ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಂಪೇಗೌಡರ ದೂರದೃಷ್ಟಿ, ತ್ಯಾಗ ಸಮಾಜಕ್ಕೆ ಸದಾ ಮಾದರಿ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ದೂರದೃಷ್ಟಿಯ ಆಡಳಿತಗಾರ, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯ ಅಂಗವಾಗಿ ಶುಕ್ರವಾರ ಜಿಬಿಎ (ಬಿಬಿಎಂಪಿ) ಕೇಂದ್ರ ಕಚೇರಿಯ ಮುಂಭಾಗದಲ್ಲಿರುವ ನಾಡಪ್ರಭು ಕೆಂಪೇಗೌಡರ ಹಾಗೂ ಕೆಂಪೇಗೌಡರ ಸೊಸೆ ಮಹಾತ್ಯಾಗಿ ಲಕ್ಷ್ಮೀದೇವಿ ರವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
‘ನಾಡಪ್ರಭುʼಗಳಿರದಿದ್ದರೆ ನಾವಿರುತ್ತಿರಲಿಲ್ಲ!-
ನಾಡಪ್ರಭು ಕೆಂಪೇಗೌಡರು ಇಲ್ಲದಿದ್ದರೆ ನಾವು ಬೆಂಗಳೂರಿನಲ್ಲಿ ಇರುತ್ತಿರಲಿಲ್ಲ; ಹೀಗಿಲ್ಲಿ ಮಾತನಾಡಲು ಆಗುತ್ತಲೂ ಇರುತ್ತಿರಲಿಲ್ಲ. ಈ ಊರಿನ ಪಾವಿತ್ರ್ಯತೆ ಮತ್ತು ಪರಿಸರವನ್ನು ಗಮನದಲ್ಲಿಟ್ಟುಕೊಂಡು ಅವರು ಈ ನಗರವನ್ನು ನಿರ್ಮಿಸಿದರು. ನಾವು ಇಂದು ಅವರ ಹೆಸರಿನಲ್ಲಿ ಉಸಿರಾಡುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಭಾವುಕರಾದರು.
ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ಒಟ್ಟಾಗಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕೆಂಪೇಗೌಡರ ಪ್ರತಿಮೆ ಇರುವ ಈ ಸ್ಮಾರಕದ ಜವಾಬ್ದಾರಿ ವಹಿಸಿಕೊಂಡು, ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರೆ ನೀಡಿದರು.
KIA ಬಳಿಯ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ-
ಬೆಂಗಳೂರಿನ ಕೀರ್ತಿ ಪುರುಷನ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಪ್ರಯುಕ್ತ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪವಿರುವ ಬೆಂಗಳೂರು ಮಹಾನಗರ ನಿರ್ಮಾತೃ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಚಿವರಾದ ಕೆ.ಎಚ್. ಮುನಿಯಪ್ಪ, ಗ್ರೇಟರ್ ಬೆಂಗಳೂರು ಆಯುಕ್ತ ಮಹೇಶ್ವರರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.