ಕೆಪಿಸಿಸಿ ಹುದ್ದೆ ಅಂಗಡಿಯಲ್ಲಿ ಸಿಗಲ್ಲ, ಮಾಧ್ಯಮಗಳು ನೀಡಲ್ಲ-ಡಿಕೆಶಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂಗಡಿಯಲ್ಲಿಟ್ಟು ಮಾರಾಟ ಮಾಡುವ ಕೆಪಿಸಿಸಿ ಹುದ್ದೆ ಅಲ್ಲ. ಕೆಪಿಸಿಸಿ ಅಧ್ಯಕ್ಷ ಹುದ್ದೆ ಯಾವ ಅಂಗಡಿಯಲ್ಲೂ ಸಿಗುವುದಿಲ್ಲ
, ಮಾಧ್ಯಮಗಳ ಮುಂದೆ ಮಾತನಾಡಿದರೂ ಸಿಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದರು.

ವಿಧಾನಸೌಧದದಲ್ಲಿ ಮಾತನಾಡಿದ ಅವರು, ನಾವು ಪಕ್ಷಕ್ಕಾಗಿ ಮಾಡುವ ಕೆಲಸ ಮತ್ತು ಶ್ರಮವನ್ನು ಪಕ್ಷದ ನಾಯಕರು ಗುರುತಿಸುತ್ತಾರೆ. ಶ್ರಮಕ್ಕೆ ತಕ್ಕ ಹುದ್ದೆ ನೀಡುತ್ತಾರೆ. ಮಾಧ್ಯಮಗಳ ಮೂಲಕ ಯಾರಾದರೂ ಹುದ್ದೆ ಕೇಳುತ್ತಾರೆಯೇ?. ಇದನ್ನೆಲ್ಲಾ ಹೊಸದಾಗಿ ಕೇಳುತ್ತಿರುವೆ ಎಂದು ಡಿಸಿಎಂ ಹೇಳಿದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಪಕ್ಷದ ಯಾವುದೇ ವಿಚಾರ ಅಥವಾ ಹೊಸ ಬೆಳವಣಿಗೆ ಇದ್ದರೂ ಮಾಧ್ಯಮಗೋಷ್ಠಿ ಕರೆದು ನಾನೇ ಮಾಹಿತಿ ನೀಡುತ್ತೇನೆ. ಈಗ ನಮ್ಮ ಪಕ್ಷ ಸಂಘಟನೆ ಮಾಡಿ, ಪಕ್ಷ ಉಳಿಸಿ, ಬೆಳೆಸುವ ಕೆಲಸ ಮಾಡಬೇಕು. ಪಕ್ಷದಲ್ಲಿ ಎಲ್ಲರೂ ಶಿಸ್ತು ಕಾಪಾಡಬೇಕೆಂದು ನಮ್ಮ ಮುಖ್ಯಮಂತ್ರಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳು ಬುದ್ಧಿವಾದ ಹೇಳಿದ್ದಾರೆ. ಯಾವುದೇ ವಿಚಾರ ಬಹಿರಂಗವಾಗಿ ಚರ್ಚೆ ಮಾಡದಂತೆ ಸೂಚಿಸಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಪಕ್ಷದ ಆಂತರಿಕ ವಿಚಾರಗಳನ್ನ ಮಾಧ್ಯಮಗಳ ಮುಂದೆ ಚರ್ಚಿಸುವುದಾಗಲಿ ಮಾತನಾಡುವುದಾಗಲಿ ಅಲ್ಲ. ಏನೇ ಇದ್ದರೂ ಪಕ್ಷದ ಹೈಕಮಾಂಡ್, ಎಐಸಿಸಿ ಅಧ್ಯಕ್ಷರು, ರಾಹುಲ್ ಗಾಂಧಿ, ಮುಖ್ಯಮಂತ್ರಿ ಅಥವಾ ನನ್ನ ಬಳಿ ಬಂದು ಮಾತನಾಡಲಿ ಎಂದು ಡಿಸಿಎಂ ತಾಕೀತು ಮಾಡಿದರು.

 ಇದು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ. ಬಿಜೆಪಿ, ಜೆಡಿಎಸ್, ರೈತ ಸಂಘ ಸೇರಿದಂತೆ ಯಾವುದೇ ಪಕ್ಷವಾದರೂ ಪಕ್ಷದ ವಿಚಾರವನ್ನು ಆಂತರಿಕವಾಗಿ ಚರ್ಚೆ ಮಾಡಬೇಕೆಂದು ಹೇಳುತ್ತೇನೆ. ನಾನು ಯಾವುದಾದರೂ ಹುದ್ದೆ ಬಯಸಿದರೆ ಮಾಧ್ಯಮಗಳು ಆ ಸ್ಥಾನ ನನಗೆ ಕೊಡಿಸುತ್ತೀರಾ? ಅಥವಾ ಈ ಹುದ್ದೆಗಳು ಅಂಗಡಿಯಲ್ಲಿ ಸಿಗುತ್ತದೆಯೇ? ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ಇದರಿಂದ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಶಿವಕುಮಾರ್ ತಿಳಿಸಿದರು.

