬಲ್ಲಿರಲ್ಲದೆ, ನಿನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ ಎಂಬುದಾಗಿದೆ. ಈ ಪ್ರತಿಯೊಂದು  ವಚನದ ಕೊನೆಯಲ್ಲಿ ನಿಮ್ಮ ಧರ್ಮ ಎಂದು ಮೂರು ಬಾರಿ ಹೇಳಿದ್ದಾರೆ. ಇವರ ವಚನದ ಸಾಲುಗಳು ಕನಿಷ್ಠ 10 ಸಾಲುಗಳಿಂದ ಗರಿಷ್ಠ 40 ಸಾಲುಗಳವರೆಗೆ ಇವೆ.

* ಚಾಮರಸನ ಪ್ರಭುಲಿಂಗಲೀಲೆಯಲ್ಲಿ :-ನಮಗೆಲ್ಲಾ ಗೊತ್ತಿರುವಂತೆ  ಪ್ರಭುದೇವರು ದೇಶ ಸಂಚಾರ ಮುಗಿಸಿಕೊಂಡು ಮತ್ತೆ ಕಲ್ಯಾಣಕ್ಕೆ ಬರುತ್ತಾರೆ. ಇದೇ ಸಂದರ್ಭದಲ್ಲಿ ಬಸವಣ್ಣನವರು ಅನುಭವ ಮಂಟಪನ್ನು ರಚನೆ ಮಾಡಿದ ಮೇಲೆ ಅದರ ಅಧ್ಯಕ್ಷರನ್ನಾಗಿ ಅಲ್ಲಮಪ್ರಭುವನ್ನು ಮಾಡಲು ಸುಮಾರು ವರ್ಷಗಳಿಂದ ಕಾಯುತ್ತಿರುತ್ತಾರೆ. ಅಲ್ಲಮಪ್ರಭು ದೇವರು ಬಸವಣ್ಣನವರ ಮಹಾಮನೆಗೆ ಬರುವಾಗಲೇ ಹಗಲಿರುಳು ಪ್ರಸಾದದ ಕುಂಡದ ತೀರದಲ್ಲಿ ಕೂತು, ಶರಣರು ಸ್ವೀಕರಿಸಿ ಬಿಟ್ಟ ಪ್ರಸಾದವನ್ನು ಒಟ್ಟುಗೂಡಿಸುವ ಕಾಯದಲ್ಲಿ ಶಂಕರ ದೇವರು ನಿರತರಾಗಿರುತ್ತಾರೆ. ಅದು ಯಾರಿಗೂ ತಿಳಿಯದ ಹಾಗೆ 12 ವರ್ಷಗಳ ಕಾಲ ಗುಪ್ತಭಕ್ತರಾಗಿ, ಉದಾಹರಣೆಯಾಗಿ ಹೇಳುವುದಾದರೆ ಶಿಲೆಯ ಮರೆಯ ಹೊನ್ನಿನಂತೆ, ತಿಲದ ಮರೆಯ ತೈಲದಂತೆ ,ನೆಲದ ಮರೆಯ ನಿಧಾನದಂತೆ ಮರುಳ ವೇಷದಲ್ಲಿ ಹೀಗೆ ತನ್ನಂಗಳದಲ್ಲಿಯೇ ಎಷ್ಟೋ ವರ್ಷಗಳ ಕಾಲ ಯಾರ ಕಣ್ಣಿಗೂ ಕಾಣದಂತೆ ಯಾರಿಗೂ ಹೇಳದಂತೆ ವಾಸವಾಗಿರುವುದನ್ನು ಅರಿಯದೆ ಹೋದನೆಲ್ಲಾ ಎಂದು ಬಸವಣ್ಣನವರ ಗಮನಕ್ಕೆ ತರುವ ಬಹುದೊಡ್ಡ ಕೆಲಸ ಮಾಡುತ್ತಾರೆ. ಮರುಳ ಶಂಕರದೇವರ ದೇವರನ್ನು ಅಪ್ಪಿಕೊಂಡಂತೆ ಬಸವಣ್ಣನವರು ಮರುಳಶಂಕರ ನಾಮದಲ್ಲಿ ಶಂಕರನೇ ಬಂದಿಹನು ಎಂದು ಅವರ ಸಾತ್ವಿಕ ಭಕ್ತಿಯ ಅನುಪಮ ವ್ಯಕ್ತಿತ್ವವನ್ನು ಕಂಡು ಕರುಣೆಯಲ್ಲಿ ಐಕ್ಯಪದವಿಯನ್ನು ಕರುಣಿಸುತ್ತಾರೆ. ಹೀಗೆ ಬಸವಣ್ಣನವರ ಸಮಕಾಲೀನರಾಗಿದ್ದ ಮರುಳ ಶಂಕರ ದೇವರು ಪ್ರಸಾದ ಕುಂಡದಲ್ಲಿ (ತಗ್ಗಿನ ಪ್ರದೇಶದಲ್ಲಿ) “ಮರುಳ”ನಂತೆ ಬಾಹ್ಯ ರೂಪಧಾರಿಯಾಗಿ ಅಂತರಂಗದಲ್ಲಿ ಶಿವಪ್ರಸಾದಿಯಂತೆ ಬೆಳೆದು ನಿಂತಿರುವ ಅಸಮಾನ್ಯ ವ್ಯಕ್ತಿತ್ವ ವಿಶೇಷವನ್ನು ಕವಿ ಚಾಮರಸ ತನ್ನ ಕಾವ್ಯದಲ್ಲಿ ಸಮಯಾನುಸಾರ ಚಿತ್ರಿಸಿದ್ದಾನೆ.

