ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೀವೇ ಅಕ್ರಮ ಅಂತ ಮನೆಗಳನ್ನು ಒಡೆಸ್ತೀರಿ, ನೀವೇ ಪುನರ್ವಸತಿ ಕೊಡುತ್ತೀರಿ. ಎಂಥ ಗುಜರಿ ಸರ್ಕಾರ ನಡೆಸ್ತಿದ್ದೀರಿ ನೀವು?. ಎಂಥ ಗುಲಾಮಗಿರಿ ಸರ್ಕಾರ ಇದು?. ಗುಲಾಮರಾಗಿದ್ದೀರಿ ನೀವು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಅವರು, ಕೋಗಿಲು ಲೇಔಟ್‌ನಲ್ಲಿ ರೋಹಿಂಗ್ಯಾಗಳು ವಾಸ ಇದ್ದಾರೆ ಅಂತ ಐದಾರು ವರ್ಷಗಳಿಂದ ನಮಗೆ ಮಾಹಿತಿ ಬರುತಿತ್ತು. ಅವರ ವಿರುದ್ಧ ಸಾಕಷ್ಟು ಹೋರಾಟಗಳು ನಡೆದಿವೆ. ಎಲ್ಲವೂ ಸಚಿವ ಕೃಷ್ಣ ಬೈರೇಗೌಡರಿಗೆ ಗೊತ್ತಿದೆ ಎಂದು ಅವರು ದೂರಿದರು. ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಮಾಡಿದ ನಂತರ ಅದಕ್ಕೆ ಬೇರೆ ತಿರುವು ಸಿಕ್ಕಿದೆ.
ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಇದಕ್ಕೆ ಬುಲ್ಡೋಜರ್ ನೀತಿ ಅಂತ ಲೇಬಲ್ ಹಚ್ಚಿದ್ರು. ಆಮೇಲೆ ಅದಕ್ಕೆ ಬೇರೆ ಆಯಾಮ ಸಿಕ್ತು. ಕೃಷ್ಣ ಬೈರೇಗೌಡ ಅವರು ತಟಸ್ಥರಾಗಿ ಹೋದರು. ನಂತರ ವೇಣುಗೋಪಾಲ ಅವರು ಪುನರ್ವಸತಿಗೆ ಸೂಚನೆ ಕೊಟ್ಟರು. ಹಾಗಾಗಿ ಸಿಎಂ ಅದರಂತೆ ಮುಂದಾಗಿದ್ದಾರೆ. ಕೇರಳದವರು ಅಲ್ಲಿ ಗುಡಿಸಲು ಹಾಕಿದ್ರಾ? ಪಿಣರಾಯಿಗೂ ಇಲ್ಲಿಗೂ ಸಂಬಂಧ ಏನು? ಎಂದು ಛಲವಾದಿ ತೀಕ್ಷ್ಣವಾಗಿ ಪ್ರಶ್ನಿಸಿದರು.
ಕೇರಳದಿಂದ ಬಂದವರು ಯಾರೂ ಗುಡಿಸಲು ಹಾಕಿ ವಾಸ ಮಾಡುತ್ತಿಲ್ಲ, ಹಾಗಾದರೆ ಪಿಣರಾಯಿಗೇನು ಸಂಬಂಧ?. ಸಿದ್ದರಾಮಯ್ಯ ವೀಕ್ ಆದ್ರಾ?. ಒತ್ತಡ ಹಾಕುತ್ತಿದ್ದಂತೆ ಇವರು ಮಣಿದು ಗುಲಾಮರಾಗಿದ್ದಾರೆ, ನೀವು ಯಾರ ಗುಲಾಮರಾದರೂ ಆಗಿ, ವೇಣುಗೋಪಾಲ್. ನೀವು ಬೇಕಾದ್ರೆ ಗುಲಾಮರಾಗಿ, ನಮ್ಮ ನಾಡು, ನಮ್ಮ ಜನರನ್ನು ಗುಲಾಮರಾಗಿ ಮಾಡಬೇಡಿ. ವೇಣುಗೋಪಾಲ್ ಯಾರು ನಮ್ಮ ಆಡಳಿತಲ್ಲಿ ತಲೆ ಹಾಕಲು?. ತೆರವಿಗೆ ಸಿಎಂ ಆದೇಶ ಮಾಡಿದ ಮೇಲೆ ಇನ್ನೇನಿದೆ?. ಸರ್ಕಾರದಲ್ಲಿ ವ್ಯವಸ್ಥಿತ ಪಿತೂರಿ ನಡೀತಿದೆ. ಕೋಗಿಲು ಲೇಔಟ್‌ನಲ್ಲಿದ್ದವರಿಗೆ ಪುನರ್ವಸತಿ ಕೊಡುತ್ತಿದ್ದಾರೆ. ಆ ಜನ ಯಾರು, ಎಲ್ಲಿಯವರು ಅಂತ ಸರ್ಕಾರ ಪರಿಶೀಲನೆ ಮಾಡಿದೆಯಾ?” ಎಂದು ಖಾರವಾಗಿ ಅವರು ಪ್ರಶ್ನಿಸಿದರು.
