ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಂಪೇಗೌಡರ ಋಣ ತೀರಿಸಲು ಮಾಗಡಿ ಅಭಿವೃದ್ಧಿಗೆ ನಾವು ಬದ್ಧ! ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಮಾಗಡಿ ಪಟ್ಟಣದಲ್ಲಿ ವಿವಿಧ ಇಲಾಖೆಯ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಾಗಡಿಯಲ್ಲಿ ಕೆಂಪೇಗೌಡರು ನಿರ್ಮಿಸಿದ ಐತಿಹಾಸಿಕ ಕೋಟೆ, ಸೋಮೇಶ್ವರ ದೇವಾಲಯ, ಕೆಂಪಾಪುರದಲ್ಲಿರುವ ಕೆಂಪೇಗೌಡರ ಸಮಾಧಿಯನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದೇವೆ ಎಂದು ಡಿಸಿಎಂ ತಿಳಿಸಿದರು.
ನಾಡಪ್ರಭು ಕೆಂಪೇಗೌಡರು ಕಟ್ಟಿರುವ ಐತಿಹಾಸಿಕ ಮಾಗಡಿ ಕೋಟೆಯ ಹಳೆಯ ವೈಭವವನ್ನು ಹಿಂದಿರುಗಿಸಲು ಮತ್ತು ಸಂರಕ್ಷಿಸಲು ಕೋಟೆಯ ಪುನರುಜ್ಜೀವನ ಕಾರ್ಯಕ್ಕಾಗಿ 103 ಕೋಟಿ ರೂ. ಅನುದಾನವನ್ನು ಬೆಂಗಳೂರು ನಗರದಿಂದ ನೀಡಿದ್ದೇನೆ. ಬೆಂಗಳೂರಿನ ಸುಮನಹಳ್ಳಿಯಲ್ಲಿ 5 ಎಕರೆ ಜಾಗದಲ್ಲಿ ಕೆಂಪೇಗೌಡ ಭವನ ನಿರ್ಮಿಸುವ ಕಾರ್ಯ ನಡೆಯುತ್ತಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಈ ಬಗ್ಗೆ ರೂಪುರೇಷೆ ಸಿದ್ಧಪಡಿಸಿ, ಚರ್ಚಿಸಿದ್ದಾರೆ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.
ನಮ್ಮ ಸರ್ಕಾರದ ವತಿಯಿಂದ ಆರೋಗ್ಯ ಇಲಾಖೆಯಲ್ಲಿ ದೊಡ್ಡ ಕ್ರಾಂತಿಯಾಗಿದೆ. ಮಾಗಡಿಯಲ್ಲಿ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ ಮಾಡಬೇಕು ಎನ್ನುವುದು ಹಲವು ದಿನಗಳ ಬೇಡಿಕೆಯಾಗಿತ್ತು. 41 ಕೋಟಿ ರೂ. ವೆಚ್ಚದಲ್ಲಿ, ಎರಡು ಎಕರೆ ಜಾಗದಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಿಸುತ್ತಿದ್ದೇವೆ. ಸಾರಿಗೆ ಸಚಿವರಾಗಿರುವ ರಾಮಲಿಂಗಾರೆಡ್ಡಿ ಅವರು, ಬಸ್‌ನಿಲ್ದಾಣ ಹಾಗೂ ಡಿಪೋ ನಿರ್ಮಾಣ ಮಾಡಿಕೊಡುವುದಾಗಿ ವಾಗ್ದಾನ ಮಾಡಿದ್ದಾರೆ ಎಂದು ಅವರು ತಿಳಿಸಿದರು.
20 ಕೋಟಿ ರೂ. ವೆಚ್ಚದಲ್ಲಿ ಮಾಗಡಿಯ ಗೌರಮ್ಮನ ಕೆರೆ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. 159 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿದ್ದೇವೆ. 1200 ಜನರಿಗೆ ‘ಇ -ಸ್ವತ್ತು‘ ವಿತರಿಸಲಾಗಿದೆ. ಇನ್ನುಳಿದವರಿಗೆ ಶೀಘ್ರದಲ್ಲಿ ವಿತರಿಸಲು ಸಿದ್ಧತೆ ನಡೆಸಲಾಗಿದೆ. 13 ಕೋಟಿ ವೆಚ್ಚದಲ್ಲಿ ಮಂಚನಬೆಲೆ ಬಳಿ ಹಲವು ಅಭಿವೃದ್ಧಿ ಕೆಲಸಗಳನ್ನು ಆರಂಭಿಸುತ್ತಿದ್ದು, 90 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮಾಗಡಿಯ ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ.
ನಾನು ಇಂಧನ ಸಚಿವನಾಗಿದ್ದ ಸಂದರ್ಭದಲ್ಲಿ ಹೆಚ್‌ವಿಡಿಎಸ್‌ಯೋಜನೆಯಡಿ ರೈತರಿಗೆ ವಿದ್ಯುತ್‌ಪರಿವರ್ತಕಗಳನ್ನು ನೀಡಿರುವುದು ಒಂದು ದಾಖಲೆಯಾಗಿ ಉಳಿದಿದೆ. ರೈತರಿಗೆ ಟ್ರಾನ್ಸ್‌ಫಾರ್ಮರ್‌ಒದಗಿಸುವ ಯೋಜನೆ ದೇಶದಲ್ಲಿ ಯಾವುದೇ ಲೋಕಸಭಾ ಕ್ಷೇತ್ರದಲ್ಲಿಯೂ ಮಾಡಲಾಗದ ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಾವು ಮಾಡಿದ್ದೇವೆ ಎಂದು ಸಂತೋಷವಾಗುತ್ತದೆ. ಮಾಗಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾವು ಸದಾ ಬದ್ಧರಾಗಿರುತ್ತೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭರವಸೆ ನೀಡಿದರು.
ಮಾಗಡಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿ, ಕೆಂಪೇಗೌಡರ ಹೆಸರು ಶಾಶ್ವತವಾಗಿ ಉಳಿಸಲು ನಾವು ಬದ್ಧ!
ಮಾಗಡಿ ಪಟ್ಟಣದಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಎರಡು ಎಕರೆ ಜಾಗದಲ್ಲಿ 100 ಹಾಸಿಗೆ ಸಾಮರ್ಥ್ಯದ ಆತ್ಯಾಧುನಿಕ, ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಸಾರಿಗೆ ಸಚಿವರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ಹಾಗೂ ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಹಾಜರಿದ್ದರು.

