ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಲಬುರಗಿ ಜಿಲ್ಲೆಯಲ್ಲಿ ದಶಕಗಳ ಕಾಲ ಸರ್ವಾಧಿಕಾರಿಯಂತೆ ಅಧಿಕಾರ ಅನುಭವಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಕುಟುಂಬಕ್ಕೆ ನಾಚಿಕೆಯಾಗಬೇಕು ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಅಪ್ಪ -ಮಕ್ಕಳು ಕುಟುಂಬದ ಅಭಿವೃದ್ಧಿಯಾಗಿರುವುದು ಬಿಟ್ಟರೇ, ಕಲಬುರಗಿಯಲ್ಲಿ ಯಾವುದೇ ಜನಪರವಾದ ಅಭಿವೃದ್ಧಿ ಕಾರ್ಯಗಳು ಇಂದಿಗೂ ಮರೀಚಿಕೆಯಾಗೆ ಉಳಿದಿದೆ ಎಂದು ಜೆಡಿಎಸ್ ಆರೋಪಿಸಿದೆ.
ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್)ಯಲ್ಲಿ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ನವಜಾತ ಶಿಶುಗಳು, ಬಾಣಂತಿಯರು ಪರದಾಡಿರುವುದು ಆತಂಕಕಾರಿ ಘಟನೆ.
ಸುಮಾರು ಒಂದು ಗಂಟೆ ಕತ್ತಲೆಯಲ್ಲಿ ಕಂದಮ್ಮಗಳು ಕಳೆದಿದ್ದು, ನರ್ಸ್ ಹಾಗೂ ವೈದ್ಯರು ಮೊಬೈಲ್ ಟಾರ್ಚ್‌ಬೆಳಕಿನಲ್ಲಿ ಚಿಕಿತ್ಸೆ ನೀಡಿರುವುದು, ಸರ್ಕಾರದ ನಿರ್ಲಕ್ಷ್ಯದ ಪರಮಾವಧಿಯಾಗಿದೆ ಎಂದು ಜೆಡಿಎಸ್ ಹರಿಹಾಯ್ದಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಸರ್ಕಾರಿ ಆಸ್ಪತ್ರೆಗಳು, ಬಾಣಂತಿಯರು ಮತ್ತು ನವಜಾತ ಶಿಶುಗಳ ಪಾಲಿಗೆ ಶವಾಗಾರವಾಗಿ ಮಾರ್ಪಟ್ಟಿದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.