ಕಾಯಕ ಮತ್ತು ದಾಸೋಹ ಸಂಸ್ಕೃತಿ ಬಸವಾದಿ ಶಿವಶರಣರ ಬಳುವಳಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾಯಕ ಮತ್ತು ದಾಸೋಹ ಸಂಸ್ಕೃತಿ ಹನ್ನೆರಡನೆಯ ಶತಮಾನದ ಬಸವಾದಿ ಶಿವಶರಣರ ಬಳುವಳಿ. ಅವರ ತರುವಾಯ ಯಡಿಯೂರು ಸಿದ್ದಲಿಂಗೇಶ್ವರರು ಮತ್ತಿತರ ಮಹಾಮಹಿಮರು ಮುಂದುವರೆಸಿದರು. ಅದರಂತೆಯೇ ಮಧ್ಯ ಕರ್ನಾಟಕದ ಆರಾಧ್ಯ ದೈವ ಕೊಟ್ಟೂರು ಗುರುಬಸವೇಶ್ವರರು ಶಿವಶರಣರ ತತ್ವಾದರ್ಶ ಪರಂಪರೆಯನ್ನ ಮುಂದುವರೆಸಿದರೆಂದು ಶ್ರೀಜಗದ್ಗರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವ ಕುಮಾರ ಮಹಾಸ್ವಾಮಿ ತಿಳಿಸಿದರು.

ಶ್ರೀಗಳವರು ನಗರದ ಜಯಲಕ್ಷ್ಮೀ ಬಡಾವಣೆಯ ಮಮತಾ ಕೊಟ್ರಪ್ಪ ದಂಪತಿಯ ಕುಟುಂಬದ ವತಿಯಿಂದ ಕೊಟ್ಟೂರು ಬಸವೇಶ್ವರರ ರಥೋತ್ಸವ ನಿಮಿತ್ತ ಏರ್ಪಡಿಸಿದ್ದ  ದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿ ಒಂದು ಮೂಲದ ಪ್ರಕಾರ ಗುರುಬಸವೇಶ್ವರರು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಸೂರಿನವರು. ಅಲ್ಲಿಂದ ಅವರು ಕರ್ನಾಟಕದ ಎಡೆಯೂರಿಗೆ ಬಂದು ಅಲ್ಲಿ ಸಿದ್ಧಲಿಂಗ ಯತಿಗಳ ಶಿಷ್ಯತ್ವ ಸ್ವೀಕರಿಸಿ ನಂತರ ಚಾಮರಾಜನಗರದಲ್ಲಿ ಧರ್ಮಕಾರ್ಯದಲ್ಲಿ ತೊಡಗಿದರು.

ನಂತರ ಹಂಪಿಗೆ ಬಂದು ಅಲ್ಲಿಂದ ಕೊಟ್ಟೂರಿಗೆ ಬಂದರು ಎಂಬ ಮಾತು ಭಕ್ತರ ವಲಯದಲ್ಲಿ ಪ್ರಚಲಿತವಿದೆ. ಅಂತಹ ಪುಣ್ಯ ಪುರುಷರ ಆದರ್ಶಗಳನ್ನ ಅನುಸರಿಸುವಂತಹ ಕೆಲಸ ಮುಂದುವರಿಸಬೇಕೆಂದು ಸಲಹೆ ನೀಡಿದರು. ಈ ಒಂದು ಕಳೆದ ಹತ್ತಿಪ್ಪತ್ತು ವರ್ಷಗಳಿಂದ ನಡೆಸಿರುವ ಈ ದಾಸೋಹ ಪರಂಪರೆಯ ಕಾರ್ಯ ಮಾದರಿ ಎಂದರು.  

ಸಮಾರಂಭದ ಸಮ್ಮುಖ ವಹಿಸಿದ್ದ ದಾವಣಗೆರೆಯ ವಿರಕ್ತಮಠದ ಡಾ.ಬಸವ ಪ್ರಭು ಮಹಾಸ್ವಾಮಿ ಮಾತನಾಡಿ ನಾಡಿಗೆ ಅನೇಕ ದಾರ್ಶನಿಕರು ತಮ್ಮದೇ ಆದ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕೆಲಸದಿಂದ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಕೊಟ್ಟೂರಿನ ಗುರುಬಸವೇಶ್ವರರ ಹೆಸರಿನಲ್ಲಿ ಭಕ್ತರು ಸಹ ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಅವರ ಸ್ಮರಣಾರ್ಥವಾಗಿ, ಭಕ್ತರು ತಮ್ಮ ಗಂಡು ಮಕ್ಕಳಿಗೆ ಕೊಟ್ರೇಶ ಎಂದು ಮತ್ತು ಹೆಣ್ಣು ಮಕ್ಕಳಿಗೆ ಕೊಟ್ಟೂರಮ್ಮ ಎಂದು ಹೆಸರಿಡುತ್ತಾರೆ. ಈ ಹೆಸರುಗಳು ಸಾಮಾನ್ಯವಾಗಿ ಕೊಟ್ಟೂರು ಮತ್ತು ಸುತ್ತಮುತ್ತ ಕಂಡುಬರುತ್ತವೆ. ಹಾಗೆಯೇ ದಾವಣಗೆರೆ ಸುತ್ತ ಮುತ್ತಲಂತೂ ಬಹಳ ಭಕ್ತರಿದ್ದಾರೆ ಎಂದರು.

