ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿದ ಕುಮಾರಸ್ವಾಮಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಬದಲಾದ ಆಹಾರ ಪದ್ದತಿ
, ಜೀವನ ಶೈಲಿಗೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರತನಕ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯ ಕಾಯಿಲೆಗಳಿಂದ ಬಳಲುವಂತಾಗಿದೆ. ಆರು ತಿಂಗಳಿಗೊಮ್ಮೆ ಇಲ್ಲವೆ ವರ್ಷಕ್ಕೊಮ್ಮೆಯಾದರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವುದು ಒಳ್ಳೆಯದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನಿವೃತ್ತ ಶಿಕ್ಷಕರಗಳಲ್ಲಿ ಮನವಿ ಮಾಡಿದರು.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಹಾಗೂ ಕಾಲೇಜು ನಿವೃತ್ತ ಶಿಕ್ಷಕರ ಸಂಘಗಳ ಒಕ್ಕೂಟ ಜಿಲ್ಲಾ ಘಟಕ ಹಾಗೂ ಎನ್.ಎಂ.ಕಿಡ್ನಿಕೇರ್ ಸಹಯೋಗದೊಂದಿಗೆ ಭಾನುವಾರ ಐ.ಎಂ.ಎ.ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

- Advertisement - 

ಹಿಂದಿನ ಕಾಲದಲ್ಲಿ ಕೊಟ್ಟಿಗೆ ಗೊಬ್ಬರ ಬಳಸಿ ರೈತರು ಆಹಾರ ಧಾನ್ಯಗಳನ್ನು ಬೆಳೆಯುತ್ತಿದ್ದರು. ಪಶು, ಪಕ್ಷಿ, ಪ್ರಾಣಿಗಳೊಡನೆ ಒಡನಾಟವಿತ್ತು. ಈಗ ಪ್ಯಾಕೆಟ್ ಹಾಲು ಕುಡಿಯುವ ಕಾಲ ಬಂದಿದೆ. ಸೇವಿಸುವ ಪ್ರತಿಯೊಂದು ಆಹಾರವು ಕಲುಷಿತಗೊಂಡಿರುವುದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯಾಘಾತ ಸಾಮಾನ್ಯವಾಗಿದೆ. ಆಧುನಿಕರಣ, ನಗರೀಕರಣ, ಕೈಗಾರಿಕರಣದಲ್ಲಿ ಮುಳುಗಿದ್ದೇವೆ. ಎಲ್ಲಾ ರಂಗದಲ್ಲಿಯೂ ಪೈಪೋಟಿ ಏರ್ಪಟ್ಟಿರುವುದರಿಂದ ಮನುಷ್ಯ ದುಡ್ಡಿನ ಹಿಂದೆ ಓಡುತ್ತ ಆರೋಗ್ಯವನ್ನು ಲೆಕ್ಕಿಸದಂತಾಗಿದ್ದಾನೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕಾಲೇಜು ನಿವೃತ್ತ ಶಿಕ್ಷಕರ ಸಂಘಗಳ ಒಕ್ಕೂಟ ಜಿಲ್ಲಾ ಘಟಕ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೊಬೈಲ್, ಫೇಸ್ಬುಕ್, ವಾಟ್ಸ್‌ಪ್ ಮೂರ್ಖರ ಪೆಟ್ಟಿಗೆಯಾಗಿದೆ. ಕಂಪ್ಯೂಟರ್ ಯುಗದಲ್ಲಿ ಗೊತ್ತಿಲ್ಲದೆ ನಾನಾ ರೀತಿಯ ಕಾಯಿಲೆಗಳಿಗೆ ಮನುಷ್ಯ ತುತ್ತಾಗುತ್ತಿದ್ದಾನೆ. ಮಾನವನ ದುರಾಸೆಯಿಂದ ಕಾಡು ನಾಶವಾಗಿ ನಗರೀಕರಣವಾಗುತ್ತಿರುವುದರಿಂದ ಪರಿಸರ ನಾಶವಾಗುತ್ತಿದೆ. ವಿಜ್ಞಾನ, ವೈದ್ಯಕೀಯ ಸಾಕಷ್ಟು ಬೆಳೆದಿದೆ. ಆರೋಗ್ಯದ ಬಗ್ಗೆ ಅಸಡ್ಡೆ ಬೇಡ. ಅದರಲ್ಲೂ ಕಿಡ್ನಿ ಕಡೆ ಕಾಳಜಿ ವಹಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ. ಮದ್ಯಪಾನ, ಧೂಮಪಾನ, ಗುಟ್ಕಾ ಸೇವೆಗೆ ಯುವ ಜನಾಂಗ ಬಲಿಯಾಗುತ್ತಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

