ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಧಾನಸೌಧದಲ್ಲೇ ಭಯೋತ್ಪಾದಕರನ್ನು ಕಾಂಗ್ರೆಸ್ಸಿಗರು ಇಟ್ಟುಕೊಂಡಿದ್ದಾರೆ. ಹಾಗಿದ್ದ ಮೇಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಭಯೋತ್ಪಾದಕರ ಬಗ್ಗೆ ಮಾತನಾಡಿ ಏನು ಪ್ರಯೋಜನ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರರು, ಕ್ರಿಮಿನಲ್ಗಳಿಗೆ ರಾಜಾತಿಥ್ಯದ ಬಗ್ಗೆ ಅವರು ಪ್ರತಿಕ್ರಿಯಿಸಿ ಬೆಂಗಳೂರಿನಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿಯೇ ಟೆರರಿಸ್ಟ್‌ಗಳ ಇರುವಿಕೆ ಬಗ್ಗೆ ಚರ್ಚೆ ಇಲ್ಲದಿದ್ದಾಗ, ಜೈಲಿನಲ್ಲಿರುವ ಟೆರರಿಸ್ಟ್‌ಗಳ ಕುರಿತು ಮಾತನಾಡುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವುದು ಹೊಸದಲ್ಲ. ಈ ಹಿಂದೆ ಇಬ್ಬರು ಹಿರಿಯ ಜೈಲು ಅಧಿಕಾರಿಗಳ ನಡುವೆ ಜವಾಬ್ದಾರಿ ನಿರ್ವಹಣೆ ಮತ್ತು ವೈಫಲ್ಯಗಳ ವಿಷಯವಾಗಿ ದೊಡ್ಡ ಮಟ್ಟದ ರಾಜಕಾರಣ ನಡೆದಿತ್ತು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಸ್ಮರಿಸಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಅವರು ಈ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಆದರೆ, ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ವರದಿಗಳು ಮತ್ತು ವಿಡಿಯೋಗಳು ಪ್ರಸಾರವಾಗಿವೆ.
ಇಂತಹ ಪರಿಸ್ಥಿತಿಯಲ್ಲಿ ಮತ್ತೊಂದು ತನಿಖೆ ನಡೆಸುವುದು ಕೇವಲ ಕಾಲಹರಣ ಮತ್ತು ವಿಷಯ ಮರೆಮಾಚುವ ಯತ್ನ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ವಾಸ್ತವ ಏನೆಂಬುದು ರಾಜ್ಯದ ಜನತೆಯ ಮುಂದೆಯೇ ಇದ್ದಾಗ, ಹೊಸ ತನಿಖೆಯ ಅಗತ್ಯವೇನು ಎಂದು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

