ಸಾಧಕರಾದ ಕುಂಬಾರ, ಮಹಾಬಲೇಶ್ವರ ಯುವಜನರಿಗೆ ಪ್ರೇರಕ ಶಕ್ತಿ: ಪ್ರೊ.ಸಿದ್ದಪ್ಪ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಹಂಗೇರಿಯ ಮಿಸ್ಕೊಲ್ಕ್ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ
.ಬಿ.ಡಿ.ಕುಂಬಾರ ಮತ್ತು ಗೌರವ ಪ್ರಾಧ್ಯಾಪಕ ಪುರಸ್ಕಾರಕ್ಕೆ ಪಾತ್ರರಾದ ಪ್ರೊ.ಯು.ಎಸ್.ಮಹಾಬಲೇಶ್ವರ ಅವರನ್ನು ವಿಶ್ವವಿದ್ಯಾನಿಲಯದಲ್ಲಿ ಸನ್ಮಾನಿಸಲಾಯಿತು.

- Advertisement - 

ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘದ ವತಿಯಿಂದ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಕುಂಬಾರ ಮತ್ತು ಪ್ರೊ. ಮಹಾಬಲೇಶ್ವರ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಸಿದ್ದಪ್ಪ ಸನ್ಮಾನಿಸಿ, ಅಭಿನಂದಿಸಿದರು.

- Advertisement - 

ನಂತರ ಮಾತನಾಡಿದ ಪ್ರೊ.ಸಿದ್ದಪ್ಪ, ಇದೊಂದು ಅಪೂರ್ವ ಕ್ಷಣ. ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿ, ವಿದೇಶಿ ವಿಶ್ವವಿದ್ಯಾನಿಲಯ ಗೌರವಿಸುವುದು ಹೆಮ್ಮೆಯ ವಿಷಯ. ಇದು ವಿಶ್ವವಿದ್ಯಾನಿಲಯ ಮಾತ್ರವಲ್ಲ, ಇಡೀ ದಾವಣಗೆರೆ ಜಿಲ್ಲೆಗೂ ಅಭಿಮಾನದ ಸಂಗತಿ. ಇವರ ಸಾಧನೆ ಇತರರಿಗೆ ಮಾದರಿ ಮತ್ತು ಪ್ರೇರಣೆಯಾಗಿದೆ. ಯುವ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದು ನುಡಿದರು.

ಹಳ್ಳಿಗಾಡಿನ ಪ್ರದೇಶದಲ್ಲಿ ಬೆಳೆದು, ಶ್ರದ್ಧಾಪೂರ್ಣ ಅಧ್ಯಯನ ಮತ್ತು ಸತತ ಪ್ರಯತ್ನದಿಂದ ವಿಶ್ವದ ಶ್ರೇಷ್ಠ ವಿಜ್ಞಾನಿಗಳಾಗಿ ಗುರುತಿಸಿಕೊಂಡಿದ್ದಾರೆ. ಹಳ್ಳಿಯಿಂದ ಹಂಗೇರಿಯವರೆಗೆ ಬೆಳೆದ ಇವರ ಸಾಧನೆಯನ್ನು ಗೌರವಿಸುವ ಮೂಲಕ ವಿಶ್ವವಿದ್ಯಾನಿಲಯ ತನ್ನನ್ನು ತಾನೇ ಗೌರವಿಸಿಕೊಂಡಿದೆ ಎಂದು ತಿಳಿಸಿದರು.

- Advertisement - 

ದಾವಣಗೆರೆ ವಿಶ್ವವಿದ್ಯಾಲಯಕ್ಕೆ ದೊಡ್ಡ ಸಂಖ್ಯೆಯ ಯುವ ಅಧ್ಯಾಪಕರು ಶಕ್ತಿಯಾಗಿದ್ದಾರೆ. ಅವರಲ್ಲಿರುವ ಸಾಮರ್ಥ್ಯ, ಸಂಶೋಧನಾಸಕ್ತಿ ಮತ್ತು ಉನ್ನತ ಗುರಿ ತಲುಪುವ ಉದ್ದೇಶಗಳಿಗೆ ಪ್ರೋತ್ಸಾಹ ನೀಡುವ ವಾತಾವರಣ ನಿರ್ಮಾಣವಾಗಬೇಕು. ಅಧ್ಯಾಪಕರು ವೈಯಕ್ತಿಕ ಹಿತಾಸಕ್ತಿಗೆ ಆದ್ಯತೆ ನೀಡದೇ ಸಾಂಘಿಕವಾಗಿ ಮತ್ತು ಸಂಘಟಿತವಾಗಿ ಬಹುಶಿಸ್ತೀಯ ಅಧ್ಯಯನ, ಸಂಶೋಧನೆಗಳತ್ತ ಗಮನ ನೀಡಬೇಕು. ಇದು ಹೆಚ್ಚು ಯಶಸ್ಸನ್ನು ತರಲು ನೆರವಾಗುತ್ತದೆ ಎಂದರು.