- Advertisement - 

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಹಾಗೂ ಕಾಲೇಜು ನಿವೃತ್ತ ಶಿಕ್ಷಕರ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರೊ.ಕೆ.ಜಿ.ಲೋಕೇಶ್ ಮಾತನಾಡಿ ೨೦೧೮ ರಲ್ಲಿ ಸಂಘ ಹುಟ್ಟಿಕೊಂಡಿತು. ಆಗಿನಿಂದ ನಮ್ಮ ಕಷ್ಟ-ಸುಖ, ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಒಂದು ವೇದಿಕೆ ಸಿಕ್ಕಂತಾಗಿದೆ. ನಮ್ಮ ಸಂಘಟನೆಯಲ್ಲೂ ಸಣ್ಣ ಪುಟ್ಟ ಲೋಪಗಳಿವೆ. ಎಲ್ಲವನ್ನು ಸರಿದೂಗಿಸಿಕೊಂಡು ಹೋಗಬೇಕೆಂಬುದು ನಮ್ಮ ಉದ್ದೇಶ. ೨೦ ಲಕ್ಷ ರೂ.ಎಫ್‌ಡಿ.ಯಿದೆ. ಸಾರ್ವಜನಿಕರಿಗೆ ಅನುಕೂಲವಾಗಲೆಂದು ಉಚಿತ ಆರೋಗ್ಯ ತಪಾಸಣೆಯನ್ನು ಹಮ್ಮಿಕೊಂಡಿದ್ದೇವೆ. ಇಂತಹ ಶಿಬಿರಗಳಿಂದ ತಪಾಸಣೆ ನಡೆಸಿ ರೋಗಗಳನ್ನು ಪತ್ತೆಹಚ್ಚಿ ಚಿಕಿತ್ಸೆ ಕೊಡಲು ಸುಲಭವಾಗುತ್ತದೆ. ಹಿರಿಯ ನಾಗರೀಕರಿಗೆ ಅಧಿಕಾರಿಗಳು ಸ್ಪಂದಿಸಬೇಕು. ಕಿಡ್ನಿ ಸಮಸ್ಯೆಯಿಂದ ಅನೇಕರ ಜೀವ ಬಲಿಯಾಗುತ್ತಿದೆ. ಅದರಲ್ಲೂ ನಿವೃತ್ತರು ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸುವಂತೆ ಸಲಹೆ ನೀಡಿದರು.

