ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ವಾಸವಿ ಕಾಲೋನಿಯಲ್ಲಿ ಶನಿವಾರ ಬೆಳಗ್ಗೆ ಹಾಡುಹಗಲೇ ನಡೆದ ದರೋಡೆ ಪ್ರಕರಣದ ಪತ್ತೆ ಕಾರ್ಯವನ್ನು ಪೊಲೀಸ್ ಇಲಾಖೆ ಚುರುಕುಗೊಳಿಸಿದೆ.
ವಾಸವಿ ಕಾಲೋನಿ ನಿವಾಸಿ ವಾಣಿಜ್ಯೋದ್ಯಮಿ ವೆಂಕಟೇಶಲುರವರ ಪತ್ನಿ ಗೀತಾಲಕ್ಷ್ಮಿ(೫೨), ತಾಯಿ ಸಾವಿತ್ರಮ್ಮ ಇವರಿಗೆ ಚಾಕುತೋರಿಸಿ ಪ್ರಾಣಬೆದರಿಕೆ ಒಡ್ಡಿ ಮನೆಯಲ್ಲಿದ್ದ ಬಂಗಾರ ಬಳೆ, ಮಾಂಗಲ್ಯದ ಸರ, ಉಂಗುರ, ಕಿವಿಓಲೆ, ಕರಿಮಣಿಸರ ಮುಂತಾದವುಗಳು ಸೇರಿ ೩೧೦ ಗ್ರಾಂ ತೂಕದ ೮.೭೫ ಲಕ್ಷ ಮೌಲ್ಯದ ಆಭರಣವನ್ನು ಕಳ್ಳರು ದರೋಡೆ ಮಾಡಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸ್ಥಳಕ್ಕೆ ದೌಡಾಯಿಸಿ ದರೋಡೆಕೋರರ ಕೃತ್ಯದ ಬಗ್ಗೆ ಗೀತಾಲಕ್ಷ್ಮಿ ಮತ್ತು ಸಾವಿತ್ರಮ್ಮನವರಿಂದ ಸಂಪೂರ್ಣಮಾಹಿತಿ ಪಡೆದಿದ್ಧಾರೆ.
ದರೋಡೆ ನಡಸಿದ ಕಳ್ಳರು ಸುಮಾರು ೩೦ ರಿಂದ ೪೦ ವಯಸ್ಸಿನವರಾಗಿದ್ದು, ಎತ್ತರ ದಪ್ಪ ಇದ್ದು, ಕನ್ನಡ, ತೆಲುಗು ಮಾತನಾಡುತ್ತಿದ್ದರು. ಜೀನ್ಸ್ ಪ್ಯಾಂಟ್ ಧರಿಸಿದ್ದಲ್ಲದೆ, ಓರ್ವ ವ್ಯಕ್ತಿ ಮಾಸ್ಕ್ ಹಾಕಿದ್ದ ಬಗ್ಗೆ ಸಂತ್ರಸ್ತ ಮಹಿಳೆಯರು ಮಾಹಿತಿ ನೀಡಿದ್ದಾರೆ.
ಗೀತಾಲಕ್ಷ್ಮಿ ಯಾವುದೋ ಕಾರ್ಯಕ್ರಮಕ್ಕೆ ತೆರಳಲು ಮನೆಯಲ್ಲಿದ್ದ ಬಂಗಾರದ ಆಭರಣವನ್ನು ಅಡಿಗೆ ಮನೆಯ ಕಟ್ಟೆಮೇಲೆ ಇಟ್ಟ ಸಂದರ್ಭದಲ್ಲೇ ಈ ಕೃತ್ಯ ನಡೆದಿದೆ. ಅಲ್ಲಿನ ನಿವಾಸಿಗಳು ಹೇಳುವ ಪ್ರಕಾರ ಮೂರರಿಂದ ನಾಲ್ಕು ಜನ ಕಳ್ಳರು ಕಾರಿನಲ್ಲಿ ಆಗಮಿಸಿ ಮನೆಯ ಸನಿಹದಲ್ಲೇ ಕಾರು ನಿಲ್ಲಿಸಿದ್ದರು ಎನ್ನಲಾಗಿದೆ.
