ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷದ ನಾಯಕ, ಭಾವಿ ಮುಖ್ಯಮಂತ್ರಿಗಳೇ ಎಂದು ಬಿಂಬಿತವಾಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು
ದೆಹಲಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್ ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ ಅವರನ್ನು ಭೇಟಿಯಾಗಿ ಚರ್ಚಿಸಿರುವುದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಠಿಸಿದೆ.
ಭೇಟಿ ಮಾಡಿದ್ದೂ ಆಕಸ್ಮಿಕವೋ ಉದ್ದೇಶ ಪೂರಕವೋ ತಿಳಿಯುತ್ತಿಲ್ಲ. ಆದರೆ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಅವರು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಅವರೊಟ್ಟಿಗೆ ಜೊತೆಯಾಗಿ ಊಟ ಮಾಡಿದ್ದಾರೆ ಎನ್ನಲಾಗಿದೆ.
ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಊಟಕ್ಕೆ ಆಹ್ವಾನ ಮಾಡಿದ್ದು ಕೇಂದ್ರ ಸಚಿವ ಕುಮಾರಸ್ವಾಮಿ ಅವರೇ ಎಂದು ಹೇಳಲಾಗುತ್ತಿದೆ.
ದೇವೇಗೌಡರು, ಕುಮಾರಸ್ವಾಮಿ ಅವರಿಬ್ಬರ ಜೊತೆ ಕುಳಿತು ಮಾತಾಡುತ್ತಿರುವ ಫೋಟೋ ಚಂದ್ರವಳ್ಳಿ ಪತ್ರಿಕೆಗೆ ಲಭ್ಯವಾಗಿವೆ.
ರಮೇಶ್ ಜಾರಕಿಹೊಳಿ, ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ಸಿಡಿಗಳು ಹೊರ ಬಂದಿದ್ದವು. ಇದಾದ ನಂತರ ಕೆ.ಎನ್.ರಾಜಣ್ಣ ಅವರಿಗೆ ಹನಿಟ್ರ್ಯಾಪ್ ಮಾಡಲು ಪ್ರಯತ್ನ ನಡೆದಿರುವ ಕುರಿತು ಸದನದಲ್ಲೇ ವಿಷಯ ಪ್ರಸ್ತಾಪ ಮಾಡಿ ರಾಜ್ಯ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯಲು ಕಾರಣವಾಗಿತ್ತು.
ಇಂತಹ ಸಂದರ್ಭದಲ್ಲೇ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಅವರು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರನ್ನ ಈಗ ಭೇಟಿ ಮಾಡಿರುವುದು ನಾನಾ ರೀತಿಯ ಚರ್ಚೆಗಳನ್ನು ಮತ್ತು ರಾಜಕೀಯ ವಿದ್ಯಮಾನಗಳ ಸಂಭಸುವ ಸಾಧ್ಯತೆ ಕುರಿತು ತೀವ್ರ ಕುತೂಹಲ ಮೂಡಿಸಿದೆ. ದೇವೇಗೌಡರ ಕುಟುಂಬದ ರಾಜಕೀಯ ಕಡುವೈರಿ ಡಿಸಿಎಂ ಡಿಕೆ ಶಿವಕುಮಾರ್ ಹಣಿಯಲು ಕಾಂಗ್ರೆಸ್ ಪಕ್ಷದವರು ಸೇರಿದಂತೆ ಜೆಡಿಎಸ್ ಒಂದಾಗುವ ಲಕ್ಷಣಗಳು ಕಾಣುತ್ತಿವೆ. ಒಟ್ಟಾರೆ ರಾಜಕೀಯವಾಗಿ ಯಾವ ರೀತಿಯ ತಿರುವು ಪಡೆಯುತ್ತದೆ ಎಂದು ಸದ್ಯಕ್ಕೆ ಹೇಳಲು ಅಸಾಧ್ಯವಾಗಿದೆ. ಎಲ್ಲವನ್ನೂ ಕಾದು ನೋಡಬೇಕಿದೆ.