ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ಬರ ಪೀಡಿತ ಚಿತ್ರದುರ್ಗ ಜಿಲ್ಲೆ ಸೇರಿದಂತೆ ರಾಜ್ಯದ ಇತರೆ ಹಿಂದುಳಿದ ಜಿಲ್ಲೆಗಳು ಸಂಪೂರ್ಣ ನೀರಾವರಿ ಪ್ರದೇಶವಾಗಲು ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಹರಿಯಬ್ಬೆ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನ ಹಾಗೂ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತನ್ನೂ ಕರಾರುವಕ್ಕಾಗಿ ಎಂದೂ ಈಡೇರಿಸಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಗೆದ್ದ ಅವಧಿಗಿಂತ ಜೆಡಿಎಸ್ ಅಭ್ಯರ್ಥಿ ಗೆದ್ದ ಅವಧಿಯಲ್ಲೇ ಅತಿ ಹೆಚ್ಚು ಅಭಿವೃದ್ಧಿ ಕೆಲಸಗಳು ಈ ಕ್ಷೇತ್ರದಲ್ಲಿ ಆಗಿದೆ. ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚಿನ ಕಾರ್ಯಕರ್ತರು ಹಿರಿಯೂರು ತಾಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕಿದ್ದಾರೆ. ಗೊಂದಲ ಮಾಡಿಕೊಳ್ಳದೆ ಕಾರ್ಯಪ್ರವೃತ್ತರಾದರೆ ಇಲ್ಲಿ ನಮ್ಮನ್ನು ತಡೆಯುವುದು ಯಾರಿಂದಲೂ ಆಗುವುದಿಲ್ಲ ಎಂದು ನಿಖಿಲ್ ಹೇಳಿದರು.
ಕುಮಾರಸ್ವಾಮಿಯವರು ಸಿಎಂ ಆಗಿದ್ದ ವೇಳೆ ಭದ್ರಾ ಯೋಜನೆಯಲ್ಲಿನ ಹಲವು ತೊಡಕುಗಳನ್ನು ನಿವಾರಿಸಿ ಮೊದಲ ಹಂತದ ಕಾಮಗಾರಿಗೆ ಚಾಲನೆ ಕೊಟ್ಟದ್ದರು. ಜಿಲ್ಲೆಯ ರೈತರು ಕಷ್ಟಜೀವಿಗಳು ಸ್ವಾಭಿಮಾನಿಗಳಿದ್ದು ಈಗಿನ ಸರ್ಕಾರ ನಿಮಗೇನು ಕೊಟ್ಟಿದೆ ಎಂಬುದನ್ನು ಅವಲೋಕನ ಮಾಡಿಕೊಳ್ಳಿ ಎಂದು ತಿಳಿಸಿದರು.
ರಾಜ್ಯದಲ್ಲಿ ಇಷ್ಟು ಬೇಗ ಪ್ರವಾಸಗಳನ್ನು ಕೈ ಗೊಂಡಿರುವುದರಲ್ಲಿ ನನ್ನ ಸ್ವಾರ್ಥ ಏನೂ ಇಲ್ಲ. ಪಕ್ಷವನ್ನು ತಳಮಟ್ಟದಿಂದ ಸದೃಢವಾಗಿ ಕಟ್ಟಲು ತಯಾರಿ ನಡೆಸಲಾಗಿದೆ. ಅಲ್ಪ ಅಧಿಕಾರದ ಅವಧಿಯಲ್ಲಿ ಹೆಚ್ಚಿನ ಕಾರ್ಯಕ್ರಮ, ಯೋಜನೆಗಳನ್ನು ಕುಮಾರಸ್ವಾಮಿಯವರು ನೀಡಿದ್ದಾರೆ. ಬಿಜೆಪಿ ವರಿಷ್ಟರ ಆಸೆಯಂತೆ ಕುಮಾರಸ್ವಾಮಿ ಎಂಪಿ ಚುನಾವಣೆಗೆ ಸ್ಪರ್ಧಿಸಿದ್ದರು.