ಗುಳೂರು ಸಿದ್ಧವೀರನ ಶೂನ್ಯ ಸಂಪಾದನೆಯಲ್ಲಿ: ಮರುಳ ಶಂಕರ ದೇವರ ಸಂಪಾದನೆಯ ಭಾಗವೇ ಕಂಡುಬರುತ್ತದೆ. ಇಲ್ಲಿನ ಪ್ರಸಂಗವನ್ನು ನೋಡುವುದಾದರೆ ಇದು ಸಂಭಾಷಣ ರೂಪದಲ್ಲಿ ಸೊಗಸಾಗಿ ಚಿತ್ರಿಸಲಾಗಿದೆ. ಮೇಲೆ ತಿಳಿಸಿದಂತೆ ಅಲ್ಲಮ ಪ್ರಭುದೇವರು ಬಸವಣ್ಣನ ಮನೆಯ ಕಡೆಗೆ ಬರುತ್ತಾ ಇರುತ್ತಾರೆ. ಆಕಸ್ಮಿಕವಾಗಿ ಅವರ ಮನೆಯ ಮುಂದೆ ಅಥವಾ ಪಕ್ಕದಲ್ಲಿ ಪ್ರಸಾದದ ದೊಡ್ಡ ಗುಂಡಿಯೊಂದು ಕಾಣುತ್ತದೆ. ಅದರ ಹತ್ತಿರಕ್ಕೆ ಹೋಗಿ ದಿಟ್ಟಿಸಿ ನೋಡುತ್ತಾ ನಿಲ್ಲುತ್ತಾರೆ. ಅವರಿಗೆ ಅಲ್ಲಿ ಒಂದು ಅತಿಶಯವಾದ ದೃಶ್ಯ ಕಾಣುತ್ತದೆ. ಬಸವಣ್ಣನವರನ್ನು ಕಂಡು ಮಾತನಾಡಿಸುತ್ತಾ ನಿನ್ನ ಭಕ್ತಿ ಎಂಬ ವೃಕ್ಷದ ಪಸರಣೆಯನ್ನು ಆಶ್ರಯಿಸಬೇಕೆಂದು ಹೊಸದು ಬಂದ ಮಹಾತ್ಮರು ಅಗಣಿತ. ಅವರಲ್ಲಿ ನಿನಗಾರು ಸಮಾನರು ಎಂದು  ಪ್ರಶ್ನಿಸುತ್ತಾರೆ.

