ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಕೆಂಪರಾಜಯ್ಯ ಪುನರಾಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ಕೆಂಪರಾಜಯ್ಯರವರು ೨೦೨೫-೨೭ನೇ ಸಾಲಿಗೆ ೨ ವರ್ಷದ  ಮತ್ತೊಂದು ಅವಧಿಗೆ ಚುನಾಯಿತರಾದರು. ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರ ಆಯ್ಕೆಗೆ ಶುಕ್ರವಾರ ಚುನಾವಣೆ ನಡೆಯಿತು. ನಂತರ ತಡರಾತ್ರಿ ೧ರವರೆಗೂ ಮತ ಎಣಿಕೆ ನಡೆದು ಹೆಚ್.ಕೆಂಪರಾಜಯ್ಯನವರು ೫೧೪ ಮತಗಳನ್ನು ಪಡೆದು ೨ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದರು.

        ಇದೇ ವೇಳೆ ಸಂಘದ ಉಪಾಧ್ಯಕ್ಷರಾಗಿ ಎಂ.ಎಲ್.ರವಿಗೌಡರವರು ೫೧೩ ಮತಗಳನ್ನು ಪಡೆದು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಹಿರೇಹಳ್ಳಿ ಮಹೇಶ್ ರವರು ೫೦೬ ಮತಗಳನ್ನು ಪಡೆದು ವಿಜೇತರಾದರು. ಜಂಟಿ ಕಾರ್ಯದರ್ಶಿಯಾಗಿ ಟಿ.ಎಂ.ಧನಂಜಯ ೪೭೭ ಮತಗಳನ್ನು ಪಡೆದು ವಿಜೇತರಾದರು. ಖಜಾಂಚಿಯಾಗಿ ಸಿಂಧು.ಬಿ.ಎಂ.ರವರು ೫೭೨ ಮತಗಳನ್ನು ಪಡೆದು ಆಯ್ಕೆಯಾದರು.

        ಇದೇ ವೇಳೆ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಗೋವಿಂದರಾಜು.ಪಿ ೮೦೬ ಮತಗಳು, ಡಿ.ಎ.ಜಗದೀಶ್ ೮೯೪, ಶ್ರೀನಿವಾಸಮೂರ್ತಿ.ಕೆ.ವಿ. ೮೪೪, ಶ್ರೀನಿವಾಸಮೂರ್ತಿ ವಿ.ಕೆ. ೬೨೨, ಸುರೇಶ್.ಎಸ್. ೭೯೧, ಮಹಿಳಾ ಮೀಸಲು ಸ್ಥಾನಕ್ಕೆ ಪದ್ಮಶ್ರೀ.ಸಿ.ಆರ್. ೬೯೬ ಮತ್ತು ಸೇವಾಪ್ರಿಯ.ಜೆ.ಎಸ್.೮೫೫ ಮತಗಳನ್ನು ಪಡದು ಆಯ್ಕೆಯಾದರು.

        ಆಯ್ಕೆ ನಂತರ ಮಾತನಾಡಿದ ಅಧ್ಯಕ್ಷ ಹೆಚ್.ಕೆಂಪರಾಜಯ್ಯ, ವಕೀಲ ಮಿತ್ರರ ಪ್ರೀತಿ, ವಿಶ್ವಾಸ, ನಂಬಿಕೆ ಬೆಂಬಲದಿಂದ ಈ ಗೆಲುವು ಸಾಧ್ಯವಾಯಿತು. ಹಿಂದಿನ ೨ ವರ್ಷದಲ್ಲಿ ನಾವು ಮಾಡಿದ ಉತ್ತಮ ಕೆಲಸಗಳನ್ನು ಗಮನಿಸಿ ನನ್ನನ್ನು ೨ನೇ ಬಾರಿ ಆಯ್ಕೆ ಮಾಡಿದ್ದಾರೆ.

ಮುಂದೆ ಮಾಡಬೇಕಾದ ಕೆಲಸ ಬಹಳಷ್ಟಿದೆ ಕಾಯಾ, ವಾಚಾ, ಮನಸಾ ವಕೀಲರ ಅಭ್ಯುದಯಕ್ಕಾಗಿ ದುಡಿಯುತ್ತೇನೆ. ವಕೀಲರ ಸಂಘದ ೩ನೇ ಮಹಡಿ, ಲಿಫ್ಟ್, ನೂತನ ನ್ಯಾಯಾಲಯಕ್ಕೆ ಜಾಗ, ಗಣೇಶ ದೇವಸ್ಥಾನ, ಎಟಿಎಂ ಉದ್ಘಾಟನೆ, ಹೈಟೆಕ್ ಶೌಚಾಲಯ ಹೀಗೆ ಸಾಲು ಕೆಲಸಗಳು ನನ್ನ ಮುಂದಿದೆ. ಎಲ್ಲವನ್ನೂ ಸಾಧಿಸಿ ವಕೀಲರ ಏಳ್ಗೆಗಾಗಿ ದಿನದ ೨೪ ಗಂಟೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ ಅವರು ಮತ ನೀಡಿದ ಹಿರಿಯ, ಕಿರಿಯ, ಮಹಿಳಾ ವಕೀಲರುಗಳಿಗೆ ಕೃತಜ್ಞತೆ ಸಲ್ಲಿಸಿದರು.

        ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಹೆಚ್.ಕೆಂಪರಾಜಯ್ಯನವರ ಅಭಿಮಾನಿಗಳು, ಸ್ನೇಹಿತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

 

Share This Article
error: Content is protected !!
";