ಕಾಂಗ್ರೆಸ್ ಪಕ್ಷ ಇರುತ್ತದೆ: ಕಾಂಗ್ರೆಸ್ ಪಕ್ಷವನ್ನು ಕೇವಲ ಡಿ.ಕೆ. ಶಿವಕುಮಾರ್ ಒಬ್ಬನೇ ಅಧಿಕಾರಕ್ಕೆ ತಂದಿಲ್ಲ. ಲಕ್ಷಾಂತರ ಕಾರ್ಯಕರ್ತರು, ಮತದಾರರು ನಮ್ಮ ಮೇಲೆ ವಿಶ್ವಾಸ ಇಟ್ಟು ಅಧಿಕಾರ ನೀಡಿದ್ದಾರೆ. ಇದನ್ನು ನಾವು ಉಳಿಸಿಕೊಳ್ಳಬೇಕು. ಇದು ಕಾರ್ಯಕರ್ತರ ಹಾಗೂ ಮತದಾರರ ಪಕ್ಷ. ಇದಕ್ಕೆ ತನ್ನದೇ ಆದ ಇತಿಹಾಸವಿದೆ. ಯಾರೇ ಇರಲಿ, ಹೋಗಲಿ ತನ್ನನ್ನು ತಾನು ಉಳಿಸಿಕೊಳ್ಳುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದು ತೀಕ್ಷ್ಣವಾಗಿ ಶಿವಕುಮಾರ್ ಹೇಳಿದರು.

ಮಹಾತ್ಮಾ ಗಾಂಧೀಜಿ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಅಧಿಕಾರ ತ್ಯಾಗ ಮಾಡಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟರು, ಅವರು ಯಾವ ಅಧಿಕಾರ ಪಡೆದಿದ್ದಾರೆ? ನಾವು ಅವರನ್ನೆಲ್ಲ ಸ್ಮರಿಸಬೇಕು.

ಹೀಗಾಗಿ ಮಾಧ್ಯಮಗಳ ಮುಂದೆ ಮಾತನಾಡುವುದಕ್ಕಿಂತ ಪಕ್ಷ ಬಹಳ ಮುಖ್ಯ ಎಂದು ನಾನು ಬಹಳ ನಮ್ರತೆಯಿಂದ ಮನವಿ ಮಾಡುತ್ತೇನೆ. ಯಾರಿಗಾದರೂ ಏನೇ ಸಮಸ್ಯೆ ಇದ್ದರೂ ಹೈಕಮಾಂಡ್ ಜತೆ ಚರ್ಚಿಸಿ ಬಗೆಹರಿಸಿಕೊಳ್ಳಲಿ. ಸದ್ಯಕ್ಕೆ ನಾವು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ಸಿದ್ಧತೆಯಲ್ಲಿದ್ದು, ಇದರ ಪರಿಶೀಲನೆಗೆ ಸುರ್ಜೆವಾಲ ಅವರು ಶುಕ್ರವಾರ ಬೆಳಗಾವಿಗೆ ಆಗಮಿಸಲಿದ್ದಾರೆ. ನಿಮ್ಮ ಪ್ರಶ್ನೆಗಳು ಏನೇ ಇದ್ದರೂ ಅವರನ್ನು ಕೇಳಿ ಎಂದು ಡಿಸಿಎಂ ಮಾರ್ಮಿಕವಾಗಿ ಹೇಳಿದರು.

ಪಕ್ಷದ ಸಂಘಟನೆ ಕುಂಠಿತವಾಗಿದೆ, ಪಕ್ಷಕ್ಕೆ ಪೂರ್ಣಪ್ರಮಾಣದ ಅಧ್ಯಕ್ಷರು ಬೇಕು ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಈ ಬಗ್ಗೆ ಸ್ಪಷ್ಟನೆ ನೀಡಬೇಕಿರುವುದು ನಾನಲ್ಲ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು. ಈ ವಿಚಾರವಾಗಿ ಅವರ ಬಳಿ ಕೇಳಿ. ಅವರ ನಿರ್ಧಾರವನ್ನು ಪ್ರಶ್ನೆ ಮಾಡಲಾಗುತ್ತಿದೆ. ಈ ರೀತಿ ಮಾಡಬಾರದು ಎಂದು ಶಿವಕುಮಾರ್ ಹೇಳಿದರು.

- Advertisement -  - Advertisement -  - Advertisement - 
Share This Article
error: Content is protected !!
";