ನಂತರ ಆ ಗುಂಡಿಯ ಒಳಗೆ ಕೂತಂತ ಶರಣ ಶಂಕರ ದೇವರನ್ನು ನೋಡಿ ಬಹಳ ಪ್ರೀತಿಯಿಂದ ಮಾತನಾಡಿಸುತ್ತಾರೆ ಈ ಮರುಳ ಶಂಕರ ದೇವರಿಗೆ ವಸುಮತಿಯಲ್ಲಿ ಸಾಟಿ ಇಲ್ಲ. ಇಂಥಪ್ಪ ಅಸಮರೆಲ್ಲರೂ ನಿನ್ನ ಬಾಗಿಲನ್ನು ಮುಸರಿಕೊಂಡಿಹರಾಗಿ ನೀನೇ ಕೃತಾರ್ಥನಲ್ಲವೇ? ಎಂದಾಗ ನಿಮ್ಮ ಶರಣ ಬಸವಣ್ಣನ ಪರಿಯ ನೀವೇ ಬಲ್ಲಿರಲ್ಲದೆ ನಾನೆತ್ತ ಬಲನಯ್ಯ ನಿಮ್ಮ ಧರ್ಮ ನಿಮ್ಮ ಧರ್ಮ ಎಂದು ಮರುಳ ಶಂಕರ ದೇವರು ಮಾರುತ್ತರ ನೀಡುತ್ತಾರೆ. ಇದೇ ಸಂದರ್ಭದಲ್ಲಿ ಸೊಲ್ಲಾಪುರದಿಂದ ಅಲ್ಲಮನೊಂದಿಗೆ ಕಲ್ಯಾಣಕ್ಕೆ ಬಂದ ಸಿದ್ದರಾಮನಿಗೆ ಈ ದೃಶ್ಯ ನೋಡಿ ಕುತೂಹಲವಾಗುತ್ತದೆ. ಮೊದಲೇ ಬಸವಣ್ಣನವರ ಬಗೆಗೆ ಅಲ್ಪ-ಸಲ್ಪ ಕೇಳಿ ತಿಳಿದುಕೊಂಡಿದ್ದ ಸಿದ್ದರಾಮನಿಗೆ ಉತ್ಸಾಹ ಹೆಚ್ಚಾಗಿತ್ತು. ಅವರ ವಿಷಯ ಕುರಿತ ಇನ್ನಷ್ಟು ಮಾಹಿತಿ ನನಗೆ ತಿಳಿಸಬೇಕೆಂದು ಅಲ್ಲಮನನ್ನು ಕೇಳುತ್ತಾನೆ. ಅಲ್ಲಮಪ್ರಭುಗಳು ಶಂಕರದೇವರ ವ್ಯಕ್ತಿತ್ವವನ್ನು ಬಹುವಾಗಿ ವರ್ಣಿಸುತ್ತಾರೆ.

ಅದರಲ್ಲೂ ಪ್ರಭುವಿನ ಮೆಚ್ಚುಗೆಗೆ ಪಾತ್ರರಾಗುವುದು ಅಷ್ಟೊಂದು ಸುಲಭವಲ್ಲ. ಇದೇ ಸಂದರ್ಭದಲ್ಲಿ ಬಸವಣ್ಣ ತನ್ನ ಮನೆಯಂಗಳದಲ್ಲಿದ್ದ ಶಿವಭಕ್ತರನ್ನು ಅರಿಯದೆ ಹೋದೆನಲ್ಲಾ ಎಂಬ ದುಃಖದಿಂದ ಕೊರಗುತ್ತಾನೆ.

* ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರದಲ್ಲಿ :- ಬರ್ಬರ ದೇಶದ ಕಣ್ಬತ್ತೂರಿನಲ್ಲಿ ನೈಸರನೆಂಗ ಒಬ್ಬ ಭಿಕ್ಷುಕನಿದ್ದನು. ಅವನು ಆಶ್ರಮದ ಬಳಿ ಸಾಯುತ್ತಾ ಬಿದ್ದಿದ್ದ ನಾಯಿಯೊಂದನ್ನು ಕರುಣೆಯಿಂದ ನೋಡಿ, ಭಿಕ್ಷಾನ್ನ ತಿನ್ನಿಸಿದನು. ಆಯುಷ್ಯ ಮುಗಿದಿದ್ದ ಆ ನಾಯಿ ಪ್ರಸಾದವನ್ನು ತಿಂದು ನಂತರ ಸತ್ತು ಹೋಯಿತು. ಆದರೆ ನೈಸರನು ನೀಡಿದ ಪ್ರಸಾದ ಸೇವಿಸಿದ್ದ ಫಲವಾಗಿ ಆ ನಾಯಿ ಮುಂದಿನ ಜನ್ಮದಲ್ಲಿ ಸಿರಿಚೋಳನೆಂಬ ರಾಜನಾಗಿ ಹುಟ್ಟಿತು. ಒಂದು ದಿನ ರಾಜನು ತನ್ನ ಹಿಂದಿನ ಜನ್ಮವನ್ನು ನೆನೆದು ನೈಸರನ ಬಳಿ ಹೋಗಿ ನಿಮ್ಮ ಪ್ರಸಾದದ ಮಹಿಮೆಯ ಫಲದಿಂದ ನಾನು ರಾಜನಾದ ವಿಚಾರ ಹೇಳಲು ಆತನು ನಂಬಲಿಲ್ಲ. ಇಬ್ಬರೂ ಆ ಊರಿನ ನೀಲಕಂಠೇಶ್ವರನ ಬಳಿಗೆ ಬಂದು ಕೇಳಲು,ಅವರು ನಿಜಾಂಶ ತಿಳಿಸಿದರು. ನೈಸರನು ಒಪ್ಪದೇ ಕೋಪದಲ್ಲಿ ತನ್ನ ದಂಡದಿಂದ ಅವನನ್ನು ತಿವಿದನು. ಆಗ ನೀಲಕಂಠೇಶ್ವರನು ತಾನು ಪ್ರಸಾದದ ಮಹಿಮೆಯನ್ನು ಜಗತ್ತಿಗೆ ತಿಳಿಸಲು ಹಾಗೆ ಮಾಡಿದ್ದಾಗಿ ಹೇಳಿ ಅವರಿಬ್ಬರಿಗೂ ಮುಕ್ತಿ ನೀಡಿದನು. ಅಲ್ಲಿಯೇ ಇದ್ದ ಮತ್ತು ಈ ವಿಚಾರವನ್ನು ಆಲಿಸಿದ ಮರುಳ ಶಂಕರ ದೇವರು ಶಿವಪ್ರಸಾದದ ಮಹಿಮೆ ಅರಿಯಲು ಕಳಿಂಗ ದೇಶದಿಂದ ಕಲ್ಯಾಣಕ್ಕೆ ಬಂದು ಬಸವಣ್ಣನ ಮಹಾಮನೆ ಅಂಗಳದಲ್ಲಿದ್ದ ಪ್ರಸಾದ ಹೊಂಡದಲ್ಲಿ ಯಾರಿಗೂ ಕಾಣದಂತೆ 12 ವರ್ಷವಿದ್ದರೂ ಅಲ್ಲಿಯೇ ಶರಣರ ಜೀವನದ ಚೈತನ್ಯಗಳಿಂದ ಸ್ಪೂರ್ತಿ ಪಡೆದು ಗುಪ್ತ ಭಕ್ತಿಯ ಸಾಧನೆ ಮಾಡಿದರು. ಬಸವಾದಿ ಶರಣರೆಲ್ಲ ಅಚ್ಚರಿ ಪಡುವಂತೆ 12 ವರ್ಷಗಳ ಕಾಲ ಸಾಧನೆ ಸಿದ್ಧಿ ಪಡೆದ ಈ ಶರಣರನ್ನು ನೋಡಿದ ಅಲ್ಲಮ ಎಲ್ಲರಿಗೂ ಪರಿಚಯಿಸಿದ ನಂತರ ಶಂಕರ ದೇವರು ಬಯಲಾದರು.

ಒಟ್ಟಾರೆ ಮರುಳ ಶಂಕರ ದೇವರು ಬಸವಣ್ಣನ ಮಹಾಮನೆ, ಪ್ರಸಾದದ ಹೊಂಡದಲ್ಲಿದ್ದರೆಂಬುದಾಗಿ ವಚನವೊಂದರಿಂದ ನಮಗೆ ತಿಳಿದು ಬರುತ್ತದೆ. ಈ ಪ್ರಸಾದದ ಹೊಂಡದ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳಿವೆ. ಶರಣರು ಪೂಜಿಸಿ ಹೊರ ತೆಗೆದ ಹೂ ಪತ್ರಿಗಳನ್ನು ಇತರರು ತುಳಿಯಬಾರದೆಂದು ಆ ಹೊಡದಲ್ಲಿ ಹಾಕುತ್ತಿದ್ದರು  ಅದೇ ಹೊಂಡಲದಲ್ಲಿ ಈ ಮರುಳ ಶಂಕರ ದೇವರು ವಾಸವಾಗಿದ್ದರು ಎಂಬ ಅಭಿಪ್ರಾಯವಿದೆ. ಕೇವಲ ಪತ್ರಿ ಪುಷ್ಪವಲ್ಲದೆ ತಾವು ಸ್ವೀಕರಿಸಿದ ಪ್ರಸಾದದಲ್ಲಿನ ಮಿಕ್ಕಿದ್ದನ್ನು ಪ್ರಸಾದದ ಹೊಂಡದಲ್ಲಿ ಹಾಕುತ್ತಿದ್ದರು ಎಂಬುದು ಸ್ವತಃ ಮರುಳ ಶಂಕರ ದೇವರ ವಚನವೇ ಸ್ಪಷ್ಟಪಡಿಸುತ್ತದೆ.

