ಅಧಿಕೃತ, ವೈಜ್ಞಾನಿಕ ಮತ್ತು ಪಾರದರ್ಶಕವಾದ ಜಾತಿ ಗಣತಿ ಆಗಲಿದೆ-ಕುಮಾರ ಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಂಬರುವ ಜನಗಣತಿ ಜೊತೆಯಲ್ಲಿಯೇ ಜಾತಿ ಗಣತಿಯನ್ನೂ ನಡೆಸುವ ಮಹತ್ವದ ನಿರ್ಧಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಅವರ ಕ್ರಿಯಾಶೀಲ ನಾಯಕತ್ವದಲ್ಲಿ ಇದು ಐತಿಹಾಸಿಕ ಮತ್ತು ದೂರದೃಷ್ಟಿಯ ನಿರ್ಧಾರವಾಗಿದೆ. ಜಾತಿ ಗಣತಿಯು 1931ರ ನಂತರ ಇದೇ ಮೊದಲ ಬಾರಿಗೆ ಮುಂಬರುವ ರಾಷ್ಟ್ರೀಯ ಜನಗಣತಿಯ ಭಾಗವಾಗಲಿದೆ ಎಂಬುದು ಗಮನಾರ್ಹ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಮಹತ್ವದ ಹೆಜ್ಜೆಯು ಭಾರತವು ಅಧಿಕೃತ, ವೈಜ್ಞಾನಿಕ ಮತ್ತು ಪಾರದರ್ಶಕವಾದ ಜಾತಿ ದತ್ತಾಂಶ ಹೊಂದಲಿದೆ. ಕೇವಲ ರಾಜಕೀಯ ಪ್ರೇರಿತ ರಾಜ್ಯ ಮಟ್ಟದ ಸಮೀಕ್ಷೆಗಳು ವಿಶ್ವಾಸಾರ್ಹತೆ, ಏಕರೂಪತೆ ಹೊಂದಿರುವುದಿಲ್ಲ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ದಿಟ್ಟ ಕ್ರಮದೊಂದಿಗೆ ಪ್ರಧಾನಿ ಮೋದಿ ಅವರು ಸಮಗ್ರ ಆಡಳಿತ ಮತ್ತು ದತ್ತಾಂಶ ಚಾಲಿತ ನೀತಿ ನಿರೂಪಣೆ ಬಗ್ಗೆ ಹೊಂದಿರುವ ತಮ್ಮ ಅಚಲ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಅಲ್ಲದೇ, ಈ ಗಣತಿಯು ಕಲ್ಯಾಣ ಕಾರ್ಯಕ್ರಮಗಳನ್ನು ಬಲಗೊಳಿಸುತ್ತದೆ, ಸಾಮಾಜಿಕ ನ್ಯಾಯವನ್ನು ಇನ್ನಷ್ಟು ಖಚಿತಪಡಿಸುತ್ತದೆ ಹಾಗೂ ಸರ್ವರಿಗೂ ಸಮಾನ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರದ ಹಿತದೃಷ್ಟಿಯಿಂದ ಈ ನಿರ್ಣಾಯಕ ಮತ್ತು ದೂರದೃಷ್ಟಿಯ ನಿರ್ಧಾರಕ್ಕಾಗಿ ಪ್ರಧಾನಮಂತ್ರಿಯವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ನಿರ್ಧಾರವನ್ನು ನಾನು, ನಮ್ಮ ಪಕ್ಷವು ಸ್ವಾಗತಿಸುತ್ತದೆ ಎಂದು ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.

 

Share This Article
error: Content is protected !!
";