ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಸರ್ಕಾರದ ಆಡಳಿತದಲ್ಲಿ ದಕ್ಷತೆ ಹಾಗೂ ಕ್ರಿಯಾಶೀಲತೆ ಹೆಚ್ಚಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನೇಮಕ, ಮಾಡಬೇಕಾದ ಕರ್ನಾಟಕ ಲೋಕಸೇವಾ ಆಯೋಗದ ವ್ಯವಸ್ಥೆ ದಿನೇ ದಿನೇ ದಿಕ್ಕು ತಪ್ಪುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ.
ಕೆಪಿಎಸ್ಸಿ ಆಯೋಗದ ಆಡಳಿತ ವ್ಯವಸ್ಥೆ ತುಕ್ಕು ಹಿಡಿಯುತ್ತಿದೆ, ಗೊಂದಲಗಳ ಗೂಡಾಗುತ್ತಿದೆ. ಉದ್ಯೋಗಾಕಾಂಕ್ಷಿತ ರಾಜ್ಯದ ಅಭ್ಯರ್ಥಿಗಳು KPSC ಯ ಪರೀಕ್ಷೆಗಳು ಹಾಗೂ ಆಯ್ಕೆ ಕುರಿತು ಕನಸು ಕಟ್ಟಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಇದು ಆಡಳಿತ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು ಅನೇಕ ಇಲಾಖೆಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆಯನ್ನು ಎದುರಿಸುವಂತಾಗಿದೆ ಎಂದು ವಿಜಯೇಂದ್ರ ಹರಿಹಾಯ್ದಿದ್ದಾರೆ.
ನಾಗರಿಕ ಸೇವೆಗಳ ಪರೀಕ್ಷೆಗಳನ್ನು ಸುಧಾರಣೆ ಮಾಡಬೇಕೆಂಬ ಉದ್ದೇಶದಿಂದ ನೀಡಿರುವ ಪಿಸಿ ಹೋಟಾ ಸಮಿತಿಯ ಕೆಲವು ಶಿಫಾರಸುಗಳೇ ಈಗ ಕನ್ನಡಿಗ ಅಭ್ಯರ್ಥಿಗಳಿಗೆ ಮಾರಕವಾಗಿದೆ, KPSC ನಿರಂತರವಾಗಿ ದಕ್ಷತೆ, ಪ್ರಾಮಾಣಿಕತೆ ಮೆರೆಯುವಲ್ಲಿ ವಿಫಲವಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು ಗೊಂದಲಗಳು ತಲೆ ಎತ್ತಲು ಎಡೆಮಾಡಿಕೊಟ್ಟಿದೆ.
ನಾಡಿನ ಪ್ರತಿಭಾನ್ವಿತ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಸರ್ಕಾರ ಜರೂರು ಕ್ರಮ ವಹಿಸಲಿ ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ವಿಜಯೇಂದ್ರ ಒತ್ತಾಯಿಸಿದ್ದಾರೆ.