ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತ (ಕೆಎಸ್ಡಿಎಲ್) ಸಂಸ್ಥೆಯ ಖರೀದಿ ವಿಭಾಗದ ಅಧಿಕಾರಿ ಡೆತ್ ನೋಟ್ ಬರೆದಿಟ್ಟು ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಂಗಳೂರು ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಅಮೃತ್ ಶಿರೂರು (42) ಆತ್ಮಹತ್ಯೆಗೆ ಶರಣಾದ ಅಧಿಕಾರಿ. ಕೆಎಸ್ಡಿಎಲ್ನ ಖರೀದಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಮೃತ್ ಅವರು, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು.
ಡಿ. 28ರ ಸಂಜೆ 5ಗಂಟೆ ಸುಮಾರಿಗೆ ಆತ್ಮಹತ್ಯೆಗೆ ಶರಣಾಗಿದ್ದು ಘಟನೆ ಸಂಬಂಧ ಪರಿಶೀಲನೆ ನಡೆಸಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಮಾತನಾಡಿ, ಕೆಎಸ್ಡಿಎಲ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮಾಹಿತಿ(ದೂರು) ಬಂದಿತ್ತು. ಮಹಾಲಕ್ಷ್ಮಿ ಲೇಔಟ್ ಮನೆ ಮಾಲೀಕ ಗಿರೀಶ್ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ನಂತರ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿ ನಂತರ ಅವರ ಸಹೋದರನಿಗೆ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.
ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ಮೂಲದ ಮೃತ ಅಮೃತ್ ಶಿರೂರು ಅವರು 10 ವರ್ಷದಿಂದ ಕೆಎಸ್ಡಿಎಲ್ನಲ್ಲಿ ಕೆಲಸ ಮಾಡುತ್ತಿದ್ದರು. ಸ್ಥಳದಲ್ಲಿ ಒಂದು ಡೆತ್ ನೋಟ್ ಸಿಕ್ಕಿದೆ. ಅದರಲ್ಲಿ ನನ್ನ ಸಾವಿಗೆ ಯಾರೂ ಕಾರಣ ಅಲ್ಲ ಎಂದು ಬರೆಯಲಾಗಿದೆ. ಅದೇ ರೀತಿ ನನ್ನ ಜೀವನ ಜಿಗುಪ್ಸೆಯಾಗಿದೆ ಎಂಬ ಮಾತನ್ನ ಉಲ್ಲೇಖಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಕರಣದ ತನಿಖೆ ನಡೆಸಲಾಗುತ್ತೆ ಎಂದು ಹೇಳಿದರು.
ಡೆತ್ ನೋಟ್ನಲ್ಲಿ ಯಾವುದೇ ವ್ಯಕ್ತಿ, ಅಧಿಕಾರಿ ಹೆಸರು ಉಲ್ಲೇಖ ಮಾಡಿಲ್ಲ, ನನ್ನ ಕೆಲಸಕ್ಕೆ ನ್ಯಾಯ ಒದಗಿಸಲಾಗುತ್ತಿಲ್ಲ ಎಂದು ಮಾತ್ರ ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳ ನೋಡಿದಾಗ ಯಾವುದೇ ರೀತಿಯ ಸಂಶಯ ಕಂಡು ಬಂದಿಲ್ಲ. ಇನ್ನೂ ಮೆಡಿಕಲ್ ರಿಪೋರ್ಟ್ ಬರಬೇಕಿದೆ. ಅದರ ಆಧಾರದ ಮೇಲೆ ತನಿಖೆ ನಡೆಸುತ್ತೇವೆ.
ಅಮೃತ್ಗೆ ಮೊದಲ ಮದುವೆಯ ಡಿವೋರ್ಸ್ ಬಳಿಕ ಮತ್ತೊಂದು ಮದುವೆ ಆಗಿತ್ತು. ಅದು ಕೂಡ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದೆ. ಅದರ ಬಗ್ಗೆ ನಮಗೆ ಯಾವುದೇ ಡಾಕ್ಯುಮೆಂಟ್ಸ್ ಸಿಕ್ಕಿಲ್ಲ. ಕೌಟುಂಬಿಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದಾ ಎನ್ನುವ ಅನುಮಾನ ಇದೆ. ಅವರು ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು ಎಂದು ಡಿಸಿಪಿ ಮಾಹಿತಿ ನೀಡಿದರು.