ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಪಿಎಸ್ಸಿ ಮರುಪರೀಕ್ಷೆಯಲ್ಲಿ ಕನ್ನಡ ವ್ಯಾಕರಣ ದೋಷ, ತಪ್ಪು ಪದಗಳ ಪ್ರಯೋಗ, ಅಪಾರ್ಥ ಸೇರಿದಂತೆ ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದ ಮಾಡುವಲ್ಲಿ 79 ದೋಷಗಳು ಕಂಡು ಬಂದಿವೆ ಎಂದು ವಿಷಯ ತಜ್ಞರು, ಸಾಹಿತಿಗಳು, ಕನ್ನಡಪರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಕೆಪಿಎಸ್ಸಿ ಕಾರ್ಯದರ್ಶಿಗಳಿಗೆ, ಅಧ್ಯಕ್ಷರಿಗೆ ಪತ್ರ ಬರೆದಿದ್ದರೂ ಪರಿಗಣಿಸದ ಸರ್ಕಾರ, ಕೇವಲ 39 ತಪ್ಪುಗಳಿಗೆ ಕೃಪಾಂಕ ನೀಡುವ ಮೂಲಕ ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದಾರೆ.
ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳು, ಹಳ್ಳಿಗಾಡಿನ ವಿದ್ಯಾರ್ಥಿಗಳು ಅಂದರೆ ತಮ್ಮ ಸರ್ಕಾರಕ್ಕೆ ಯಾಕಿಷ್ಟು ತಾತ್ಸಾರ? ಬಡವರ ಮಕ್ಕಳು ಕೆ.ಎ.ಎಸ್ ಅಧಿಕಾರಿ ಆಗಬೇಕು, ಗೆಜೆಟೆಡ್ ಅಧಿಕಾರಿ ಆಗಬೇಕು ಎಂದು ಕನಸು ಕಾಣುವುದೇ ತಪ್ಪಾ?
ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ದ್ರೋಹ ಮಾಡುತ್ತಿರುವ ನಿಮ್ಮ ಕನ್ನಡ ವಿರೋಧಿ, ನಾಡದ್ರೋಹಿ ಕರ್ನಾಟಕ ಕಾಂಗ್ರೆಸ್ ಸರಕಾರವನ್ನ ತಾಯಿ ಭುವನೇಶ್ವರಿ ಎಂದಿಗೂ ಕ್ಷಮಿಸುವುದಿಲ್ಲ ಎಂದು ಅಶೋಕ್ ಟೀಕಿಸಿದ್ದಾರೆ.