ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿ ಖಾತಾದಿಂದ ಎ ಖಾತೆಗೆ ಆಸ್ತಿ ಪರಿವರ್ತಿಸುವ ಸರ್ಕಾರದ ಸ್ಕೀಂ ಒಂದು ಬೋಗಸ್. ಇದು ದುಡ್ಡಿ ಲೂಟಿ ಮಾಡೋ ಸ್ಕೀಂ ಇನ್ನು ಎರಡು ವರ್ಷ ಕಾಯಿರಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಜೆಡಿಎಸ್ ಕಡಿಮೆ ಬೆಲೆಗೆ ನಿಮ್ಮ ಮನೆಯ ಮಾಲೀಕತ್ವವನ್ನು ನಿಮಗೆ ಮಾಡಿಸಿಕೊಡಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರಾಜ್ಯದ ಜನರಲ್ಲಿ ಮನವಿ ಮಾಡಿದರು.
ಜೆ.ಪಿ. ಭವನದಲ್ಲಿ ಶನಿವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ದುಪ್ಪಟ್ಟು ಹಣ ಕೊಟ್ಟರೇ ಎ ಖಾತೆಗೆ ಪರಿವರ್ತನೆ ಮಾಡುತ್ತಿದ್ದಾರೆ. ಅಷ್ಟೊಂದು ಹಣ ಕೊಟ್ಟು ಬಡವರು ಹೇಗೆ ಎ ಖಾತೆ ಮಾಡಿಸುವುದು. ಈ ಮೂಲಕ ಕಾಂಗ್ರೆಸ್ ಸರ್ಕಾರ ಹಣ ಲೂಟಿ ಮಾಡುತ್ತಿದೆ. ಬಿ ಖಾತೆಯಿಂದ ಎ ಖಾತೆ ಮಾಡಿಸುವ ಸರ್ಕಾರದ ಸ್ಕೀಂ ಬೋಗಸ್ ಎಂದು ಕುಮಾರಸ್ವಾಮಿ ಆರೋಪಿಸಿದರು.
ಸರ್ಕಾರ ಲೂಟಿ ಯೋಜನೆಗೆ ಜನರು ಮರಳಾಗುವುದು ಬೇಡ. ಅವರ ಸರ್ಕಾರ ಎರಡು ವರ್ಷ ಇದೆ, ಕಾಯಿರಿ. ನೀವು ಯಾರೂ ಹಣ ಕೊಡುವ ಅಗತ್ಯ ಇಲ್ಲ. ಈ ಹಿಂದಿನ ವ್ಯವಸ್ಥೆಯಂತೆ ನಿಮ್ಮ ಆಸ್ತಿ ನಿಮಗೆ ಬರೆಸಿಕೊಡುವ ಜವಾಬ್ದಾರಿ ಜೆಡಿಎಸ್ ಪಕ್ಷದ್ದು. ನಿಮ್ಮ ಮನೆ ಹಾಳು ಮಾಡಿಕೊಳ್ಳಬೇಡಿ. ಸರ್ಕಾರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಈ ಸ್ಕೀಂಗೆ ಯಾವುದೇ ಕಾರಣಕ್ಕೂ ಮರುಳಾಗಬೇಡಿ. ನಿಮ್ಮನ್ನು ಉಳಿಸುವ ಕೆಲಸ ನಾನು ಮಾಡುತ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.
ಎ ಖಾತೆ ಮಾಡಿಸಲು ಮತ್ತೆ ಸಾಲ ಮಾಡಿಕೊಳ್ಳಬೇಡಿ. ಕಡಿಮೆ ದರದಲ್ಲಿ ನಿಮ್ಮ ಮನೆಯ ಮಾಲೀಕತ್ವವನ್ನು ನಾನು ಮಾಡಿಸಿಕೊಡುತ್ತೇನೆ. ಈ ಸವಾಲನ್ನು ನಾನು ಸ್ವೀಕಾರ ಮಾಡುತ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.
ಮುಂದಿನ ಎರಡು ವರ್ಷಗಳ ಬಳಿಕ ನಮ್ಮ ಸರ್ಕಾರ ಬರಲಿದೆ. ಇನ್ನು ಎರಡು ವರ್ಷ ಕಾಯಿರಿ. ರಾಜ್ಯದ ಜನರು ಯಾವಾಗ ಚುನಾವಣೆ ಬರುತ್ತದೆ ಎಂದು ಜನ ಕಾಯುತ್ತಿದ್ದಾರೆ.
