ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ರಾಜಕೀಯ ಯುದ್ಧ ಅಂದ್ರೆ ಬಂದೂಕು ಹಿಡಿದು ಮಾಡ್ತಾರಾ? ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವ್ಯಂಗ್ಯವಾಡಿದರು.
ಸದಾಶಿವನಗರದ ನಿವಾಸದ ಬಳಿ ಇಂದು ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಯುದ್ಧ ಅಂದ್ರೆ ಟೀಕೆ, ಟಿಪ್ಪಣಿ. ಸರ್ಕಾರ ಉತ್ತರ ಕೊಡಲು ಸಮರ್ಥವಿದೆ. ಅವರು ದಾಖಲಾತಿ ಬಿಡುಗಡೆ ಮಾಡುತ್ತೇನೆ ಅಂತ ಹೇಳಿದ್ದಾರೆ. ಬಿಡುಗಡೆ ಮಾಡಲಿ, ಆಮೇಲೆ ಉತ್ತರ ಕೊಡುತ್ತೇವೆ ಎಂದು ಪರಮೇಶ್ವರ್ ಹೇಳಿದರು. ಕುಮಾರಸ್ವಾಮಿ ಅವರು ಕೇಂದ್ರದ ಯೋಜನೆಗಳ ಸಂಬಂಧ ರಾಜ್ಯಕ್ಕೆ ಸಹಾಯ ಮಾಡಬೇಕು. ಯುದ್ಧ ಮಾಡ್ತೇನೆ ಅಂದ್ರೆ ಜನರು ಗಮನಿಸುತ್ತಾರೆ. ಕೇಂದ್ರ ಸಚಿವರಿದ್ದಾರೆ, ದೊಡ್ಡ ಖಾತೆ ಅವರ ಬಳಿ ಇದೆ. ರಾಜ್ಯ ಸರ್ಕಾರಕ್ಕೆ ಏನು ಕೊಡುಗೆ ಕೊಡ್ತಾರೆ ನೋಡೋಣ ಎಂದು ಗೃಹ ಸಚಿವರು ಪ್ರಶ್ನಿಸಿದರು.
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಕೊಡುವಂತೆ ಬಿಜೆಪಿಗರು ಆಗ್ರಹ ಮಾಡುತ್ತಿದ್ದಾರೆ. ಈಗಾಗಲೇ ತನಿಖೆ ನಡೆಯುತ್ತಿದೆ. ಸಿಬಿಐಗೆ ಕೊಡುವ ಅಗತ್ಯವೇನೂ ಕಾಣಿಸುತ್ತಿಲ್ಲ. ನಮ್ಮ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಏನಾದರೂ ಲ್ಯಾಪ್ಸ್ ಇದ್ರೆ ಗೊತ್ತಾಗುತ್ತದೆ. ಲ್ಯಾಪ್ಸ್ ಇದ್ರೆ ಬೇರೆ ಕ್ರಮ ತೆಗೆದುಕೊಳ್ಳುತ್ತೇವೆ. ಶಾಸಕರ ಹೆಸರನ್ನು ಬಿಜೆಪಿಗರು ಹೇಳುತ್ತಿದ್ದಾರೆ. ಎಫ್ಐಆರ್ ನಲ್ಲಿ ಹೆಸರು ಬಿಟ್ಟಿದ್ದಾರೆ. ಡೆತ್ನೋಟ್ನಲ್ಲಿ ಶಾಸಕರ ಹೆಸರಿದೆ ಅಂತಿದ್ದಾರೆ. ಎಲ್ಲವನ್ನೂ ನೋಡುತ್ತೇವೆ, ಕಾನೂನು ಪ್ರಕಾರ ತನಿಖೆ ಮಾಡುತ್ತೇವೆ ಎಂದು ಸಚಿವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಚಿವ ಜಿ.ಪರಮೇಶ್ವರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸದಾಶಿವ ನಗರದ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿ ಮಾತನಾಡಿದ ಅವರು, ರಾಜಕೀಯ ವಿಚಾರಗಳ ಬಗ್ಗೆ ಏನೂ ಚರ್ಚೆ ಮಾಡಿಲ್ಲ. ಖರ್ಗೆಯವರು ನನಗೆ ಹಿರಿಯಣ್ಣ. ಕಾಫಿ ಕುಡಿದೆವು, ಕುಟುಂಬದ ಬಗ್ಗೆ ಮಾತನಾಡಿದ್ದೇವೆ. ಅವರ ಆರೋಗ್ಯ ವಿಚಾರಿಸಿದ್ದೇನೆ. ನಮ್ಮದು ಒಂದೇ ಕುಟುಂಬ, ಸೌಜನ್ಯದ ಭೇಟಿ. ನಾವು ರಾಜಕೀಯ ಏನೂ ಮಾತಾಡಲ್ಲ ಎಂದು ತಿಳಿಸಿದರು.
ಪ್ರಿಯಾಂಕ್ ಖರ್ಗೆ, ಸಂಸದ ರಾಧಾಕೃಷ್ಣ ಇದ್ದಾರೆ. ನಾವೆಲ್ಲ ಮಾತಾಡ್ತೇವೆ. ಪ್ರಿಯಾಂಕ್ ಅವರನ್ನು ಚಿಕ್ಕಂದಿನಿಂದ ನೋಡಿದ್ದೇನೆ. ಅವರ ಕುಟುಂಬದ ಜೊತೆಗೆ 40 ವರ್ಷದ ಸಂಬಂಧವಿದೆ. ಎಐಸಿಸಿ ಅಧ್ಯಕ್ಷರಿಗೆ ಅವರದೇ ಆದ ಚಾನೆಲ್ ಇದೆ. ಅವರು ಮಾಹಿತಿ ಪಡೆದುಕೊಂಡಿರ್ತಾರೆ. ಅವರೇನೂ ಕೇಳಿಲ್ಲ, ನಾನೇನೂ ಹೇಳಿಲ್ಲ ಎಂದು ತಿಳಿಸಿದರು.