ಲೌಕಿಕವೆಂಬ ಸಂಸಾರ ಸಾಗರದಲ್ಲಿ ಇಳಿದ ಮೇಲೆ ಬರುವ ಎಲ್ಲಾ ಸಮಸ್ಯೆಗಳನ್ನು ಅನುಸರಿಸಿಕೊಂಡು ಅಥವಾ ಒಂದೊಂದಾಗಿ ಗೆಲ್ಲುತ್ತಾ ಮೋಕ್ಷವೆಂಬ ದಡವನ್ನು ತಲುಪಬೇಕು. ಈ ಕುರಿತು ಅನೇಕ ದೃಷ್ಟಾಂತಗಳ ಮೂಲಕ ಮರುಳ ಶಂಕರ ದೇವರು ಇಲ್ಲಿ ಚಿತ್ರಿಸಿದ್ದಾರೆ. ಎದುರುಗಡೆ ಸಾಗರದಂತ ಸಂಸಾರ ವ್ಯಾಪಿಸಿದಾಗ ಹೇಗೆ ದಾಟಬೇಕೆಂದು ಎದೆಗುಂದಿದರೆ ಅದು ತಲೆಯುದ್ಧವಾಗಿ ಬಿಡುತ್ತದೆ. ಅಲ್ಲಿ ಈಜುವುದು ಯುದ್ಧದಷ್ಟೇ ಎನಿಸಿಬಿಡುತ್ತದೆ. ಆಗ ಬಹಳ ಸುಲಭವಾಗಿ ದಾಟಬಹುದು. ಅನುಪಮ ಪ್ರಸಾದಿ ಅವಿರಳ ಜ್ಞಾನಿ ಮರುಳ ಶಂಕರ ದೇವರು ಪ್ರಸ್ತುತ ವಚನದಲ್ಲಿ ಅಂಬಿಗರಣ್ಣನನ್ನು ನಂಬಿ ಹರಿಗೋಲನೇರಿ ಸಂಸಾರವೆಂಬ ಸಾಗರವನ್ನು ದಾಟಬೇಕೆಂದು ಹೇಳಿದ್ದಾರೆ.

ಅಂಬಿಗರಣ್ಣನೆಂದರೆ ಇಲ್ಲಿ ಬೇರಾರು ಅಲ್ಲ. ನಮ್ಮ ಸದ್ಗುರು ಅಥವಾ ನಮ್ಮ ಆಧ್ಯಾತ್ಮಿಕ ಜ್ಞಾನ .ಇದು ಅಳವಟ್ಟರೆ ಸಂಸಾರದ ಅನಿತ್ಯತೆ ಖಚಿತವಾಗಿ, ವ್ಯಾಮೋಹಗಳು ತನ್ನಷ್ಟಕ್ಕೆ ತಾನೇ ಮಾಯವಾಗುತ್ತವೆ.” ಅರಿವೇ ಗುರು “?ಅಲ್ಲವೇ ಮೇಲಿನ ವಚನದಲ್ಲಿ ಶಿವಶರಣ ಮರುಳ ಶಂಕರ ದೇವರು ಜ್ಞಾನವೆಂಬ ಅಂಬಿಗ ಅರುಹೆಂಬ ಅರಿಗೋಲನಿಕ್ಕಿ ಎಂಬ ರೂಪಕವನ್ನು ಸೃಷ್ಟಿಸಿದ್ದಾನೆ. ಇಲ್ಲಿ ವ್ಯವಹಾರ ಜ್ಞಾನವನ್ನೂ ಅರುಹವೆಂದು ಕರೆಯಬಹುದು. ಆಧ್ಯಾತ್ಮಿಕ ಜ್ಞಾನವೆಂಬ ಅಂಬಿಗನ ಬಲದಿಂದ ವ್ಯವಹಾರ ಜ್ಞಾನವೆಂಬ ಅರಿಗೋಲನ್ನು  ಹತ್ತಿ ಸಂಸಾರ ಸಾಗರದಲ್ಲಿ ಇಳಿಯಬೇಕು.

