ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಡಿ. 21ರಂದು ನಡೆಯಲಿರುವ ನಗರಸಭೆಯ ಹೇಮಾವತಿ ಪೇಟೆ 21ನೇ ವಾರ್ಡಿನ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆ. ಜಿ. ದಿನೇಶ್ ಸೋಮವಾರ ನಾಮಪತ್ರ ಸಲ್ಲಿಸಿದರು.
ಹೇಮಾವತಿ ಪೇಟೆ ನಾಗರಕಲ್ಲು ದೇವಾಲಯದಲ್ಲಿ ಪೂಜೆ ಸಲ್ಲಿಸಿದ ದಿನೇಶ್ ಅಲ್ಲಿಂದ ಕಾಂಗ್ರೆಸ್ ಮುಖಂಡರು ಹಾಗೂ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ನಗರಸಭೆಗೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮ ಪತ್ರ ಸಲ್ಲಿಸಿದರು. ಈ ವೇಳೆ ಸುದ್ಧಿಗಾರ ರೊಂದಿಗೆ ಮಾತನಾಡಿ ಹೇಮಾವತಿ ಪೇಟೆ ವಾರ್ಡಿನಲ್ಲಿ ನಾನು ಚಿರಪರಿಚಿತನಾಗಿದ್ದು,
ಈ ಹಿಂದೆ ನಮ್ಮ ತಂದೆ ಕೆ. ಸಿ. ಗೋಪಾಲಕೃಷ್ಣರವರು ಹಾಗೂ ನನ್ನ ಸೋದರ ರಘುರಾಮ್ ಸದಸ್ಯರಾಗಿ ಜನಪರ ಕೆಲಸ ಮಾಡಿದ್ದಾರೆ. ಜೊತೆಗೆ ಕಳೆದ ಚುನಾವಣೆಯಲ್ಲಿ ನಾನು ಸ್ಪರ್ದಿಸಿ ಕೆಲವೇ ಮತಗಳ ಅಂತರದಿಂದ ಪರಾಭವ ಗೊಂಡಿದ್ದೆ.
ಅಂದಿನಿಂದ ಇಂದಿನವರೆಗೂ ವಾರ್ಡಿನ ಮತದಾರರ ಜೊತೆ ನಿಕಟ ಸಂಪರ್ಕ ಹೊಂದಿದ್ದೇನೆ. ಈ ಕಾರಣಗಳಿಂದಾಗಿ ವಾರ್ಡಿನ ನಾಗರಿಕರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಆದ್ದರಿಂದ ಈ ಬಾರಿ ನಾನು ಗೆಲ್ಲುವ ವಿಶ್ವಾಸವಿದೆ ಎಂದು ದಿನೇಶ್ ಹೇಳಿದರು.
ನಾಮಪತ್ರ ಸಲ್ಲಿಕೆ ವೇಳೆ ನಗರ ಕಾಂಗ್ರೆಸ್ ಅಧ್ಯಕ್ಷ ಕೆ. ಪಿ. ಜಗನ್ನಾಥ್, ನೇಕಾರ ಮುಖಂಡ, ಕೆ. ಪಿ. ಸಿ. ಸಿ. ಸದಸ್ಯ ಬಿ. ಜಿ. ಹೇಮಂತರಾಜ್, ಡಿ. ಪಿ. ಎ. ಸದಸ್ಯ ಅಂಜನ್ ಮೂರ್ತಿ, ನಗರಸಭಾ ಸದಸ್ಯರಾದ ಶಿವಶಂಕರ್ (ಶಂಕ್ರಿ ), ಕಾಂತರಾಜ್ ಮುಖಂಡ ಮುನಿರಾಜು ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

