ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಸಿಎಂ ಸ್ಥಾನಕ್ಕೆ ದಲಿತರಿಗೆ ಅವಕಾಶ ನೀಡಬೇಕು ಎಂಬ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿಕೆಗೆ ಸಚಿವ ಕೆ.ಎನ್.ರಾಜಣ್ಣ ದನಿಗೂಡಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಯಾವ ಅಧಿಕಾರಕ್ಕೆ ಆಸೆಪಟ್ಟರೂ ತಪ್ಪಲ್ಲ. ಕೇಳಲು ಎಲ್ಲರಿಗೂ ಅರ್ಹತೆ ಇದೆ ಎಂದರು. ಶೃಂಗೇರಿ ದೇಗುಲಕ್ಕೆ ಭಾನುವಾರ ಅವರು ಭೇಟಿ ನೀಡಿ, ದರ್ಶನ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದರು.
ಸಚಿವ ಮುನಿಯಪ್ಪರ ಪರವಾಗಿ ಧ್ವನಿಗೂಡಿಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಅವರ ಅಭಿಪ್ರಾಯ ಅವರು ಹೇಳಿದ್ದಾರೆ. ಅಂತಿಮ ನಿರ್ಣಯವನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಯಾರೆಲ್ಲ ಸಿಎಂ ಆಗಬೇಕು ಎನ್ನುತ್ತಾರೋ ಅವರಿಗೆಲ್ಲ ಧ್ವನಿಗೂಡಿಸುತ್ತೇನೆ ಎಂದು ರಾಜಣ್ಣ ಹೇಳಿದರು.
ಡಿಸಿಎಂ ಡಿ.ಕೆ.ಶಿವಕುಮಾರ್, ಮುನಿಯಪ್ಪ ಯಾರನ್ನೇ ಸಿಎಂ ಮಾಡ್ಬೇಕು ಅಂದ್ರೂ ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಸಚಿವರು ತಿಳಿಸಿದರು.
ಜಾತಿಗಣತಿ ಕುರಿತು ಮಾತನಾಡಿ, ಜಾತಿಗಣತಿ ಅನುಷ್ಠಾನಕ್ಕೆ ತರುವುದು ಹಾಗೂ ಆಯೋಗದ ಶಿಫಾರಸುಗಳನ್ನು ಅಂಗೀಕರಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಅಪೂರ್ಣವಾಗಿದೆ. ಚರ್ಚೆ ಸಂಪೂರ್ಣವಾದ ನಂತರ ನಿರ್ಣಯವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.