ಹೀಗೆ ಹೊಳೆ ಇಳಿದಾಗ ಸಹಜವಾಗಿ ಕಾಮವೆಂಬ ಕೊರಡು, ಕ್ರೋದವೆಂಬ ಸುಳ್ಳು, ಅಹಂಕಾರವೆಂಬ ಮೀನು, ಅತ್ಯಾಶೆ ಎಂಬ ಮೊಸಳೆ, ಸತಿಸುತ ಬಂಧುಗಳೆಂಬ ವ್ಯಾಮೋಹಲೋಭವೆಂಬ ಪ್ರವಾಹ ಇವೆಲ್ಲವೂ ನಮ್ಮನ್ನು ಹೋಗಬೇಕಾದಲ್ಲಿಗೆ ಕೊಂಡಯ್ಯದೆ ವಿರುದ್ಧ ದಿಕ್ಕಿಗೆ ಎಳೆದೊಯ್ಯುತ್ತವೆ. ಮದವೆಂಬ ಸೆಳೆವಿನಿಂದಲೂ ತಪ್ಪಿಸಿಕೊಳ್ಳಲಾಗುವುದಿಲ್ಲ. ಆದರೂ ನಮ್ಮಲ್ಲಿ  ಸುಜ್ಞಾನವೆಂಬ ಸಟ್ಟುಗ ಮಹಾಜ್ಞಾನವೆಂಬ ಘಾತಗಳು ಇರುವವರೆಗೂ ಯಾವ ಅಡೆತಡೆಗಳು ನಿಲ್ಲಿಸಲಾರವು. ಅವು ಮೋಕ್ಷವೆಂಬ ಗುರಿಯೆಡೆಗೆ  ಸಾಗಿಸುತ್ತವೆ.

ಒಟ್ಟಾರೆ ಮರುಳ ಶಂಕರ ದೇವರಲ್ಲಿ ವಿಶೇಷವಾಗಿ ತೋರುವ ಗುಣ “ಶರಣ ಸತಿ ಲಿಂಗಪತಿ “ಎಂಬ ಭಾವ ಇವರಲ್ಲಿ ಉಲ್ಟಾ ಆಗಿದೆ. ಇದು ಅವರ ಸೂಫಿ ಮೂಲವನ್ನು ಎತ್ತಿ ತೋರಿಸುತ್ತದೆ .ವ್ಯಕ್ತಿಯ ಆತ್ಮವನ್ನು ಜಗತ್ತಿನ ಒಳಿತಿಗಾಗಿ ಯಾವುದಾದರೂ ಕಾಯಕದಲ್ಲಿ ನಿರತನಾಗಿರಬೇಕೆಂಬ ಶುದ್ಧವಾದ ಭಾವನೆಯನ್ನು ಇವರಲ್ಲಿ ಕಾಣುತ್ತೇವೆ .ಕಾಯಕ ಯಾವುದೇ ಆದರೂ ಅದರಲ್ಲಿ ಸಂಪೂರ್ಣವಾಗಿ ಅರ್ಪಿಸಿಕೊಳ್ಳುವ ಮನಸ್ಸು ಅತಿ ಮುಖ್ಯ. ಅಸಹ್ಯ, ಅಸಹಜ ಅನಾನುಕೂಲ, ಅವಹೇಳನ ಇತ್ಯಾದಿ ಮನಸ್ಥಿತಿಯನ್ನು ಮೀರಿದ ಅತ್ಯಪರೂಪದ ವ್ಯಕ್ತಿತ್ವವನ್ನು ಮರುಳಶಂಕರ ದೇವರಲ್ಲಿ ನಿಜವಾಗಿಯೂ ಕಂಡುಬರುತ್ತದೆ. ಹೀಗೆ ವಚನಕಾರರು ಅಥವಾ ಶರಣರು ತಮಗೆ ಒದಗಿ ಬಂದ ಅವಕಾಶವನ್ನು ಅಥವಾ ಆಯ್ಕೆ ಮಾಡಿಕೊಂಡ ಕಾಯಕವನ್ನು ಪ್ರೀತಿಪೂರ್ವಕವಾಗಿ ಅನುಭೋಗಿಸಿದ್ದಾರೆ .ಇತರರಿಗೂ ಮಾದರಿಯಾಗಿ ಬದುಕಿ ತೋರಿಸಿದ್ದಾರೆ.

Share This Article
error: Content is protected !!
";