ಎನ್ಐಎ ತನಿಖೆ ಆಗಲಿ:
ಎಲ್ಲೆಲ್ಲಿ ಈ ಥರ ತೆರವು ಕಾರ್ಯಾಚರಣೆ ಆಗಿದೆಯೋ ಅವರಿಗೂ ಪುನರ್ವಸತಿ ಕೊಡಿ. ಇಲ್ಲಿಯವರೇ ಅನೇಕ ಜನ ಮನೆಗಳನ್ನು ಈ ಹಿಂದೆ ಕಳೆದುಕೊಂಡಿದ್ದಾರೆ. ಅವರಿಗೂ ಮನೆ ಕೊಡಿ. ಬಾಂಗ್ಲಾದಿಂದ ಬಂದವರಿಗೆ ಮನೆಗಳನ್ನು ಕೊಡ್ತಿದ್ದೀರಿ. ಇದು ಸರಿಯಲ್ಲ. ಹೊರ ರಾಜ್ಯ, ಹೊರದೇಶಗಳಿಂದ ಬಂದವರಿಗೆ ಮನೆ ಕೊಡ್ತಿದೆ ಈ ಸರ್ಕಾರ. ಮುಖ್ಯವಾಗಿ ಆ ಜನ ಯಾರು ಅಂತ ಸರ್ಕಾರ ಪರಿಶೀಲನೆ ಮಾಡಬೇಕು. ಅಲ್ಲಿದ್ದವರಿಂದ ಹಣ ಪಡೆದು ಸೈಟು ಮಾರಿದ ವಸೀಮ್ನನ್ನು ಇನ್ನೂ ಯಾಕೆ ಬಂಧಿಸಿಲ್ಲ?. ಈ ಪ್ರಕರಣದ ತನಿಖೆ ಎನ್ಐಎಗೆ ಕೊಡಬೇಕು. ಇದರ ತನಿಖೆ ಆಗಬೇಕು, ಆ ಜನರ ಪರಿಶೀಲನೆ ಆಗಬೇಕು ಎಂದು ಅವರು ಆಗ್ರಹಿಸಿದರು.
ಆ ಜನ ರೋಹಿಂಗ್ಯಾಂಗಳಾ?:
ಸರ್ಕಾರದ ತೀರ್ಮಾನದಲ್ಲಿ ಕೆ.ಸಿ ವೇಣುಗೋಪಾಲ್ ಗೆ ಯಾಕೆ ತೂರಲು ಅವಕಾಶ ಕೊಟ್ರಿ?. ಕಾನೂನು ಬಾಹಿರವಾಗಿ ಬಂದವರಿಗೆ ಕಾನೂನು ಬಾಹಿರವಾಗಿ ಪುನರ್ವಸತಿ ಕೊಟ್ರೆ ಬಿಜೆಪಿ ಸಹಿಸಲ್ಲ, ಹೋರಾಟ ಮಾಡಲಿದೆ. ಈ ಜನ ರೋಹಿಂಗ್ಯಾಗಳು ಅಂತ ಇದೆ. ಇದರ ಪರಿಶೀಲನೆ ಆಗಬೇಕು. ಹೆಬ್ಬಾಳ ಫ್ಲೈಓವರ್ ಸಮೀಪವೂ ಈ ಥರ ಅಕ್ರಮ ಶೆಡ್ ಹಾಕ್ಕೊಂಡು ಸಾವಿರಾರು ಜನ ಇದ್ದಾರೆ, ಅಲ್ಲೇಕೆ ತೆರವು ಮಾಡಿಲ್ಲ?. ಸರ್ಕಾರವನ್ನು ಪಿಣರಾಯಿ ವಿಜಯನ್ ಗೇ ಬಿಟ್ಟುಕೊಟ್ಬಿಡಿ. ಪಿಣರಾಯಿಗೇ ಸರ್ಕಾರ ಜಿಪಿಎ ಮಾಡಿಕೊಟ್ಬಿಡಿ. ನೀವು ಜಿಪಿಎ ಮಾಡಿಡಿಕೊಟ್ಟು ಕಮೀಷನ್ ಪಡೆಯಿರಿ. ರಾಜ್ಯ ಹಾಳು ಮಾಡಿ ಹೋಗಿ, ಮನೆಯಲ್ಲಿ ಕೂರಿ ಎಂದು ವಾಗ್ದಾಳಿ ಮಾಡಿದರು.