ಯಾರ ಸರ್ಕಾರ ಬರುತ್ತದೆ ಅಂತ ಜನರು ನಿರ್ಧಾರ ಮಾಡುತ್ತಾರೆ. ನಾನು ಯಾವ ಕ್ರಾಂತಿ ಬಗ್ಗೆ ಮಾತಾಡಿಲ್ಲ. ನನಗೆ ಕ್ರಾಂತಿ- ವಾಂತಿ -ಬ್ರಾಂತಿ ಯಾವುದೂ ಇಲ್ಲ. ಕುಮಾರಸ್ವಾಮಿ ಮುಗಿದೇ ಹೋದ್ರು ಅಂತ ತುಂಬಾ ಜನ ಅಂದುಕೊಂಡಿದ್ರು. ಆದರೆ ನಾನು ಆರೋಗ್ಯವಾಗಿ ಮರಳಿ ಬಂದಿದ್ದೇನೆ. ಜನರ ಆಶೀರ್ವಾದ ನನ್ನ ಮೇಲಿದೆ. ಜನ ಚುನಾವಣೆಗೆ ಕಾಯ್ತಾ ಇದ್ದಾರೆ. ಇನ್ನೆರಡು ವರ್ಷದಲ್ಲಿ ಇದಕ್ಕೆ ಉತ್ತರ ಸಿಗುತ್ತೆ. ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಬಿರುಕಿಲ್ಲ. ಸಮಸ್ಯೆಯೂ ಇಲ್ಲ. ಮೈತ್ರಿ ಮುಂದುವರಿಯಲಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತಿಳಿಸಿದರು.
ರಾಜ್ಯ ಸರ್ಕಾರದ ಆರನೇ ಗ್ಯಾರಂಟಿಯಾಗಿ ಆಸ್ತಿಗೆ ಎ ಖಾತೆ ಕೊಡುವ ಮೂಲಕ ನಾಗರೀಕರಿಗೆ ದೀಪಾವಳಿಯ ಉಡುಗೊರೆ ನೀಡಿದ್ದೇವೆ ಎಂದು ಡಿಸಿಎಂ, ಸಿಎಂ ಜಾಹೀರಾತು ನೀಡಿದ್ದು ಜನತೆಗೆ ಟೋಪಿ ಹಾಕುವ ಕೆಲಸವಾಗಿದೆ. 1995ರಿಂದ ಬಿ ಖಾತೆ ಸಮಸ್ಯೆ ಅನುಭವಿಸುತ್ತಿದ್ದಾರೆ. 2003ರಲ್ಲಿ ಏಳು ನಗರಸಭೆ ಮಾಡಲು ತೀರ್ಮಾನ ಆಯ್ತು. ಅಭಿವೃದ್ಧಿ ಕಂಡಿಲ್ಲ ಅಂತ ಈ ತೀರ್ಮಾನ ಮಾಡಲಾಯಿತು.
ವ್ಯವಸಾಯೇತರ ಯೋಜನೆಗೆ ಪರಿವರ್ತನೆ ಮಾಡಲು ಈ ಕ್ರಮ ಕೈಗೊಳ್ಳಲಾಯಿತು. 1997ರಲ್ಲಿ ನಮ್ಮ ಸರ್ಕಾರ ಇದ್ದಾಗ ಪ್ರತಿ ಚದರ್ ಅಡಿಗೆ 110 ರೂ. ಬೆಟರ್ಮೆಂಟ್ ಶುಲ್ಕ ನಿಗದಿ ಮಾಡಿ ಖಾತೆ ವಿತರಣೆ ಮಾಡಲಾಗುತ್ತಿತ್ತು. ಅದರಂತೆ 30X40 ನಿವೇಶನ ಸಕ್ರಮಕ್ಕೆ ಸುಮಾರು 12,260 ರೂ. ಆಗುತ್ತಿತ್ತು. ಭೂ ಪರಿವರ್ತನೆ ಶುಲ್ಕವಾಗಿ 1500 ರೂ. ವಿಧಿಸಲಾಗುತ್ತಿತ್ತು ಎಂದು ಕೇಂದ್ರ ಸಚಿವರು ಹೇಳಿದರು.
