ಕುಮಾರಸ್ವಾಮಿ ಅವರ ಜಮೀನು ಸರ್ವೇಗೆ ಚಾಲನೆ ನೀಡಿದ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ರಾಮನಗರ:
ಕೇಂದ್ರ ಸಚಿವ ಹೆಚ್​​. ಡಿ. ಕುಮಾರಸ್ವಾಮಿ ಅವರ ಕುಟುಂಬ ಸದಸ್ಯರು ಹಾಗೂ ಸಂಬಂಧಿಗಳು ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಸರ್ಕಾರಿ ಜಮೀನು ಕಬಳಿಸಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಿಂದ ಸರ್ವೇ ಕಾರ್ಯ ಆರಂಭಿಸಿದೆ.

ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ರೆವಿನ್ಯೂ ಇನ್ಸ್‌ಪೆಕ್ಟರ್‌ಪ್ರಕಾಶ್ ಹಾಗೂ ಗ್ರಾಮ ಆಡಳಿತಾಧಿಕಾರಿ ವಿಶಾಲಾಕ್ಷಿ ನೇತೃತ್ವದಲ್ಲಿ ಸರ್ವೇ ಕಾರ್ಯ ಆರಂಭಿಸಿದ್ದು, ಸರ್ವೇ ನಂಬರ್ ಗಳಾದ 7, 8, 9, 10,16,17 ಹಾಗೂ 79 ಇಷ್ಟು ಗೋಮಾಳ ಸರ್ವೆ ನಂಬರ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ. ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ, ಸಹೋದರಿ ಅನುಸೂಯ ಮಂಜುನಾಥ್ ಹಾಗೂ ಸಂಬಂಧಿ ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಹೆಸರಿನಲ್ಲಿರುವ 110 ಎಕರೆಗೂ ಹೆಚ್ಚು ಜಮೀನನ್ನು ಸರ್ವೇ ನಡೆಸಿದ್ದಾರೆ. ಸತತ ಎರಡು ದಿನಗಳಿಂದಲೂ ಸರ್ವೇ ಕಾರ್ಯ ನಡೆಯುತ್ತಲೇ ಇದೆ.

- Advertisement - 

ಆರೋಪವೇನು? ಹೆಚ್​.ಡಿ. ಕುಮಾರಸ್ವಾಮಿ ಮತ್ತು ಸಂಬಂಧಿ ಮಾಜಿ ಶಾಸಕ ಡಿ. ಸಿ. ತಮ್ಮಣ್ಣ ವಿರುದ್ಧ ಕೇತಗಾನಹಳ್ಳಿ ಬಳಿ 14 ಎಕರೆ ಸರ್ಕಾರಿ ಜಮೀನನ್ನು ಕಬಳಿಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಮಾಜಿ ಸಂಸದ ದಿವಂಗತ ಜಿ. ಮಾದೇಗೌಡರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದರ ಸಮಗ್ರ ತನಿಖೆ ನಡೆಸಬೇಕು ಎಂದು ಕಂದಾಯ ಇಲಾಖೆಗೆ ಲೋಕಾಯುಕ್ತರು 2014ರಲ್ಲಿ ಆದೇಶಿಸಿದ್ದರು. ಲೋಕಾಯುಕ್ತರ ಆದೇಶವನ್ನು ಹೈಕೋರ್ಟ್‌ಕೂಡ ಎತ್ತಿಹಿಡಿದಿತ್ತು.

ಆದರೆ, ಹೈಕೋರ್ಟ್ ಆದೇಶ ಪಾಲಿಸಿಲ್ಲ ಎಂದು ದೂರಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್. ಆರ್​. ಹಿರೇಮಠ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಬಳಿಕ ಕ್ರಮ ಕೈಗೊಂಡಿರುವ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಈ ಸರ್ವೇ ಕಾರ್ಯ ಆರಂಭಗೊಂಡಿದೆ. ಸರ್ವೇ ಮುಗಿಸಿದ ಬಳಿಕ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ನಂತರ ಕೋರ್ಟ್​ಗೆ ಸಲ್ಲಿಕೆ ಮಾಡಲಿದ್ದಾರೆ ಎಂದು ವರದಿಯಾಗಿದೆ.

- Advertisement - 

ಸಂಸದ ಡಾ. ಸಿ.ಎನ್​. ಮಂಜುನಾಥ್ ಈಗಾಗಲೇ ಪ್ರತಿಕ್ರಿಯೆ ನೀಡಿದ್ದು “ಕೇತಗಾನಹಳ್ಳಿ ಜಮೀನಿನ ಸರ್ವೇ ಕಾರ್ಯ ನಡೆಯಲಿ, ಕಾನೂನು ಪ್ರಕಾರ ಹೇಗಿರುತ್ತೆ ಹಾಗೆ ಮಾಡಲಿ. ನಾನು ಲೋಕಸಭೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ವೇಳೆಯೇ ನನ್ನ ಆಸ್ತಿ ಘೋಷಣೆಯಲ್ಲಿಯೇ ಕೇತಗಾನಹಳ್ಳಿಯಲ್ಲಿರುವ ಜಮೀನಿನ ಬಗ್ಗೆ ಉಲ್ಲೇಖ ಮಾಡಿದ್ದೇನೆ. ಅದು ನಮ್ಮ ತಂದೆಯವರು ಕಾಲವಾದ ಮೇಲೆ ನನ್ನ ಹೆಸರಿಗೆ ಬಂದಿದೆ. ಮಂಜುನಾಥ್​ ಅವರು ಸಂಸದರಾದ ಮೇಲೆ 71 ಎಕರೆ ಜಮೀನು ಮಾಡಿದ್ದಾರೆಂದು ಕೆಲವರು ಆರೋಪ ಮಾಡುತ್ತಿದ್ದಾರೆ. ನಾನು ಸಂಸದನಾದ ಮೇಲೆ 71 ಇಂಚು ಕೂಡ ಆಸ್ತಿ ಮಾಡಿಲ್ಲ. ಕೇತಗಾನಹಳ್ಳಿಯಲ್ಲಿ 1996ರಲ್ಲಿ ನಮ್ಮ ತಂದೆ 3.5 ಎಕರೆ ಜಮೀನು ಖರೀದಿ ಮಾಡಿದ್ದರು. ಅವರು ಕಾಲವಾದ ಮೇಲೆ ನಮ್ಮ ಹೆಸರಿಗೆ ಬಂದಿದೆ. ಇದು ವಾಸ್ತವ ವಿಚಾರ ಎಂದು ತಿಳಿಸಿದ್ದರು.

ಮತ್ತೊಂದೆಡೆ ಕೇಂದ್ರ ಸಚಿವ ಕುಮಾರಸ್ವಾಮಿ ಕೂಡ ಪ್ರತಿಕ್ರಿಯಿಸಿದ್ದು, ರಾಜಕೀಯ ಪ್ರೇರಿತ ಸರ್ವೇ ಕಾರ್ಯ ನಡೆಸುತ್ತಾರೆ. ಸರ್ವೇ ಮಾಡುವುದಕ್ಕೂ ಅದರದ್ದೇ ಆದ ನಿಯಮಗಳಿವೆ. ಆದರೆ ಅಧಿಕಾರಿಗಳು ನಿಯಮ ಪಾಲಿಸುತ್ತಿಲ್ಲ. ಸರ್ಕಾರ ನನ್ನ ಮೇಲೆ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದರು.

 

Share This Article
error: Content is protected !!
";