ಈ ಜಾತ್ರೆ ಮತ್ತು ರಥೋತ್ಸವವನ್ನು ವೀಕ್ಷಿಸಲು ಎಲ್ಲೆಡೆಯಿಂದ  ಭಕ್ತರು ತಮ್ಮ ಸ್ಥಳೀಯ ಸ್ಥಳಗಳಿಂದ ಕೊಟ್ಟೂರಿಗೆ ಪಾದಯಾತ್ರೆಯ ಮೂಲಕ ಹೋಗುತ್ತಾರೆ. ಕೊಟ್ರೇಶಪ್ಪ ದಂಪತಿಯ ಈ ದಾಸೋಹ ಮಾದರಿಯದು ಎಂದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಗುರುಮಠಕಲ್ ಖಾಸಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮಿ ಮಾತನಾಡಿ ಅಸಂಖ್ಯಾತ ಭಕ್ತರ ಮನಗೆದ್ದ ಗುರು ಬಸವೇಶ್ವರರು ಲಕ್ಷಾಂತರ ಭಕ್ತರ ಆರಾಧ್ಯ ದೈವ. ಕಾಯಕ ಯೋಗಿ, ಶರಣ, ಮಾನವತವಾದಿ ಗುರು ಬಸವೇಶ್ವರ, ನಾಯಕನಹಟ್ಟಿ ತಿಪ್ಪೇಸ್ವಾಮಿ, ಅರಸೀಕೆರೆ ಕೋಲಶಾಂತಯ್ಯ, ಹರಪನಹಳ್ಳಿ ಕೆಂಪಯ್ಯ, ಕೂಲಹಳ್ಳಿ ಮದ್ದಾನಸ್ವಾಮಿ ಅವರನ್ನು ಪಂಚಗಣಾಧೀಶ್ವರೆಂದು ಕರೆಯಲಾಗುತ್ತದೆ. ವೀರಶೈವ ,ಲಿಂಗಾಯತ ಪರಂಪರೆಯ ನೂತನ ಗಣಗಳ ಪಟ್ಟಿಯಲ್ಲಿ ಕೊಟ್ಟೂರು ಗುರುಬಸವೇಶ್ವರರು ಪ್ರಮುಖರು ಎಂದರು.

ಕಲಬುರಗಿ  ಜಿಲ್ಲೆ ಜೇವರ್ಗಿ ತಾಲೂಕಿನ ಚಿಗರಹಳ್ಳಿ ಮರುಳಶಂಕರ ಪೀಠದ ಸಿದ್ದಬಸವ ಕಬೀರ ಮಹಾಸ್ವಾಮಿ ಮಾತನಾಡಿ ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದ ಭಾಗದಲ್ಲಿಯೂ ಭಕ್ತರಿದ್ದಾರೆಂದು ಹೇಳಿದರು. ಪ್ರತಿ ವರ್ಷ ಮನೆತನವೊಂದರ ಮೂಲಕ ನೂರಾರು ಜನರನ್ನ ಕರೆದು ಪ್ರಸಾದ ದಾಸೋಹ ಮಾಡುವ ಕೈಂಕರ್ಯ ದೊಡ್ಡದು ಎಂದರು.

ಚಂಗಡಹಳ್ಳಿಯ ಮುರುಗೇಂದ್ರ ಮಹಾಸ್ವಾಮಿ, ಗ್ರಾಮ ಪಂಚಾಯತಿ ಸದಸ್ಯರಾದ ತಿಪ್ಪೇಸ್ವಾಮಿ, ಗಂಗಾಧರಪ್ಪ, ಅಖಿಲ ಭಾರತ ಲಿಂಗಾಯತ ಮಹಾಸಭಾದ ಬಸವರಾಜಕಟ್ಟಿ, ಪಂಚಮಸಾಲಿ ಸಮಾಜದ ಮಂಜುನಾಥ, ನಗರಸಭಾ ಸದಸ್ಯ ಜಯಣ್ಣ, ನಿವೃತ್ತ ಪ್ರಾಚಾರ್ಯ ಉಮೇಶ ತುಪ್ಪದ, ರೇವಣಸಿದ್ದಪ್ಪ, ಮುರುಘೇಶ್, ಎಸ್.ವಿ.ರವಿಶಂಕರ್, ನಗರದ ವಿವಿಧ ಬಡಾವಣೆಯ ಪ್ರಮುಖರು ಹಾಗೂ ಸ್ಥಳೀಯ ಜಯಲಕ್ಷ್ಮೀ ಬಡಾವಣೆಯ ನಿವಾಸಿಗಳು ಭಾಗವಹಿಸಿದ್ದರು.

Share This Article
error: Content is protected !!
";