ಈಗಿನ ಸರ್ಕಾರ ಆದೇಶ ಹೊರಡಿಸಿ, ಬೆಂಗಳೂರು ನಗರ ಅತ್ಯಂತ ವೇಗವಾಗಿ ವಿಸ್ತಾರಗೊಳ್ಳುತ್ತಿದೆ. ನಗರದ ಸವಾಲುಗಳನ್ನು, ಸಂಘಟಿತ ಬೆಳವಣಿಗೆಗಳನ್ನು ಕಡೆಗಣಿಸುವ ಹಾಗಿಲ್ಲ. ಈ ಅನಿಯಂತ್ರಿತ ಬೆಳವಣಿಗೆ, ಅಸುರಕ್ಷತೆ ಕಟ್ಟಡ, ಕಳಪೆ ಮೂಲಸೌಕರ್ಯ, ಕಾವೇರಿ ನೀರಿನ ಸರಬರಾಜು ಸಮಸ್ಯೆಗೆ ನಿವಾರಿಸಬೇಕಾಗಿದೆ. ಅನಧಿಕೃತ ಕಟ್ಟಡಗಳಿಗೆ ಲಕ್ಷಾಂತರ ಬಿ ಖಾತೆ ನೀಡಲಾಗಿದೆ. ಇತ್ತೀಚೆಗೆ ಮಳೆಗೆ ಬೆಂಗಳೂರಲ್ಲಿ ಬಿ ಖಾತೆಯಲ್ಲಿನ ಆಸ್ತಿಯಲ್ಲಿ ಕಟ್ಟಿದ ಕಟ್ಡಡಗಳು ಕುಸಿದು ಬಿದ್ದಿವೆ. ಅದಕ್ಕಾಗಿ ಈಗ ಎ ಖಾತೆ ಮಾಡಿದರೆ ಕುಸಿಯುವುದು ನಿಂತು ಹೋಗುತ್ತದೆ ಅಂತ ಎ ಖಾತೆ ಮಾಡುತ್ತಿದ್ದೇವೆ ಎಂದು ಆದೇಶ ಮಾಡಿದ್ದಾರೆ.
ಇದನ್ನು ಯಾರಾದರು ಒಪ್ಪುವ ಮಾತಾ?. ಹಗಲು ದರೋಡೆ ಮಾಡುತ್ತಿದ್ದೀರಿ ಎಂದು ಕುಮಾರಸ್ವಾಮಿ ಟೀಕಾಪ್ರಹಾರ ಮಾಡಿದರು. ಸರ್ಕಾರ ಈಗ ಒಸಿ, ಸಿಸಿ ಕೂಡ ಮಾಡಿದ್ದಾರೆ. ಇದರಿಂದ ಬೆಸ್ಕಾಂ ಅಧಿಕಾರಿಗಳೇ ಏನು ಉಪಯೋಗ ಇಲ್ಲ ಅಂತಿದ್ದಾರೆ ಬೆಸ್ಕಾಂ ವ್ಯಾಪ್ತಿಯಲ್ಲಿ ಸಿಸಿ, ಒಸಿಗಾಗಿ 4.50 ಲಕ್ಷ ಅರ್ಜಿ ಹಾಕಿದ್ದಾರೆ. ಒಸಿಯಿಂದ ವಿನಾಯಿತಿ ನೀಡಿದರೂ ಅನಾನುಕೂಲವೇ ಹೆಚ್ಚು ಅಂತ ಬೆಸ್ಕಾಂ ಅಧಿಕಾರಿಗಳೇ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನ.1ರಿಂದ ದೀಪಾವಳಿ ಗಿಫ್ಟ್ ರೂಪದಲ್ಲಿ 500 ರೂ. ಅರ್ಜಿ ಹಾಕಬೇಕಂತೆ. ಆನ್ಲೈನ್ ಮೂಲಕ ನೋಂದಾವಣಿ ಮಾಡಬೇಕಂತೆ. ಬಳಿಕ ಅಧಿಕಾರಿಗಳು ನಿಮ್ಮ ಮನೆಗೆ ಬರುತ್ತಾರಂತೆ. ಅವರು ವಸೂಲಿಗೆ ಬರುತ್ತಾರೋ ಗೊತ್ತಿಲ್ಲ. ಟೇಬಲ್ ಕೆಳಗೆ ಹಣ ಪಡೆಯಲು ಬರುತ್ತಾರೋ ಗೊತ್ತಿಲ್ಲ. ಈಗಾಗಲೇ ಬಿ ಖಾತೆ ಆಸ್ತಿ ಮಾಲೀಕರು 70-80ರಷ್ಟು ವಿದ್ಯುತ್, ನೀರಿನ ಸಂಪರ್ಕ ತೆಗೆದುಕೊಂಡಿದ್ದಾರೆ.
