ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ರಾಜಕಾರಣ ಮಾಡುವುದನ್ನು ಬಿಟ್ಟು ರಾಜ್ಯದಲ್ಲಿ 50 ಸಾವಿರದಿಂದ 1 ಲಕ್ಷ ಜನರಿಗೆ ಉದ್ಯೋಗ ನೀಡುವ ಕೆಲಸ ಆರಂಭ ಮಾಡಲಿ. ರಾಜ್ಯ ಕಾಂಗ್ರೆಸ್ ಸರ್ಕಾರ ಕುಮಾರಸ್ವಾಮಿ ಅವರಿಗೆ ಬೇಕಾದಂತಹ ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕುಮಾರಸ್ವಾಮಿಗೆ ಉಕ್ಕು, ಕೈಗಾರಿಕೆ ಎನ್ನುವ ದೊಡ್ಡ ಹಾಗೂ ಉತ್ತಮ ಖಾತೆಯನ್ನು ಮೋದಿ ಅವರು ಕೊಟ್ಟಿದ್ದಾರೆ. ಅವರಿಗೆ ಸಿಕ್ಕಿರುವ ಒಳ್ಳೆ ಅವಕಾಶ ಬಳಸಿಕೊಂಡು ಉದ್ಯೋಗ ಸೃಷ್ಠಿಸಲಿ ಎಂದು ಡಿಸಿಎಂ ತಾಕೀತು ಮಾಡಿದರು. ಯೋಗಕ್ಕಿಂತ ಯೋಗಕ್ಷೇಮ ಮುಖ್ಯವಾದುದು.
ಹಾಸನ, ಬೆಂಗಳೂರು, ಮಂಡ್ಯ, ಬೀದರ್, ಕಲಬುರ್ಗಿ ಸೇರಿದಂತೆ ರಾಜ್ಯ ಮತ್ತು ದೇಶದ ಇತರೇ ಭಾಗಗಳಿಗೆ ಕುಮಾರಸ್ವಾಮಿ ಅವರು ಉತ್ತಮ ಕೆಲಸ ಮಾಡಿ, ಏನಾದರೂ ಸಾಕ್ಷಿ ಗುಡ್ಡೆ ಬಿಟ್ಟು ಹೋಗಲಿ. ರಾಜಕೀಯ ಇದ್ದಿದ್ದೇ, ಏಕೆ ಇಂತಹ ಅವಕಾಶವನ್ನು ಕಳೆದುಕೊಳ್ಳುತ್ತಾ ಇದ್ದಾರೆ ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು.
ಪ್ರತಿದಿನ ಎಲ್ಲರೂ ರಾಜಕೀಯ ಮಾಡುತ್ತಲೇ ಇರುತ್ತೇವೆ. ಅಭಿವೃದ್ದಿಯಿದ್ದರೇ ತಾನೇ ರಾಜಕೀಯ. ಐದು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಎತ್ತಿನಹೊಳೆ ಕೆಲಸ ಮುಗಿಸಬೇಕು, ಪ್ರಣಾಳಿಕೆಗಳಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಬೇಕು. ಪ್ರತಿದಿನ ಸಮಯ ಓಡುತ್ತಿರುತ್ತದೆಎಂದು ಡಿಕೆಶಿ ಅವರು ಹೇಳಿದರು.
ಕಾಂಗ್ರೆಸ್ 136 ಸೀಟು ಗೆದ್ದಿದೆ. ಎಲ್ಲ ಶಾಸಕರು ಒಟ್ಟಿಗೆ ಇದ್ದೇವೆ. ಇಲ್ಲಿ ಚರ್ಚೆ ಮಾಡುವಾಗ ಅಧಿಕಾರಿಗಳು ಬೇಕಾಗಿಲ್ಲ. ನಾವು ಆಲೋಚಿಸುತ್ತೇವೆ, ಚರ್ಚೆ ಮಾಡುತ್ತೇವೆ, ಅಭಿಪ್ರಾಯ ಕೇಳುತ್ತೇವೆ. ಮಾತನಾಡುವವರು ಹಾಗೂ ತೀರ್ಮಾನಿಸುವವರು ಒಬ್ಬರೇ ಎಂದು ಶಿವಕುಮಾರ್ ತಿಳಿಸಿದರು.
ಎಡಿಜಿಪಿ ಚಂದ್ರಶೇಖರ್ ವಿರುದ್ದ ಕುಮಾರಸ್ವಾಮಿ ಅವರು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಡಿಕೆಶಿ, ತನಿಖೆ ಮಾಡುವವರು ಅವರು, ತನಿಖೆಗೆ ಒಳಗಾಗುವವರು ಅವರು. ಅದಕ್ಕೂ ನನಗೂ ಸಂಬಂಧವಿಲ್ಲ ಎಂದರು.
ಮುಂದಿನ 2025 ರ ವೇಳೆಗೆ ತುಮಕೂರಿಗೆ ಎತ್ತಿನಹೊಳೆ ನೀರನ್ನು ಹರಿಸಲು ಪ್ರಯತ್ನ ಮಾಡಲಾಗುವುದು. ಈಗಾಗಲೇ ಎತ್ತಿನಹೊಳೆ ನೀರನ್ನು ಮೇಲಕ್ಕೆ ಎತ್ತಿ ಸಂಗ್ರಹ ಮಾಡಲಾಗಿದೆ. ತುಮಕೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಅರಣ್ಯ ಭೂಮಿ ಗುರುತಿಸಲಾಗಿದೆ.
ನೀರಾವರಿ ಇಲಾಖೆಗೆ ಗುರುತಿಸಿರುವ ಭೂಮಿ ವರ್ಗಾವಣೆ ಮಾಡಬೇಕು. ಈ ವಿಚಾರವಾಗಿ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅರಣ್ಯ ಸಚಿವರ ಬಳಿಯೂ ಮಾತನಾಡಲಾಗುವುದು ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.