ಅಪಹರಣ ಪ್ರಕರಣ, ಕಾನ್ಸ್‌ಟೇಬಲ್ ಸಹಿತ 8 ಮಂದಿ ಬಂಧನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಲ್​​ ಸೆಂಟರ್​​​​ ಉದ್ಯೋಗಿಗಳನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಕಾನ್ಸ್‌ಟೇಬಲ್ ಸಹಿತ 8 ಜನ ಆರೋಪಿಗಳನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹಣಕ್ಕಾಗಿ ಉದ್ಯೋಗಿಗಳನ್ನು ಅಪಹರಿಸಿದ್ದ ಆರೋಪಿಗಳಾದ ಚಲಪತಿ, ಭರತ್, ಪವನ್, ಪ್ರಸನ್ನ, ಅತೀಕ್, ಜಬೀವುಲ್ಲಾ ಸೇರಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿ, ಕೋರ್ಟ್​ಗೆ ಹಾಜರುಪಡಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಚಲಪತಿ ಕೋಲಾರ ಜಿಲ್ಲೆಯ ಹೆಡ್​​ ಕಾನ್ಸ್‌ಟೇಬಲ್​ ಎಂಬುದು ತನಿಖೆ ಸಂದರ್ಭದಲ್ಲಿ ಬಯಲಾಗಿದೆ.
ಶನಿವಾರ ಬೆಳಗಿನ ಜಾವ
1 ಗಂಟೆ ಸುಮಾರಿಗೆ ಕೋರಮಂಗಲದಲ್ಲಿರುವ ಗ್ಲೋಬಲ್ ಕನೆಕ್ಟ್​​ ಟೆಲಿಕಾಂ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಾಲ್​​ ಸೆಂಟರ್​ ಬಳಿ ತೆರಳಿದ್ದ ಆರೋಪಿಗಳು ತಾವು ಪೊಲೀಸರು ಎಂದು ಉದ್ಯೋಗಿಗಳನ್ನು ಬೆದರಿಸಿದ್ದರು. ಬಳಿಕ ಪವನ್, ರಾಜ್‌ವೀರ್, ಆಕಾಶ್, ಅನಸ್ ಎಂಬ ನಾಲ್ವರನ್ನು ಅಪಹರಿಸಿ ಕರೆದೊಯ್ದಿದ್ದು 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು.

- Advertisement - 

ಕಂಪನಿಯ ಆಪರೇಷನಲ್​​ ಮ್ಯಾನೇಜರ್​ ಖಾತೆಯಿಂದ 18 ಲಕ್ಷ ರೂ. ವರ್ಗಾಯಿಸಿಕೊಂಡಿದ್ದರು. ಬಳಿಕ ಶನಿವಾರ ಮುಂಜಾನೆ 4 ಗಂಟೆಗೆ ಕಾಲ್ ಸೆಂಟರ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಶನಿವಾರ ಬೆಳಿಗ್ಗೆ 11 ಗಂಟೆಗೆ ಸುಮಾರಿಗೆ ಹೊಸಕೋಟೆಯ ಲಾಡ್ಜ್​​ನಲ್ಲಿ ಆರೋಪಿಗಳಿರುವುದನ್ನು ಪತ್ತೆ ಹಚ್ಚಿ ಅಪಹರಣಕಾರರನ್ನು ಪೊಲೀಸರು ರಕ್ಷಿಸಿದ್ದಾರೆ.
ಪ್ರಕರಣ ಸಂಬಂಧ
8 ಆರೋಪಿಗಳನ್ನು ಬಂಧಿಸಿ, ಬಂಧಿತ ಆರೋಪಿಗಳಿಂದ 2 ಕಾರು ಜಪ್ತಿ ಮಾಡಲಾಗಿದೆ.

- Advertisement - 

ಕಾಲ್​​ ಸೆಂಟರ್ ಮೇಲೆ ಇತ್ತೀಚೆಗೆ ಪೊಲೀಸರು ದಾಳಿ ನಡೆಸಿದ್ದ ಪ್ರಕರಣವನ್ನೇ ಬಂಡವಾಳ ಮಾಡಿಕೊಂಡು ಆರೋಪಿತರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು‌ತಿಳಿಸಿದ್ದಾರೆ.

ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಪ್ರಕರಣದ ಸಂಬಂಧ ಮಾತನಾಡಿ, ಕೋರಮಂಗಲ ಪೊಲೀಸ್​ ಠಾಣೆ ಸರಹದ್ದಿನಲ್ಲಿ ಗ್ಲೋಬಲ್ ಕನೆಕ್ಟ್​​ ಟೆಲಿಕಾಂ ಪ್ರೈವೇಟ್ ಲಿಮಿಟೆಡ್​ ಎಂಬ ಕಾಲ್​ ಸೆಂಟರ್​ ಕಾರ್ಯನಿರ್ವಹಿಸುತ್ತದೆ. ಶನಿವಾರ ಬೆಳಗ್ಗೆ 1 ಗಂಟೆ ಸಮಯಕ್ಕೆ ಆ ಕಾಲ್ ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದ 4 ಜನ ಮ್ಯಾನೇಜರ್​ ಲೆವಲ್​ನ ಉದ್ಯೋಗಿಗಳನ್ನು 8 ಜನ ಬಂದು ನಾವು ಪೊಲೀಸ್​ನವರು, ಬನ್ನಿ ಮಾಹಿತಿ ಕೊಡಿ ಎಂಬ ನೆಪದಲ್ಲಿ ಅವರನ್ನು ಕೆಳಗೆ ಕರೆದುಕೊಂಡು ಬಂದು ಅಪಹರಿಸಿ ಕರೆದುಕೊಂಡು ಹೋಗಿದ್ದರು.
ಬಳಿಕ ಆ ಉದ್ಯೋಗಿಗಳಿಂದ ಆರೋಪಿಗಳು ಹಣಕ್ಕೆ ಬೇಡಿಕೆ ಇಡುತ್ತಾರೆ. ಆಪರೇಷನ್​ ಮ್ಯಾನೇಜರ್​ ಎಂಬ ಖಾತೆಯಿಂದ ಆರೋಪಿಗಳು ಬೇರೆ ಬೇರೆ ಖಾತೆಗೆ ಆನ್​ಲೈನ್​ ಮೂಲಕ ಹಣ ವರ್ಗಾವಣೆ​ ಮಾಡಿಕೊಳ್ಳುತ್ತಾರೆ. ಬೆಳಗ್ಗೆ
4.30 ಸಮಯಕ್ಕೆ ಪೊಲೀಸ್​ ಠಾಣೆಗೆ ಕರೆ ಬಂದಿರುತ್ತದೆ. ತಕ್ಷಣ 4 ತಂಡ ರಚಿಸಿ ಟ್ರ್ಯಾಕ್​ ಮಾಡಿ 8 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಜತೆಗೆ ಉದ್ಯೋಗಿಗಳ ಅಪಹರಣಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಸಾರಾ ಫಾತೀಮಾ ತಿಳಿಸಿದರು.

 

 

Share This Article
error: Content is protected !!
";