ಕುಮಾರಸ್ವಾಮಿಯವರ ನಾಯಕತ್ವ ರಾಜ್ಯಕ್ಕೆ ಮುಂದೆ ಸಿಗುತ್ತದೆ. ಸಮೃದ್ಧ ಕರ್ನಾಟಕದ ಪಕ್ಷದ ಕನಸು ಈಡೇರಲಿದೆ. 5 ಗ್ಯಾರಂಟಿಗಳ ಹೆಸರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಅವರು ಕೊಟ್ಟ ಮಾತನ್ನು ಯಾವುದನ್ನು ಕರಾರುವಕ್ಕಾಗಿ ಈಡೇರಿಸಿದೆ ಹೇಳಿ ಎಂದು ನಿಖಿಲ್ ಪ್ರಶ್ನಿಸಿದರು?.
ಜೆಡಿಎಸ್ ಕೇವಲ ಹಳೇ ಮೈಸೂರು ಭಾಗಕ್ಕೆ ಸೀಮಿತ ಅಂತಲ್ಲ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಉತ್ತರ ಕರ್ನಾಟಕದ ಕಡೆಯೂ ಪಕ್ಷ ಸಂಘಟಿಸಲಾಗುವುದು. ಕಾರ್ಯಕರ್ತರು ದೃತಿಗೆಡುವ ಅವಶ್ಯಕತೆ ಇಲ್ಲ.
ಇದು ರೈತರ, ದೀನ ದಲಿತರ ಪಕ್ಷ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ರೈತರಿಗೆ ರಸಗೊಬ್ಬರ ಸಿಗುತ್ತಿಲ್ಲ. ವಿದ್ಯುತ್ ಪರಿವರ್ತಕ ಹಿಂದೆ 25 ಸಾವಿರ ಸಿಗುತ್ತಿತ್ತು. ಇದೀಗ 2 ರಿಂದ 3 ಲಕ್ಷ ಕಟ್ಟಬೇಕಾಗಿದೆ. ಕಾಂಗ್ರೆಸ್ ಆಡಳಿತದ ಸಮಯದಲ್ಲಿ ರೈತ ಆತ್ಮಹತ್ಯೆಯ ಸಂಖ್ಯೆ ಹೆಚ್ಚಿದ್ದವು. ಭದ್ರಾ ಮೇಲ್ದoಡೆ ಯೋಜನೆ ಕಾಮಗಾರಿ ಇನ್ನೂ ಮುಗಿದಿಲ್ಲ.
ಜಿಲ್ಲೆ ನೀರಾವರಿ ಕಾಣಬೇಕಾದರೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ವಾಣಿ ವಿಲಾಸ ಸಕ್ಕರೆ ಕಾರ್ಖಾನೆಗೆ ಮರು ಜೀವ ಕೊಡುವ ಯೋಜನೆ ರೂಪಿಸಲಾಗುವುದು. ಕಾಡು ಗೊಲ್ಲರಿಗೆ ಎಸ್ ಟಿ ಮೀಸಲಾತಿ ಕೊಡಿಸುವ ಬಗ್ಗೆ ದೇವೇಗೌಡರು ಪ್ರಧಾನಿಯವರ ಜೊತೆ ಮಾತಾಡಿದ್ದಾರೆ. ಕಾಡುಗೊಲ್ಲರನ್ನು ಎಸ್ ಟಿ ಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ತಾಲೂಕಿನ ಆಗು ಹೋಗುಗಳ ಬಗ್ಗೆ ನನಗೆ ಮಾಹಿತಿ ಇದೆ. ಮುಖಂಡರನ್ನು ಕೂರಿಸಿಕೊಂಡು ಮೀಟಿಂಗ್ ಮಾಡುತ್ತೇನೆ. ಗೊಂದಲದ ವಾತಾವರಣ ಬಗೆಹರಿಸುತ್ತೇನೆ. ಗ್ರಾಪಂ, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ಬರಲಿವೆ. ಹಿಂದಿನದು ನನಗೆ ಬೇಡ. ಮುಖಂಡರು ಇಂದಿನಿಂದ ಪ್ರತಿ ಗ್ರಾಮಕ್ಕೂ ಹೋಗಬೇಕು. ಅಲ್ಲಿನ ಪ್ರಾಮಾಣಿಕರನ್ನು ಗುರುತಿಸಬೇಕು. ಅವರಿಗೆ ಜವಾಬ್ದಾರಿ ನೀಡಬೇಕು. ನಾನೂ ಸಹ ಹಿರಿಯೂರಿಗೆ ನಿರಂತರವಾಗಿ ಬರುತ್ತೇನೆ ಎಂದು ನಿಖಿಲ್ ಭರವಸೆ ನೀಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ಜಯಣ್ಣ ಮಾತನಾಡಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದ ಶಾಸಕರು ತಾಲೂಕಲ್ಲಿ ಇರಲೇಬೇಕು. ಕಾಂಗ್ರೆಸ್ ಸರ್ಕಾರ ಬಿಟ್ಟಿ ಭಾಗ್ಯಗಳನ್ನು ದೊಡ್ಡ ಸಾಧನೆ ಅಂದುಕೊಳ್ಳುತ್ತಿದೆ. ಅವರ ಶಾಸಕರುಗಳೇ ಅನುದಾನ ಸಿಗುತ್ತಿಲ್ಲ ಎಂದು ಆಪಾದಿಸುತ್ತಿದ್ದಾರೆ. ಹಾಗಾಗಿ ಬರುವ ದಿನಗಳಲ್ಲಿ ಜಿಲ್ಲೆಯಲ್ಲಿ 4-5 ಶಾಸಕರುಗಳನ್ನು ಪಕ್ಷ ಕಾಣಬೇಕು ಎಂದು ಹೇಳಿದರು.