ಸನ್ಮಾನ ಸ್ವೀಕರಿಸಿದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಮನಸ್ಸಿದ್ದರೆ ಮಾರ್ಗ ಸಿಕ್ಕೇ ಸಿಗುತ್ತದೆ. ಆದರೆ ಆ ನಿಟ್ಟಿನಲ್ಲಿ ವೈಯಕ್ತಿಕ ಪ್ರಯತ್ನವೂ ಮುಖ್ಯವಾಗಿದೆ. ಲಭ್ಯವಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಕ್ರಿಯಾಶೀಲ ತತ್ವವನ್ನು ಅನುಸರಿಸುತ್ತ, ವೃತ್ತಿ ಬದುಕನ್ನು ನಿರ್ವಹಿಸಬೇಕು. ಅಧ್ಯಯನ, ಅಧ್ಯಾಪನ, ಸಂಶೋಧನೆಗಳ ಜೊತೆಗೆ ಸಮಾಜಮುಖಿ ಚಿಂತನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ವಿದೇಶಿ ವಿಶ್ವವಿದ್ಯಾಲಯಗಳಂತೆ ಭಾರತದ ವಿಶ್ವವಿದ್ಯಾಲಯಗಳೂ ಸಂಶೋಧನೆಗೆ ಅವಕಾಶ ನೀಡುತ್ತಿದೆ. ಆದರೆ ಶ್ರದ್ದೆ, ಆಸಕ್ತಿ ಮತ್ತು ಕತೃತ್ವಶಕ್ತಿಯ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ನಿರ್ದಿಷ್ಟ ಗುರಿ ಇಟ್ಟುಕೊಂಡು ಸಾಧನೆ ಮಾಡಿದರೆ, ಸಂಶೋಧನೆಯಲ್ಲಿ ತೊಡಗಿಸಿಕೊಂಡರೆ ಫಲ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿದ ಪ್ರೊ.ಯು.ಎಸ್.ಮಹಾಬಲೇಶ್ವರ ಮಾತನಾಡಿ, ‘ನನ್ನ ಸಾಧನೆಯ ಹಿಂದೆ ಹಲವಾರು ಕೈಗಳ ಸಹಾಯವಿದೆ. ಕಷ್ಟದಲ್ಲಿದ್ದಾಗ ತುತ್ತು ನೀಡಿ ಪ್ರೋತ್ಸಾಹಿಸಿದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಪ್ರೊ.ಸಿದ್ದಪ್ಪ, ಪ್ರೊ. ರುದ್ರಪ್ಪ ಅವರನ್ನು ಪ್ರತಿಕ್ಷಣವೂ ಸ್ಮರಿಸಿಕೊಳ್ಳುತ್ತೇನೆ. ನಾವು ಎಷ್ಟೇ ಸಾಧನೆ ಮಾಡಿದರೂ ನಡೆದು ಬಂದ ದಾರಿ, ಸಹಾಯ ಮಾಡಿದವರನ್ನು ಮರೆಯಬಾರದು. ಅವು ನಮ್ಮ ಬೆಳವಣಿಗೆಗೆ, ಸಾಧನೆಗೆ ನೆರವಾಗುವ ಅಭಯಹಸ್ತಗಳು ಎಂದರು.

ಇದೇ ಸಂದರ್ಭದಲ್ಲಿ ಗಣಿತಶಾಸ್ತ್ರ ಅಧ್ಯಯನ ವಿಭಾಗದ ಪ್ರೊ.ಬಿ.ಸಿ.ಪ್ರಸನ್ನಕುಮಾರ, ಶಿಕ್ಷಣ ನಿಕಾಯದ ಡೀನ್ ಪ್ರೊ.ಕೆ.ವೆಂಕಟೇಶ ಅವರನ್ನು ಸನ್ಮಾನಿಸಲಾಯಿತು. ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ್, ಹಣಕಾಸು ಅಧಿಕಾರಿ ದ್ಯಾಮನಗೌಡ ಮುದ್ದನಗೌಡ್ರ, ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಶಿವಕುಮಾರ ಕಣಸೋಗಿ ಮಾತನಾಡಿದರು. ಕುಲಸಚಿವ ಎಸ್.ಬಿ.ಗಂಟಿ ಅಧ್ಯಕ್ಷತೆ ವಹಿಸಿದ್ದರು. ಡಾ.ನಾಗಭೂಷಣಗೌಡ ಸ್ವಾಗತಿಸಿದರು. ಪ್ರೊ.ಪ್ರದೀಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಕೆ.ವೆಂಕಟೇಶ ವಂದಿಸಿದರು. ಅಧ್ಯಾಪಕೇತರ ಸಂಘದ ಅಧ್ಯಕ್ಷ ನಂಜಪ್ಪ ಕಾರ್ಯಕ್ರಮ ನಿರೂಪಿಸಿದರು.

 

Share This Article
error: Content is protected !!
";