ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಂಡ್ಯ ಜಿಲ್ಲೆಯ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದೆ. ಅದರಂತೆ ನುಡಿದಂತೆ ನಡೆಯುತ್ತಿದ್ದೇನೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ತಿಳಿಸಿದರು. ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಜನತೆಯ ಆಶೀರ್ವಾದ, ಭಗವಂತನ ಕೃಪೆಯಿಂದ ಅವಕಾಶ ಸಿಕ್ಕಿದಾಗಲೆಲ್ಲ ಜಿಲ್ಲೆ ಮತ್ತು ರಾಜ್ಯದ ಜನತೆಯ ಸೇವೆಯನ್ನು ನಿಷ್ಠೆಯಿಂದ ಮಾಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನ, ದೂರದೃಷ್ಟಿಯೊಂದಿಗೆ ಸಿಎಸ್ ಆರ್ ನಿಧಿ ಮೂಲಕ ಮಂಡ್ಯ ಜಿಲ್ಲೆಯ ಜನರ ಉನ್ನತಿಗೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಆರೋಗ್ಯ, ಶಿಕ್ಷಣ, ನೈರ್ಮಲ್ಯ, ಮೂಲಸೌಕರ್ಯ ಹಾಗೂ ವಿಕಲಚೇತನರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.
ಈ ದಿನ 388 ವಿಕಲಚೇತನ ಬಂಧುಗಳಿಗೆ ಟಿವಿಎಸ್ ಕಂಪನಿಯ ನಾಲ್ಕು ಚಕ್ರದ ವಾಹನಗಳನ್ನು ಹಸ್ತಾಂತರ ಮಾಡಲಾಗುತ್ತಿದೆ. ಹಾಗೆಯೇ, ಸರ್ಕಾರಿ ಶಾಲೆ ಕಾಲೇಜುಗಳಿಗೆ 100 ಲ್ಯಾಪ್ ಟಾಪ್, 500 ಕಂಪ್ಯೂಟರ್ ಗಳನ್ನು ಕೊಡಲಾಗುವುದು ಹಾಗೂ ಮಂಡ್ಯದ ವಿಮ್ಸ್ ಸಂಸ್ಥೆಗೆ ಸುಸಜ್ಜಿತ ಆಂಬುಲೆನ್ಸ್ ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.
ಮಂಡ್ಯದ ವಿ.ಸಿ. ಫಾರಂನಲ್ಲಿ 14 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಹುಪಯೋಗಿ ನೂತನ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ಹಾಗೂ 388 ವಿಕಲಚೇತನ ಬಂಧುಗಳಿಗೆ ಟಿವಿಎಸ್ ಎಲೆಕ್ಟ್ರಿಕ್ ವಾಹನಗಳ ನೀಡಿಕೆ, ಸರಕಾರಿ ಶಾಲೆ ಕಾಲೇಜುಗಳಿಗೆ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ವಿತರಣೆ ಹಾಗೂ ಸರಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ಕೊಡುಗೆ ಇತ್ಯಾದಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಕುಮಾರಸ್ವಾಮಿ ತಿಳಿಸಿದರು.

