ಚಂದ್ರವಳ್ಳಿ ನ್ಯೂಸ್, ಹಾಸನ:
ಗ್ರಾಮೀಣ ಭಾಗದಲ್ಲಿ ತೆರೆಯಲಾಗಿರುವ ಕೆಪಿಎಸ್ ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಗಳಾಗಿ ಪರಿವರ್ತಿಸುವ ಮೂಲಕ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದರು.
ಕೆಲ ಹಳ್ಳಿಗಳಲ್ಲಿ ನಾಲ್ಕು-ಐದು ಮಕ್ಕಳು ಮಾತ್ರ ಸರ್ಕಾರಿ ಶಾಲೆಗೆ ಬರುತ್ತಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ನಾಮಕಾವಸ್ತೆಗೆ ಶಾಲೆಗಳು ನಡೆಯುತ್ತಿವೆ. ಇದರಿಂದ ಮಕ್ಕಳಿಗೆ ಸಮರ್ಪಕ ಶಿಕ್ಷಣ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೆಪಿಎಸ್ ಶಾಲೆಗಳನ್ನು ಬಲಪಡಿಸಿ ಮ್ಯಾಗ್ನೆಟ್ ಶಾಲೆಗಳಾಗಿ ರೂಪಾಂತರಿಸುವ ಮೂಲಕ ಉತ್ತಮ ಸೌಕರ್ಯ, ಅರ್ಹ ಶಿಕ್ಷಕರು ಮತ್ತು ಗುಣಮಟ್ಟದ ಬೋಧನೆ ಒದಗಿಸುವ ಉದ್ದೇಶ ಸರ್ಕಾರದ್ದಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಡಿಡಿಪಿಐ ರಂಗನಾಥ್ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಪ್ರಸ್ತುತ 15 ಕೆಪಿಎಸ್ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಶಾಲೆಗಳಲ್ಲೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು. ಇದೇ ವೇಳೆ ಬಿಪಿಎಲ್ ಕಾರ್ಡ್ ಆದಾಯ ಮಿತಿಯನ್ನು ಕೇವಲ 1.20 ಲಕ್ಷ ರೂ.ಗೆ ಸೀಮಿತಗೊಳಿಸಿರುವ ಬಗ್ಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಸಚಿವರ ಗಮನ ಸೆಳೆದರು. ಈ ನಿರ್ಧಾರದಿಂದ ಗ್ರಾಮೀಣ ಪ್ರದೇಶದ ಅನೇಕ ಬಡವರ ಬಿಪಿಎಲ್ ಕಾರ್ಡ್ಗಳು ರದ್ದಾಗುವ ಸಾಧ್ಯತೆ ಇದೆ. ಸಚಿವರು ಸಂಬಂಧಿತ ಅಧಿಕಾರಿಗಳಿಗೆ ವಿಷಯವನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕೃಷಿ ಇಲಾಖೆಯಲ್ಲಿ ಯೋಜನೆಗಳನ್ನು ಅಗತ್ಯವಿರುವ ರೈತರಿಗೆ ಆದ್ಯತೆ ಮೇಲೆ ನೀಡಬೇಕು. ಮೆಕ್ಕೆಜೋಳಕ್ಕೆ ಬಿಳಿ ಸುಳಿ ರೋಗ ಹೆಚ್ಚುತ್ತಿರುವುದರಿಂದ ಮಣ್ಣಿನ ಫಲವತ್ತತೆ ಪರೀಕ್ಷೆ ಮಾಡಿಸಲು ಮಾಹಿತಿ ನೀಡಬೇಕು. ತೆಂಗು ಬೆಳೆಗೆ ಬಂದಿರುವ ಕಪ್ಪು ತಲೆ ಹುಳು ರೋಗ ತಡೆಗಟ್ಟುವಿಕೆ ಗೋನಿಯೋಜಸ್ ಸೇರಿದಂತೆ ವಿವಿಧ ರೀತಿಯ ರೋಗಗಳನ್ನು ನಿಯಂತ್ರಣಕ್ಕೆ ಹೆಚ್ಚಿನ ಪ್ರಚಾರ ನೀಡಬೇಕು ಪರೋಪ ಜೀವಿಯ ಉತ್ಪಾದನೆಯನ್ನು ಸ್ಥಳೀಯ ಲ್ಯಾಬ್ಗಳ ಜೊತೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಲ್ಯಾಬ್ಗಳಲ್ಲಿ ಕೈಗೊಳ್ಳುವಂತೆ ತಿಳಿಸಿದರು.
ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಕಂದಾಯ ಗ್ರಾಮಗಳ ಪ್ರಸ್ತಾವನೆ ಕೂಡಲೇ ಸಲ್ಲಿಸಬೇಕು. ಹೇಮಾವತಿ ಜಲಾಶಯ ಯೋಜನೆಯಡಿಯಲ್ಲಿ ನೀಡಲಾಗಿರುವ ನಿವೇಶನಗಳಿಗೂ ದಾಖಲೆಗಳು ಸರಿಯಾಗಿ ಇಲ್ಲದಿದ್ದರೆ ಇಂತಹ ಪ್ರದೇಶಗಳಲ್ಲಿ 10 ಮನೆಗಳಿಗೂ ಹೆಚ್ಚು ಇದ್ದರೆ ಹಕ್ಕು ಪತ್ರವನ್ನು ನೀಡಲು ಕಂದಾಯ ಗ್ರಾಮಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಲ್ಲಿರುವ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಫಲಿತಾಂಶ ಹೆಚ್ಚಳ ಮಾಡಬೇಕು, ವಿದ್ಯಾರ್ಥಿ ವೇತನ ಸಲ್ಲಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಾವತಿಯಾಗಬೇಕು ಎಂದರು.
ಸರ್ಕಾರಿ ಆಸ್ತಿಗಳನ್ನು ತಂತ್ರಾಂಶದಲ್ಲಿ ನಮೂದಿಸಬೇಕು, ಎಲ್ಲಾ ಇಲಾಖೆಯವರು ನಮೂದಿಸಬೇಕು. 2 ಲಕ್ಷ ಪೌತಿ ಖಾತೆಗಳು ಬಾಕಿ ಇವೆ. ಇವುಗಳನ್ನು ಕೂಡಲೇ ವಾರಸುದಾರರಿಗೆ ಖಾತೆ ಮಾಡಿಕೊಡಬೇಕು. ಜಿಲ್ಲೆಯಲ್ಲಿ 17,856 ದುರಸ್ತಿ ಬಾಕಿ ಇದೆ ಕೂಡಲೇ ದುರಸ್ತಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಶಾಸಕ ಸಿಮೆಂಟ್ ಮಂಜು ಮಾತನಾಡಿ, ಜೆಜೆಎಂ ಕುಡಿಯುವ ಯೋಜನೆಯಡಿ ರಸ್ತೆಗಳನ್ನು ಅಗೆದು ಬಿಡುತ್ತಿದ್ದು, ಇದರ ಬಗ್ಗೆ ಕ್ರಮ ವಹಿಸುವಂತೆ ಆಗ್ರಹಿಸಿದರು. ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಗಿಯದೆ ಅಧಿಕಾರಿಗಳು ಗುತ್ತಿಗೆದಾರರಿಂದ ರಸ್ತೆಗಳನ್ನು ತಮ್ಮ ವಶಕ್ಕೆ ಪಡೆಯಬಾರದು ಎಂದರು.
ಶಾಸಕ ಹುಲ್ಲಹಳ್ಳಿ ಸುರೇಶ್ ಮಾತನಾಡಿ, ಬೇಸಿಗೆಯಲ್ಲಿ ವಿದ್ಯುತ್ ಅಭಾವ ಹೆಚ್ಚಾಗದಂತೆ ಗಮನಹರಿಸಬೇಕು. ವಿದ್ಯುತ್ ಇಲಾಖೆ ಅಧಿಕಾರಿಗಳು ಮಲೆನಾಡು ಭಾಗವಾದ ಬೇಲೂರು, ಸಕಲೇಶಪುರ ಭಾಗದಲ್ಲಿ ಮರದ ರೆಂಬೆಕೊಂಬೆಗಳು ಬಿದ್ದು ವಿದ್ಯುತ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಆದುದರಿಂದ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಡೀಮ್ಡ್ ಫಾರೆಸ್ಟ್ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಪರಿಶೀಲನೆ ವೇಳೆಯಲ್ಲಿ ಸರ್ಕಾರಿ ಕಚೇರಿಗಳು, ಸರ್ಕಾರಿ ಜಮೀನು, ಶಾಲೆಗಳನ್ನು, ಕೃಷಿ ಭೂಮಿಗಳನ್ನು ಕೈ ಬಿಡುವಂತೆ ಪರಿಶೀಲನೆ ನಡೆಸುವಂತೆ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಸಚಿವ ಸ್ಥಾನ ಹಂಚಿಕೆ ಕುರಿತು ಮಾತನಾಡಿದ ಅವರು, ಎಲ್ಲರಿಗೂ ಅವಕಾಶ ಸಿಗಬೇಕು ಎನ್ನುವುದು ನನ್ನ ಅಭಿಪ್ರಾಯ ಅಷ್ಟೇ. ಎಲ್ಲರಿಗೂ ಸಿಗಬೇಕು ಎಂದು ಹೇಳಿದರು.
ಸಭೆಯಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೆಚ್ಎಂ ರೇವಣ್ಣ, ಸಂಸದ ಶ್ರೇಯಸ್ ಪಟೇಲ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ಕೆ. ಎಸ್ ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ನಾಮ ನಿರ್ದೇಶಿತ ಸದಸ್ಯರಾದ ಗೋಪಾಲಸ್ವಾಮಿ, ಸುಲೋಚನಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