ಈಗ ಈ ಸ್ಕೀಂನಡಿ ನೀರು, ವಿದ್ಯುತ್ ಸಂಪರ್ಕ ಯಾವಾಗ ಪಡೆದಿರುತ್ತಾರೆ, ಅವತ್ತಿನಿಂದ ತೆರಿಗೆ ಹಾಕುತ್ತಾರಂತೆ. 40×30ಗೆ 5,000 ರೂ. ಮಾರ್ಗಸೂಚಿ ದರ ಇದ್ದರೆ ಆತ ಸುಮಾರು 4 ಲಕ್ಷ ರೂ.ಹಣ ಕಟ್ಟ ಬೇಕು. HSR ಬಡಾವಣೆಯಲ್ಲಿ ಎ ಖಾತೆ ಪರಿವರ್ತನೆಗೆ ಸುಮಾರು 20-30 ಲಕ್ಷ ಹಣ ಕಟ್ಟಬೇಕು. ಎಲ್ಲಿಂದ ಇಷ್ಟು ಹಣ ಬಡವರು ಕಟ್ಟಬೇಕು?. ಈ ಸರ್ಕಾರಕ್ಕೆ ಯೋಗ್ಯತೆ ಇಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.
ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ. ಲೂಟಿ ಮಾಡಲಾಗುತ್ತಿದೆ. ಇದು ಹಗಲು ದರೋಡೆ. ಖಜಾನೆ ತುಂಬಿಸಲು ಈ ಸ್ಕೀಂ ತಂದಿದ್ದಾರೆ. ಎಷ್ಟು ಜನ ಈ ಸ್ಕೀಂಗೆ ಅರ್ಜಿ ಹಾಕುತ್ತಾರೆ ನೋಡೋಣ. ನನ್ನ ಅಧಿಕಾರಾವಧಿಯಲ್ಲಿ 9 ಕೈಗಾರಿಕಾ ಕ್ಲಸ್ಟರ್ ಮಾಡುವುದಾಗಿ ಘೋಷಿಸಿದ್ದೆ. ಅದು ಯಾವುದೂ ಟೇಕ್ ಆಫ್ ಆಗಿಲ್ಲ. ಐದು ವರ್ಷ ಅಧಿಕಾರ ಇದ್ದಿದ್ದರೆ ನಾನು ಮಾಡಿ ತೋರಿಸುತ್ತಿದ್ದೆ. ಇವರಿಗೆ ಗುಂಡಿ ಮುಚ್ಚುವ ಯೋಗ್ಯತೆ ಇಲ್ಲ.
ಬಹಿರಂಗ ಚರ್ಚೆ ಇವರ ಜೊತೆ ಮಾಡಲು ಆಗುತ್ತಾ?. ಮಾತನಾಡುವ ಯೋಗ್ಯತೆ ಉಳಿಸಿಕೊಂಡಿದ್ದೀರಾ?. ಇವರ ಲೂಟಿಯ ಪಟ್ಟಿ ಕೊಡುತ್ತೇನೆ. ಧಾರಾವಾಹಿ ತರ ಇದೆ. 50 ವರ್ಷ ಆಡಳಿತ ನಡೆಸಿದ್ದೀರಾ. ನಿಮ್ಮ ಯೋಗ್ಯತೆಗೆ ಎಷ್ಟು ಸಬ್ಸ್ಟೇಷನ್ ಮಾಡಿದ್ದೀರಾ?, ಎಷ್ಟು ಶಾಲೆಗಳನ್ನು ಕಟ್ಟಿದ್ದೀರಾ ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದರು.