ಜೆಡಿಎಸ್ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂ.ರವೀಂದ್ರಪ್ಪ ಮಾತನಾಡಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಹುಮ್ಮಸ್ಸು ಪ್ರತಿಯೊಬ್ಬ ಕಾರ್ಯಕರ್ತರಲ್ಲಿದೆ. ನಾವು ನಾಲ್ಕು ಬಾರಿ ಚುನಾವಣೆ ಸೋತಿದ್ದೇವೆ. ಕಾರಣ ಹುಡುಕಬೇಕಿದೆ. ನಮ್ಮಲ್ಲಿರುವಷ್ಟು ಪ್ರಾಮಾಣಿಕ ಕಾರ್ಯಕರ್ತರು ಬೇರಾವ ಪಕ್ಷದಲ್ಲೂ ಇಲ್ಲ. ಬರುವ ಚುನಾವಣೆಯಲ್ಲಿ ನಾವು ಜೆಡಿಎಸ್ ಪಕ್ಷದ ಶಾಸಕರನ್ನು ನೋಡಲೇಬೇಕು. ಎಲ್ಲಾ ಕಾರ್ಯಕರ್ತರು ಸೈನಿಕರಂತೆ ಕೆಲಸ ಮಾಡಿ ಪಕ್ಷ ಕಟ್ಟಬೇಕು. ನಿಖಿಲ್ ಕುಮಾರಸ್ವಾಮಿಯವರ ಮಾರ್ಗದರ್ಶನದಲ್ಲಿ ಬರಲಿರುವ ಎಲ್ಲಾ ಚುನಾವಣೆ ಎದುರಿಸೋಣ ಎಂದು ಕರೆ ನೀಡಿದರು.
ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ ಯಶೋಧರ್, ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ, ಮಾಜಿ ಶಾಸಕ ತಿಮ್ಮರಾಯಪ್ಪ, ವಿಪ ಮಾಜಿ ಸದಸ್ಯ ತಿಪ್ಪೇಸ್ವಾಮಿ, ವಕೀಲ ಶಿವಶಂಕರ್ ಮುಂತಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ,
ಮಾಜಿ ಜಿಪಂ ಸದಸ್ಯ ಎಸ್ ಆರ್ ಗೌಡ, ಕಲ್ಲೇ ರುದ್ರೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕನ್ಯಾಕುಮಾರಿ, ಬಸವರಾಜ್, ಜೆಜೆ ಹಳ್ಳಿ ಮಂಜುನಾಥ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗಿರಿಜಪ್ಪ, ಎಸ್ ಡಿ ಹನುಮಂತರಾಯ, ಮದ್ದಿಹಳ್ಳಿ ಹನುಮಂತರಾಯ, ಜಲ್ದಪ್ಪ, ಶಂಕರಮೂರ್ತಿ, ಉಗ್ರೇಶ್, ಸಿ ನಾಗರಾಜ, ಶಿರಾ ಜೆಡಿಎಸ್ ಅಧ್ಯಕ್ಷ ಸತ್ಯಪ್ರಕಾಶ್ ಮುಂತಾದವರು ಹಾಜರಿದ್ದರು.

