ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲ್ಲೂಕಿನ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಹಣಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಣಬೆ ಕೆರೆಗೆ ನೀರು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದ್ದು ಮಂಗಳವಾರ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಹಣಬೆ ವಿಎಸ್ಎಸ್ಎನ್ ಅಧ್ಯಕ್ಷ ಕೆ ಎಸ್ ರವಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಬಿ ಮುನಿರಾಜು, ಹೆಚ್ ಸಿ ಹರೀಶ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ದೊಡ್ಡಬಳ್ಳಾಪುರ ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಅಂತಿಮಗೊಳಿಸಿರುವಂತೆ ತಾಲ್ಲೂಕಿನ 05 ಕೆರೆಗಳನ್ನು ಗುರುತಿಸಲಾಗಿದೆ.
ಈ ಆಯ್ಕೆ 5 ಕೆರೆಗಳಿಂದ ಕುಡಿಯುವ ನೀರನ್ನು ಕಲ್ಪಿಸುವ ವರದಿ ತಯಾರಿಕೆ ಹಂತದಲ್ಲಿದ್ದು ಸದರಿ 05 ಕರೆಗಳಲ್ಲಿ ಹಣಬೆ ಕೆರೆಯೂ ಸೇರಿದೆ, ಹಣಬೆ ಕೆರೆಗೆ ನೀರು ತುಂಬಿಸಿ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಪೂರೈಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದರು.
ಈ ವೇಳೆ ಹಣಬೆ ಗ್ರಾಮದ ಮುಖಂಡರಾದ ಮಲ್ಲ ರಾಜು, ಮುನಿರಾಜು, ರಾಮಕೃಷ್ಣಪ್ಪ, ಜಗದೀಶ್ ಸ್ಥಳೀಯ ಪ್ರಮುಖರು, ಗ್ರಾಮಸ್ಥರು ಹಾಜರಿದ್ದರು.

