ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಕ್ಕಳ ಬೌದ್ಧಿಕ ಬೆಳವಣಿಗೆ ಪಡೆದುಕೊಳ್ಳಲು ಪೂರ್ವ ಪ್ರಾಥಮಿಕ ಶಿಕ್ಷಣದ ಪಾತ್ರ ಪ್ರಮುಖವಾಗಿದ್ದು,
ಮಾಜಿ ಪ್ರಧಾನಿ ಇಂದಿರಾಗಾಂಧಿ ಕಾಲದಲ್ಲಿ ಅಂಗನವಾಡಿಗಳ ಸ್ಥಾಪನೆ ಆರಂಭಿಸಿ, ಪೌಷ್ಟಿಕ ಆಹಾರದ ಜತೆಗೆ ಉಚಿತವಾಗಿ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಲಾಯಿತು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ದರ್ಗಾಜೋಗಿಹಳ್ಳಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 23 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿ
ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ನಿವೇಶನ ಸೌಲಭ್ಯವನ್ನು ಸ್ಥಳೀಯ ಗ್ರಾಮ ಪಂಚಾಯಿತಿಗಳು ಒದಗಿಸಲು ಸಹಕರಿಸಬೇಕು. ಇದರಿಂದ 6 ವರ್ಷದೊಳಗಿನ ಪ್ರತಿಯೊಬ್ಬ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲು ಅನುಕೂಲವಾಗುತ್ತದೆ ಎಂದರು.
ಜಿಲ್ಲೆಯಲ್ಲಿ 139 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲದೇ ಬಾಡಿಗೆ ಕಟ್ಟಡಗಳಿದ್ದು, 40 ಕಡೆ ಖಾಲಿ ನಿವೇಶನಗಳನ್ನು ಗುರುತಿಸಲಾಗಿದೆ. ಸದ್ಯ 40 ಅಂಗನವಾಡಿ ಕಟ್ಟಡ ನಿರ್ಮಾಣ ಹಂತದಲ್ಲಿವೆ ಎಂದು ಹೇಳಿದರು.
ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು ಅವರು ಮಾತನಾಡಿ, ಅಂಗನವಾಡಿ ಬಾಡಿಗೆ ಕಟ್ಟಡದ ದರವನ್ನು 6,000 ದಿಂದ 10,000 ಕ್ಕೆ ಏರಿಸಿದರೆ ಉತ್ತಮ, ನಗರಸಭೆ ವಾರ್ಡ್ ಗಳಲ್ಲಿ 1000 ಜನಕ್ಕಿಂತ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚುವರಿ ನ್ಯಾಯಬೆಲೆ ಅಂಗಡಿ ಸ್ಥಾಪಿಸಲು, ಕಾವೇರಿ ನೀರು ಹಾಗೂ ಮೆಟ್ರೋ ಸಂಪರ್ಕ ದೊಡ್ಡಬಳ್ಳಾಪುರಕ್ಕೆ ಒದಗಿಸಲು ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚುಂಚೇಗೌಡ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ವಿಶ್ವನಾಥ್ ರೆಡ್ಡಿ, ಗ್ರಾ.ಪಂ ಅಧ್ಯಕ್ಷ ಶಶಿಕಲಾ ನಾಗರಾಜು, ಉಪಾಧ್ಯಕ್ಷರಾದ ಶೋಭಾ ಭಾಯಿ, ಇಒ ಮಂಜುನಾಥ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