ವಾಸವಿ ಕಾಲೋನಿಯಲ್ಲಿ ಹಾಡುಹಗಲೇ ಯಾವುದೇ ರೀತಿಯ ಅಂಜಿಕೆ ಇಲ್ಲದೆ ದರೋಡೆಕೋರರು ದರೋಡೆ ನಡೆಸಿದ್ದು, ಇಲ್ಲಿನ ನಿವಾಸಿಗಳಿಗೆ ದರೋಡೆಕಾರರ ಭಯ ಇನ್ನೂ ಕಾಡುತ್ತಿದೆ. ವಿಶೇಷವಾಗಿ ಮಹಿಳೆಯರು ಬಂಗಾರದ ಆಭರಣಗಳನ್ನು ಧರಿಸಲು ಹಿಂಜರಿಯುತ್ತಿದ್ದಾರೆ. ಮಾಂಗಲ್ಯಸರವನ್ನು ಸಹ ಕೊರಳಲ್ಲಿ ಹಾಕಿಕೊಳ್ಳುವ ಬಗ್ಗೆ ಯೋಚಿಸುವ ಸ್ಥಿತಿ ಉಂಟಾಗಿದೆ.
ದೂರು ನೀಡಿರುವ ಗೀತಾಲಕ್ಷ್ಮಿ ೭೦ ಗ್ರಾಂನ ಒಂದು ಮಾಂಗಲ್ಯಸರ, ೬೦ ಗ್ರಾಂನ ನಾಲ್ಕು ಬಳೆ, ೫ ಗ್ರಾಂನ ಕಿವಿ ಓಲೆ, ಕಿಚನ್ ಪರ್ಸ್‌ನಲ್ಲಿಟ್ಟಿದ್ದ ೩೦ ಗ್ರಾಂನ ಬಂಗಾರದ ಕರಿಮಣಿಸರ, ೪೦ ಗ್ರಾಂ ನಾಲ್ಕು ಬಳಗೆಗಳು, ೫ ಗ್ರಾಂನ ಉಂಗುರ, ಅತ್ತೆ ಸಾವಿತ್ರಮ್ಮನ ಮೈಮೇಲಿದ್ದ ೬೦ ಗ್ರಾಂನ ನಾಲ್ಕು ಬಳೆ, ೪೦ ಗ್ರಾಂನ ಸರ ಸೇರಿದಂತೆ ಒಟ್ಟು ೩೧೦ ಗ್ರಾಂ ತೂಕದ ಬಂಗಾರದ ಬಡವೆಗಳನ್ನು ದರೋಡೆಕೋರರು ಕಿತ್ತು ಹೋಗಿದ್ದು, ಹೋಗುವ ಮುನ್ನ ಅತ್ತೆ ಸಾವಿತ್ರಮ್ಮನನ್ನು ಬಾತ್‌ರೂಂನಲ್ಲಿ ಪಿರ್ಯಾದಿ ಗೀತಾಲಕ್ಷ್ಮಿಯನ್ನು ಶೌಚಾಲಯದಲ್ಲಿ ಕೂಡಿಹಾಕಿ ಬಾಗಿಲು ಹಾಕಿ ಮಧ್ಯಾಹ್ನ ೧೨.೩೦ರ ಸಮಯದಲ್ಲಿ ಮನೆಯಿಂದ ಹೊರ ಹೋಗಿದ್ದಾರೆ. ಒಂದು ಗಂಟೆಗಳ ಕಾಲ ಮನೆಯ ಒಳಗಡೆಯೇ ಇದ್ದು, ಇಬ್ಬರೂ ಮಹಿಳೆಯರಿಗೆ ಪ್ರಾಣ ಬೆದರಿಕೆ ಉಂಟು ಮಾಡಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ, ಡಿವೈಎಸ್ಪಿ ರಾಜಣ್ಣ ನೇತೃತ್ವದಲ್ಲಿ ತಂಡಗಳನ್ನು ರಚಿಸಿದ್ದು, ದರೋಡೆಕೋರರನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಜಿಲ್ಲೆಯಾದ್ಯಂತ ಪೊಲೀಸರು ದರೋಡೆಕೋರರ ಪತ್ತೆಗೆ ಬಲೆಬೀಸಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚುವ ಆತ್ಮವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