ನೀವು ಪಿಣರಾಯಿಗೆ ಹೆದರಿದ್ರೋ?. ವೇಣುಗೋಪಾಲ್‌ಗೆ ಹೆದರಿದ್ರೋ?–
ಡಿಕೆಶಿ ಅವರು ಬಹಳ ತಾಕತ್ತಿನ ಮನುಷ್ಯ ಅನ್ಕೊಂಡಿದ್ದೆ. ಆದರೆ ಡಿಕೆಶಿ ಠುಸ್ ಪಟಾಕಿ ಆಗಿಹೋದ್ರು. ಆವತ್ತು ಪಿಣರಾಯಿ ವಿಜಯನ್ ಮಾತು ವಿರೋಧಿಸಿಮಾತಾಡಿದ್ರಿ. ಈಗ್ಯಾಕೆ ವೇಣುಗೋಪಾಲ್ ಮಾತಿಗೆ ಮೆತ್ತಗಾದ್ರಿ?. ನೀವು ಪಿಣರಾಯಿಗೆ ಹೆದರಿದ್ರೋ?. ವೇಣುಗೋಪಾಲ್‌ಗೆ ಹೆದರಿದ್ರೋ?. ಆವತ್ತು ಕಾನೂನು ಪ್ರಕಾರ ತೆರವು ಅಂದವರು ಈಗ ಯಾಕೆ ಅಲ್ಲಿಗೆ ಡಿಕೆಶಿ ಭೇಟಿ ಕೊಡ್ತಿದ್ದಾರೆ?. ಸರ್ಕಾರ ಇಷ್ಟ ಬಂದಂಗೆ ನಡೆದುಕೊಳ್ಳಲು ನಾವು ಬಿಡಲ್ಲ. ಸರ್ಕಾರ ನಡೆಸಲು ಕಾಂಗ್ರೆಸ್ ವಿಫಲ ಆಗಿದೆ, ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಕಿಡಿಕಾರಿದರು.
ಪರಮೇಶ್ವರ್ ರಾಜೀನಾಮೆ ನೀಡಲಿ:
ಬೆಂಗಳೂರಿನಲ್ಲಿ ಮೂರು ಡ್ರಗ್ ಫ್ಯಾಕ್ಟರಿ ಪತ್ತೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ, ರಾಜ್ಯದಲ್ಲಿ ಡ್ರಗ್ ಫ್ಯಾಕ್ಟರಿಗಳು ತಲೆ ಎತ್ತಿವೆ. ಕರ್ನಾಟಕ ಸರ್ಕಾರವೇ ಡ್ರಗ್ ಸರ್ಕಾರ ಆಗಿದೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ಡ್ರಗ್ ಮಾಫಿಯಾ ಮಿತಿಮೀರಿದೆ, ಎಲ್ಲ ಗೊತ್ತಿದ್ದೂ ಸರ್ಕಾರ ನಿಯಂತ್ರಣ ಮಾಡ್ತಿಲ್ಲ. ಸರ್ಕಾರವೇ ಡ್ರಗ್ ಮಾಫಿಯಾ ನಡೆಸ್ತಿದೆಯಾ ಅನ್ನೋ ಅನುಮಾನ ಮೂಡಿದೆ. ನಮ್ಮ ಪೊಲೀಸರಿಗೆ ಡ್ರಗ್ ಫ್ಯಾಕ್ಟರಿ ಇರೋದು ಗೊತ್ತಿಲ್ಲ. ಮಹಾರಾಷ್ಟ್ರ ಪೊಲೀಸರು ಬಂದು ತೋರಿಸಿ ಕೊಟ್ಟಿದ್ದಾರೆ. ನಮ್ಮ ಗೃಹ ಇಲಾಖೆ ಸತ್ತಿದೆಯಾ? ಬೇಹುಗಾರಿಕೆಯವರು, ಪೊಲೀಸರು ಏನು ಮಾಡ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿ ತೀಕ್ಷ್ಣವಾಗಿ ಪ್ರಶ್ನಿಸಿದರು.
