ಕೋಗಿಲು ಶೆಡ್ ತೆರವುಗೊಳಿಸಿದ್ದು 167, ಮನೆಗಳಿಗೆ ಅರ್ಜಿ ಬಂದಿದ್ದು 257

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್, ಮನೆಗಳ ತೆರವುಗೊಳಿಸಿರುವ ವಿಚಾರ ರಾಜಕೀಯ ವಿವಾದಕ್ಕೀಡಾಗಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಕೋಗಿಲು ನಿರಾಶ್ರಿತರಿಗೆ ಮನೆ ನೀಡುವುದಾಗಿ ಘೋಷಣೆ ಮಾಡಿದ್ದೂ ಸಹ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರದ ಈ ನಡೆಗೆ ವ್ಯಾಪಕ ಆಕ್ಷೇಪವೂ ವ್ಯಕ್ತವಾಗಿದೆ. ಏತನ್ಮಧ್ಯೆ ಇದೀಗ ಹೊಸ ಸಮಸ್ಯೆ ಎದುರಾಗಿದೆ.

ಸರ್ಕಾರ ರಾಜೀವ್ ಗಾಂಧಿ ವಸತಿ ಯೋಜನೆ ಅಡಿ 167 ಫ್ಲಾಟ್​​ಗಳನ್ನು ಕೋಗಿಲು ನಿರಾಶ್ರಿತರಿಗೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದರು.

- Advertisement - 

ಆದರೆ, ಕೋಗಿಲು ಸಂತ್ರಸ್ತರೆಂದು ಹೇಳಿಕೊಂಡು ಮನೆಗಳಿಗಾಗಿ 257ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಇದರಿಂದಾಗಿ ಕೋಗಿಲು ಲೇಔಟ್ ನಿವಾಸಿಗಳಿಗೆ ಮನೆ ಹಂಚಿಕೆ ಪ್ರಕ್ರಿಯೆ ಇದೀಗ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಅಕ್ರಮ ಶೆಡ್, ಮನೆಗಳನ್ನ ಒಡೆದು ಹಾಕಿರುವ ಒಂದೇ ಮನೆಯ ವಿಳಾಸದಲ್ಲಿ ಇಬ್ಬರು, ಮೂವರು ಮನೆಗಾಗಿ ಅರ್ಜಿ ಸಲ್ಲಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲದೆ, ಕೋಗಿಲು ನಿವಾಸಿಗಳು ಅಲ್ಲದವರೂ ಮನೆಗಾಗಿ ಅರ್ಜಿ ಹಾಕಿರುವುದಾಗಿ ತಿಳಿದುಬಂದಿದೆ.

- Advertisement - 

ಮುಖ್ಯಮಂತ್ರಿ ಸೂಚನೆಯಂತೆ ಕೋಗಿಲು ಸಂತ್ರಸ್ತ ಕುಟುಂಬಗಳಿಗೆ ಮನೆಗಳನ್ನು ವಿತರಿಸಲು ಇಲಾಖಾ ಅಧಿಕಾರಿಗಳ ತಂಡ ಅಲ್ಲಿನ ನಿವಾಸಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಿದೆ.

ವಸತಿ ಇಲಾಖೆ ಹಾಗೂ ಇತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಯುತ್ತಿದೆ. ನಿರಾಶ್ರಿತರಿಂದ ಬಂದಿರುವ ಎಲ್ಲ ಅರ್ಜಿಗಳ ನೈಜತೆ ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ. ಪರಿಶೀಲನೆ ಬಳಿಕ ಅಂತಿಮ ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ.

ಕನ್ನಡಿಗರು, ಪರಭಾಷಿಕರ ಪಟ್ಟಿ ಸಿದ್ಧ:
ಕೋಗಿಲು ಸಂತ್ರಸ್ತರಿಗೆ ಮನೆ ಹಂಚಿಕೆ ಸಂಬಂಧವಾಗಿ ಅಧಿಕಾರಿಗಳು ಈಗಾಗಲೇ ಕನ್ನಡಿಗರು ಹಾಗೂ ಪರಭಾಷಿಕರು ಎಂಬ ಎರಡು ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.
ಮನೆಗಳಿಗಾಗಿ ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳ ಪರಿಶೀಲನೆ ಮುಗಿದ ನಂತರ ವಸತಿ ಇಲಾಖೆ ಮನೆ ಹಂಚಿಕೆ ಕುರಿತ ಅಂತಿಮ ಪಟ್ಟಿ ಪ್ರಕಟಿಸಲಿದೆ.

ಕೋಗಿಲು ಬಡಾವಣೆಯಲ್ಲಿ ಅಕ್ರಮ ಶೆಡ್, ಮನೆಗಳನ್ನು ನಿರ್ಮಿಸಿದ್ದವರಿಗೆ ವಸತಿ ಒದಗಿಸಿಕೊಡುವ ಸರ್ಕಾರದ ತೀರ್ಮಾನಕ್ಕೆ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿವೆ.

ಕರ್ನಾಟಕದಲ್ಲಿ ವಿವಿಧ ಕಾರಣಗಳಿಂದ ಸಂತ್ರಸ್ತರಾಗಿರುವ ಕರ್ನಾಟಕ ರಾಜ್ಯದ ದಲಿತ, ಹಿಂದುಳಿದ ಅರ್ಹ ಫಲಾನುಭವಿಗಳಿಗೇ ದಶಕಗಳಿಂದ ಪರಿಹಾರ ನೀಡಿಲ್ಲ. ಅಂಥದ್ದರಲ್ಲಿ ಇದೀಗ ಏಕಾಏಕಿ ಎಲ್ಲಿಂದಲೋ ಬಂದ ವಲಸಿಗರಿಗೆ, ಅದೂ ಸಹ ಅಕ್ರಮವಾಗಿ ಸರ್ಕಾರಿ ಜಾಗ ಒತ್ತುವರಿ ಮಾಡಿದವರಿಗೆ ಪರಿಹಾರ ಏಕೆ ಎಂದು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿವೆ.

 

Share This Article
error: Content is protected !!
";