ಎನ್.ಎಂ.ಕಿಡ್ನಿಕೇರ್‌ನ ಡಾ.ಮುರಳಿಮುಪ್ಪರಪು ಮಾತನಾಡಿ ಕಿಡ್ನಿ ಬಗ್ಗೆ ಬಹಳಷ್ಟು ಮಂದಿಗೆ ಮಾಹಿತಿಯಿಲ್ಲ. ೧೯೭೧ ರಲ್ಲಿ ನಮ್ಮ ದೇಶದಲ್ಲಿ ಮೊದಲ ಬಾರಿಗೆ ಡಯಾಲಿಸಿಸ್ ಆರಂಭಗೊಂಡಿತು. ನೂರರಲ್ಲಿ ಹದಿನಾಲ್ಕು ಮಂದಿಗೆ ಕಿಡ್ನಿ ಸಮಸ್ಯೆ ಕಂಡು ಬರುತ್ತಿದೆ. ಕಿಡ್ನಿ ಹಾಳಾಗುವ ಮುನ್ನ ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ. ಕೆಲವರು ನಾನು ಧೂಮಪಾನ, ಮದ್ಯಪಾನ, ಗುಟ್ಕಾ ಸೇವನೆ ಮಾಡುವುದಿಲ್ಲ. ಹಾಗಾಗಿ ಕಿಡ್ನಿ ಸಮಸ್ಯೆಯಿಲ್ಲ ಎನ್ನುವ ತಪ್ಪು ಕಲ್ಪನೆಯಲ್ಲಿರುತ್ತಾರೆ. ಶೇ.೭೦ ರಿಂದ ೮೦ ರಷ್ಟು ಹಾಳಾದಾಗಲೆ ಕಿಡ್ನಿ ವೈಫಲ್ಯವಾಗಿದೆ ಎನ್ನುವುದು ಗೊತ್ತಾಗುತ್ತದೆ. ೨೧ ರಿಂದ ೩೦ ವರ್ಷ ಹಾಗೂ ೫೧ ರಿಂದ ೬೦ ವರ್ಷದೊಳಗಿನವರು ಕಿಡ್ನಿ ಸಮಸ್ಯೆಗೆ ತುತ್ತಾಗುವುದುಂಟು. ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಪ್ರಯೋಜನ ಪಡೆದುಕೊಂಡು ಸಾರ್ವಜನಿಕರು ಏನಾದರೂ ಸಮಸ್ಯೆಗಳಿದ್ದರೆ ಚಿಕಿತ್ಸೆ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಕಾಲೇಜು ನಿವೃತ್ತ ಶಿಕ್ಷಕರ ಸಂಘಗಳ ಒಕ್ಕೂಟ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಟಿ.ಹೆಚ್.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ವರ್ಷಕ್ಕೊಂದು ಸಲವಾದರೂ ಎಲ್ಲರೂ ಆರೋಗ್ಯ ತಪಾಸಣೆಗೊಳಗಾದರೆ ಏನಾದರೂ ಸಮಸ್ಯೆಗಳಿದ್ದರೆ ಪತ್ತೆಯಾಗುತ್ತದೆ. ಆಗ ಚಿಕಿತ್ಸೆ ಪಡೆದುಕೊಳ್ಳಬಹುದು. ಎಲ್ಲಾ ಸಂಘಟನೆಗಳಂತೆ ನಮ್ಮ ಸಂಘವು ಇರುವುದು ಬೇಡ ಎನ್ನುವ ಆಲೋಚನೆಯಿಂದ ಎನ್.ಎಂ.ಕಿಡ್ನಿಕೇರ್ ನೆರವಿನೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದ್ದೇವೆ. ೧೫೦ ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ. ಇನ್ನು ಮುಂದೆಯೂ ಇಂತಹ ಸಮಾಜಮುಖಿ ಕೆಲಸವನ್ನು ಮುನ್ನಡೆಸಿಕೊಂಡು ಹೋಗುವುದಾಗಿ ಭರವಸೆ ನೀಡಿದರು.

ಉಚಿತ ಕಿಡ್ನಿ ಪರೀಕ್ಷೆ, ಬೋನ್‌ಮಿನರಲ್ ಡೆನ್ಸಿಟಿ, ಕೊಲ್ಯಾಸ್ಟರಲ್, ಶುಗರ್, ಇ.ಸಿ.ಜಿ. ಯುರಿಕ್ ಆಸಿಡ್, ಎಕೋ ಕಾರ್‍ಡಿಯೋಗ್ರಫಿ, ತಜ್ಞವೈದ್ಯದಿಂದ ಉಚಿತ ಸಮಾಲೋಚನೆ ನಡೆಸಲಾಯಿತು.

ಕಾಲೇಜು ನಿವೃತ್ತ ಶಿಕ್ಷಕರ ಸಂಘಗಳ ಒಕ್ಕೂಟದ ಎಂ.ಕೆ.ಪ್ರಭುದೇವ್, ಸಿ.ಬಸವರಾಜು, ಶಿವಪ್ಪ, ಗೋಪಾಲ್ ಸೇರಿದಂತೆ ಪದಾಧಿಕಾರಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

 

Share This Article
error: Content is protected !!
";