ಮಹಾರಾಷ್ಟ್ರ ಪೊಲೀಸರು ಪತ್ತೆ ಮಾಡಿದ ಮೇಲೆ ನಮ್ಮವರು ಏನೋ ಘನ ಕಾರ್ಯ ಮಾಡಿದವರಂತೆ ತಾವೇ ಪತ್ತೆ ಮಾಡಿದಂತೆ ಮಾತಾಡುತ್ತಾರೆ. ಗೃಹ ಇಲಾಖೆ ನಡೆಸಲು ಆಗದಿದ್ರೆ ಪರಮೇಶ್ವರ್ ರಾಜೀನಾಮೆ ಕೊಡಲಿ. ಎಷ್ಟು ದಿನ ಸಬೂಬು ಹೇಳ್ತೀರಿ? ಇಲಾಖೆ ಬಿಡಿ, ಬೇರೆಯವರು ಬರ್ತಾರೆ. ಪರಮೇಶ್ವರ್ ಅಸಹಾಯಕತೆಯೋ ಅಥವಾ ಅವರ ವಿರುದ್ಧ ಷಡ್ಯಂತ್ರ ನಡೀತಿದೆಯೋ?. ಯಾರಾದ್ರೂ ಅವರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದರೆ ಅದನ್ನು ಪರಮೇಶ್ವರ್ ಹೇಳಲಿ. ಇಲ್ಲವೇ ರಾಜೀನಾಮೆ ಕೊಡಲಿ ಎಂದು ಅವರು ಆಗ್ರಹಿಸಿದ್ದಾರೆ.
ಹೊರ ರಾಜ್ಯದವರು ಡ್ರಗ್ ದಂಧೆಯಲ್ಲಿದ್ದಾರೆ. ಸರ್ಕಾರದ ಕುಮ್ಮಕ್ಕು ಡ್ರಗ್ ಮಾಫಿಯಾಗಿದೆ. ಗಂಧದ ನಾಡು ಅನಿಸಿಕೊಂಡಿದ್ದ ರಾಜ್ಯ ಗಾಂಜಾ ಬೀಡು ಎನಿಸಿಕೊಂಡಿದೆ. ರಾಜ್ಯದ ಮರ್ಯಾದೆ ಮೂರು ಕಾಸಿಗೆ ಇಲ್ಲದಂತಾಗಿದೆ. ಯಾವುದೇ ಭಯ ಭೀತಿ ಇಲ್ಲದೇ ಡ್ರಗ್ ದಂಧೆ ನಡೀತಿದೆ. ಯಾವ ರೀತಿ ನಿಯಂತ್ರಣ ಮಾಡಬೇಕು ಅನ್ನೋ ಯೋಚನೆಯೇ ಸರ್ಕಾರಕ್ಕೆ ಇಲ್ಲ. ಸಿಎಂ ತಕ್ಷಣ ಕಾರ್ಯೋನ್ಮುಖ ಆಗಬೇಕು. ಗೃಹ ಸಚಿವರು ಡ್ರಗ್ ನಿಯಂತ್ರಣ ಮಾಡದ ಬಗ್ಗೆ ಉತ್ತರ ಕೊಡಬೇಕು, ಇಲ್ಲ ರಾಜೀನಾಮೆ ಕೊಡಬೇಕು ಎಂದು ಆಗ್ರಹ ಮಾಡಿದರು.
ಪೋಸ್ಟರ್ ಬಿಡುಗಡೆ: ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಇದೇ ವೇಳೆ ಪೋಸ್ಟರ್ ಬಿಡುಗಡೆ ಮಾಡಿದರು.
ಕಾಂಗ್ರೆಸ್ ದುರಾಡಳಿತದಿಂದ ಗಂಧದನಾಡು ಗಾಂಜಾ ಬೀಡಾಗ್ತಿದೆ, ರಾಜೀನಾಮೆ ಯಾವಾಗ? ಎಂಬ ಪೋಸ್ಟರ್, ಗೊತ್ತಿಲ್ಲ ಗೃಹ ಸಚಿವರೇ ರಾಜೀನಾಮೆ ಕೊಟ್ಟು ನಡೆಯಿರಿ ಎಂದು ಗೃಹ ಸಚಿವ ಪರಮೇಶ್ವರ್ ಭಾವ ಚಿತ್ರ ಹೊಂದಿರುವ ಪೋಸ್ಟರ್ ಬಿಡುಗಡೆ ಮಾಡಿದರು. ಸರ್ಕಾರವೇ ಗಾಂಜಾ ಹೊಡೆದಿರಬೇಕು ಅಂತ ಛಲವಾದಿ ನಾರಾಯಣಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

