ಚಂದ್ರವಳ್ಳಿ ನ್ಯೂಸ್, ನೆಲಮಂಗಲ:
ಸಾಲ ತೀರಿಸಲು ಸಾಲ ಕೊಟ್ಟವರ ಮನೆಯಲ್ಲೇ ಕಳ್ಳತನ ಮಾಡಿರುವ ಗ್ಯಾಂಗ್ಒಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವಂತಹ ಘಟನೆ ನೆಲಮಂಗಲ ನಗರದಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಗುಂಟೆ ಠಾಣೆಯ ಪೊಲೀಸರು 6 ಆರೋಪಿಗಳನ್ನು ಬಂಧಿಸಿ 9.9 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
ಕುಖ್ಯಾತ ಕಳ್ಳ ಮೋರಿ ರಾಜ, ವೆಂಕಟೇಶ್, ಕವಿತಾ, ಹರೀಶ್, ನಾಗರಾಜ್ ಮತ್ತು ಪ್ರತಾಪ್ ಬಂಧಿತ ಆರೋಪಿಗಳು. ಘಟನೆ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ-
ಉದ್ಯಮಿ ಮಂಗಳಾ ಎಂಬುವವರು ಸ್ನೇಹ ಧಮ್ ಬಿರಿಯಾನಿ ಹೆಸರಿನ ಹೋಟೆಲ್ ನಡೆಸುತ್ತಿದ್ದು ಅವರ ಬಳಿ ಕವಿತಾ ಸಾಲ ಪಡೆದಿದ್ದಳು. ಮಂಗಳಾ ಕೊಟ್ಟ ಸಾಲಕ್ಕೆ ಕವಿತಾಳಿಂದ ಅಂಗ್ರಿಮೆಂಟ್ ಮಾಡಿಕೊಂಡಿದ್ದರು.
ಸಾಲ ವಾಪಸ್ ನೀಡಲಾಗದೆ ಮಂಗಳಾ ಮನೆಯಲ್ಲಿ ಅಣ್ಣ ವೆಂಕಟೇಶ್ ಜೊತೆ ಸೇರಿ ಕಳ್ಳತನಕ್ಕೆ ಕವಿತಾ ಪ್ಲ್ಯಾನ್ ಮಾಡಿದ್ದಳು.
ಸಹೋದರ ವೆಂಕಟೇಶ್ಗೆ ಕುಖ್ಯಾತ ಕಳ್ಳ ಮೋರಿ ರಾಜ ಪರಿಚಯ ಇದ್ದು ಸಹಚರರ ಜತೆ ಸೇರಿ ಮಂಗಳಾ ಮನೆಯಲ್ಲಿ ಮನೆ ಬಾಗಿಲು ಮುರಿದು ಚಿನ್ನಾಭರಣ ದೋಚಿ ಕಳ್ಳತನ ಮಾಡಿದ್ದರು.
ಈ ಕುರಿತು ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮೋರಿ ರಾಜನ ವಿರುದ್ಧ 20ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ.

